ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 18 ರಂದು ಮೇಘಾಲಯ ಮತ್ತು ತ್ರಿಪುರಾಕ್ಕೆ ಭೇಟಿ ನೀಡಲಿದ್ದಾರೆ. ಶಿಲ್ಲಾಂಗ್ನಲ್ಲಿ ಪ್ರಧಾನಮಂತ್ರಿಗಳು ಈಶಾನ್ಯ ಮಂಡಳಿಯ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10:30 ರ ಸುಮಾರಿಗೆ, ಪ್ರಧಾನಮಂತ್ರಿ ಅವರು ಶಿಲ್ಲಾಂಗ್ನ ಸ್ಟೇಟ್ ಕನ್ವೆನ್ಷನ್ ಸೆಂಟರ್ನಲ್ಲಿ ಈಶಾನ್ಯ ಕೌನ್ಸಿಲ್ನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆ ನಂತರ, ಬೆಳಗ್ಗೆ 11:30ಕ್ಕೆ ಅವರು ಶಿಲ್ಲಾಂಗ್ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಅನೇಕ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಪ್ರಧಾನಮಂತ್ರಿಗಳು ಅಗರ್ತಲಾಗೆ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 2:45 ಕ್ಕೆ ಸಾರ್ವಜನಿಕ ಸಮಾರಂಭದಲ್ಲಿ ಅವರು ವಿವಿಧ ಪ್ರಮುಖ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದು ಮತ್ತು ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮೇಘಾಲಯದಲ್ಲಿ ಪ್ರಧಾನಮಂತ್ರಿ
ಈಶಾನ್ಯ ಕೌನ್ಸಿಲ್ (ಎನ್ಇಸಿ) ಸಭೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಈ ಈಶಾನ್ಯ ಕೌನ್ಸಿಲ್ ಅನ್ನು ಔಪಚಾರಿಕವಾಗಿ 7ನೇ ನವೆಂಬರ್, 1972 ರಂದು ಉದ್ಘಾಟನೆ ಮಾಡಲಾಗಿತ್ತು. NEC - ಈಶಾನ್ಯ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಮತ್ತು ಈ ಭಾಗದಲ್ಲಿರುವ ಎಲ್ಲ ರಾಜ್ಯಗಳ ವಿವಿಧ ಮೂಲಸೌಕರ್ಯ ಯೋಜನೆಗಳು ಮತ್ತು ಇತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವನ್ನು ನೀಡಿದೆ. ವಿಶೇಷವಾಗಿ ಶಿಕ್ಷಣ, ಆರೋಗ್ಯ, ಕ್ರೀಡೆ, ಜಲಸಂಪನ್ಮೂಲಗಳು, ಕೃಷಿ, ಪ್ರವಾಸೋದ್ಯಮ, ಉದ್ಯಮ ಸೇರಿದಂತೆ ವಿವಿರ ಕ್ಷೇತ್ರಗಳಿಗೆ ಬಂಡವಾಳ ಮತ್ತು ಸಾಮಾಜಿಕ ಮೂಲಸೌಕರ್ಯವನ್ನು ಹೆಚ್ಚಿಸಲು ಈ ಮಂಡಳಿಯು ನಿರಂತರ ಪ್ರಯತ್ನ ನಡೆಸಿದೆ ಮತ್ತು ನೆರವಾಗಿದೆ.
ನಂತರ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ, ಪ್ರಧಾನ ಮಂತ್ರಿಗಳು ಸುಮಾರು 2450 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಗಳ ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ.
ಈ ಪ್ರದೇಶದಲ್ಲಿ ದೂರ ಸಂಪರ್ಕ ಸೇವೆಯನ್ನು ಇನ್ನಷ್ಟು ಹೆಚ್ಚಿಸಲು 4 G ಮೊಬೈಲ್ ಟವರ್ಗಳನ್ನು ಪ್ರಧಾನಮಂತ್ರಿ ಅವರು ಸಮರ್ಪಿಸಲಿದ್ದಾರೆ, ಅದರಲ್ಲಿ 320 ಕ್ಕೂ ಹೆಚ್ಚು ಪೂರ್ಣಗೊಂಡಿದೆ ಮತ್ತು ಸುಮಾರು 890 ಇನ್ನೂ ನಿರ್ಮಾಣ ಹಂತದಲ್ಲಿವೆ. ನಂತರ ಪ್ರಧಾನಮಂತ್ರಿಗಳು ಉಮ್ಸಾವ್ಲಿಯಲ್ಲಿ ಶಿಲ್ಲಾಂಗ್ನ ಐಐಎಂ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ. ಅವರು ಶಿಲ್ಲಾಂಗ್ - ಡೀಂಗ್ಪಾಸೋಹ್ ರಸ್ತೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದು ಶಿಲ್ಲಾಂಗ್ ಸ್ಯಾಟಲೈಟ್ ಟೌನ್ಶಿಪ್ಗೆ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ. ಮೇಘಾಲಯ, ಮಣಿಪುರ ಮತ್ತು ಅರುಣಾಚಲ ಪ್ರದೇಶದ ಮೂರು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಮತ್ತು ಮೂರು ರಾಜ್ಯಗಳಲ್ಲಿ ವಿಸ್ತಾರಗೊಂಡಿರುವ ನಾಲ್ಕು ಇತರ ರಸ್ತೆ ಯೋಜನೆಗಳನ್ನು ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಉದ್ಘಾಟನೆ ಮಾಡಲಿದ್ದಾರೆ.
ಅಣಬೆ ಉತ್ಪಾದನೆಯನ್ನು ಹೆಚ್ಚಿಸಲು ಮೇಘಾಲಯದ ಅಣಬೆ ಅಭಿವೃದ್ಧಿ ಕೇಂದ್ರದಲ್ಲಿ ಅಣಬೆ ಬೆಳೆಗೆ ಪೂರಕವಾದ ಪ್ರಯೋಗಾಲಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಇದು ರೈತರು ಹಾಗೂ ಉದ್ಯಮಿಗಳಿಗೆ ಕೌಶಲ್ಯ ತರಬೇತಿಯನ್ನು ಸಹ ನೀಡಲಿದೆ. ಜೇನುಸಾಕಣೆ ಮಾಡುವ ರೈತರ ಜೀವನೋಪಾಯವನ್ನು ಸುಧಾರಿಸಲು ಮೇಘಾಲಯದಲ್ಲಿ ಸಮಗ್ರ ಉತ್ತಮ ಗುಣಮಟ್ಟದ ಹಾಗು ಉನ್ನತ ತಂತ್ರಜ್ಞಾನದ ಜೇನುಸಾಕಣೆ ಅಭಿವೃದ್ಧಿ ಕೇಂದ್ರವನ್ನು ಪ್ರಧಾನಮಂತ್ರಿಗಳು ಉದ್ಘಾಟಿಸಲಿದ್ದಾರೆ. ಇದಲ್ಲದೇ, ಮಿಜೋರಾಂ, ಮಣಿಪುರ, ತ್ರಿಪುರ ಮತ್ತು ಅಸ್ಸಾಂನಲ್ಲಿ 21 ಹಿಂದಿ ಗ್ರಂಥಾಲಯಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳಾದ್ಯಂತ ಆರು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ತುರಾ ಮತ್ತು ಶಿಲ್ಲಾಂಗ್ ಟೆಕ್ನಾಲಜಿ ಪಾರ್ಕ್ ಹಂತ-II ನಲ್ಲಿ ಇಂಟಿಗ್ರೇಟೆಡ್ ಹಾಸ್ಪಿಟಾಲಿಟಿ ಮತ್ತು ಕನ್ವೆನ್ಷನ್ ಸೆಂಟರ್ಗೆ ಅಡಿಪಾಯ ಹಾಕಲಿದ್ದಾರೆ. ಟೆಕ್ನಾಲಜಿ ಪಾರ್ಕ್ ಹಂತ-II ಸುಮಾರು 1.5 ಲಕ್ಷ ಚದರ ಅಡಿಗಳಷ್ಟು ಬೃಹತ್ ವಿಸ್ತೀರ್ಣವನ್ನು ಹೊಂದಿದೆ. ಇದು ವೃತ್ತಿಪರರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಮತ್ತು 3000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇಂಟಿಗ್ರೇಟೆಡ್ ಹಾಸ್ಪಿಟಾಲಿಟಿ ಮತ್ತು ಕನ್ವೆನ್ಷನ್ ಸೆಂಟರ್, ಕನ್ವೆನ್ಶನ್ ಹಬ್, ಅತಿಥಿ ಕೊಠಡಿಗಳು, ಫುಡ್ ಕೋರ್ಟ್ ಇತ್ಯಾದಿಗಳು ಇದರಲ್ಲಿವೆ. ಇದು ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಈ ಪ್ರದೇಶದಲ್ಲಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ಅಗತ್ಯವಾದ ಮೂಲಸೌಕರ್ಯವನ್ನು ಒದಗಿಸುತ್ತದೆ.
ತ್ರಿಪುರಾದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ
ಪ್ರಧಾನಮಂತ್ರಿಯವರು 4350 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ವಿವಿಧ ಪ್ರಮುಖ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರತಿಯೊಬ್ಬರಿಗೂ ಸ್ವಂತ ಮನೆ ಇರುವುದನ್ನು ಖಾತ್ರಿಪಡಿಸಿಕೊಳ್ಳುವತ್ತ ಪ್ರಧಾನಮಂತ್ರಿಯವರು ಹೆಚ್ಚು ಒತ್ತು ನೀಡಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚು ಆದ್ಯತೆ ನೀಡುವ ಪ್ರಮುಖ ಹೆಜ್ಜೆಯಾಗಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ - ನಗರ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಫಲಾನುಭವಿಗಳಿಗಾಗಿ ಪ್ರಧಾನ ಮಂತ್ರಿ “ಗೃಹ ಪ್ರವೇಶ್” ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ. 3400 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವ ಈ ಮನೆಗಳು 2 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಸೂರು ಒದಗಿಸುತ್ತವೆ.
ರಸ್ತೆ ಸಂಪರ್ಕವನ್ನು ಸುಧಾರಿಸಲು ಹಾಗೂ ಅಗರ್ತಲಾ ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅಗರ್ತಲಾ ಬೈಪಾಸ್ (ಖಯೇರ್ಪುರ್ - ಅಮ್ತಾಲಿ) ರಾಷ್ಟ್ರೀಯ ಹೆದ್ದಾರಿ-08 ಅಗಲೀಕರಣದ ಯೋಜನೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
PMGSY III (ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ) ಅಡಿಯಲ್ಲಿ 230 ಕಿಮೀ ಉದ್ದದ 32 ರಸ್ತೆಗಳಿಗೆ ಮತ್ತು 540 ಕಿಮೀ ದೂರದ 112 ರಸ್ತೆಗಳ ಸುಧಾರಣೆಗೆ ಶಂಕುಸ್ಥಾಪನೆಯನ್ನು ಇದೇ ಸಂದರ್ಭದಲ್ಲಿ ನೆರವೇರಿಸಲಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆನಂದ ನಗರ ಮತ್ತು ಅಗರ್ತಲಾ ಸರ್ಕಾರಿ ದಂತ ಕಾಲೇಜಿನಲ್ಲಿ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ.