ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಸುಮಾರು 16,000 ಕೋಟಿ ರೂ. ವೆಚ್ಚದ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿಯವರು ಮಧ್ಯಾಹ್ನ 12 ಗಂಟೆಗೆ ಮಂಡ್ಯದಲ್ಲಿ ಪ್ರಮುಖ ರಸ್ತೆ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ನಂತರ ಮಧ್ಯಾಹ್ನ 3:15ಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮಂಡ್ಯದಲ್ಲಿ ಪ್ರಧಾನಿ
ಮೂಲಸೌಕರ್ಯ ಯೋಜನೆಗಳ ತ್ವರಿತ ಅಭಿವೃದ್ಧಿಯು ದೇಶದಾದ್ಯಂತ ವಿಶ್ವ ದರ್ಜೆಯ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಪ್ರಧಾನ ಮಂತ್ರಿಯವರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಈ ಪ್ರಯತ್ನದ ಬಾಗವಾಗಿ, ಪ್ರಧಾನಮಂತ್ರಿಯವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಯೋಜನೆಯು ಎನ್ ಹೆಚ್ -275 ರ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗದ 6-ಪಥಗಳ ರಸ್ತೆಯನ್ನು ಒಳಗೊಂಡಿರುತ್ತದೆ. 118 ಕಿಮೀ ಉದ್ದದ ಈ ಯೋಜನೆಯನ್ನು ಒಟ್ಟು 8480 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಸುಮಾರು 3 ಗಂಟೆಗಳಿಂದ ಸುಮಾರು 75 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಇದು ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.
ಮೈಸೂರು-ಕುಶಾಲನಗರ 4 ಪಥದ ಹೆದ್ದಾರಿಗೂ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 4130 ಕೋಟಿ ರೂಪಾಯಿ ವೆಚ್ಚದಲ್ಲಿ 92 ಕಿಮೀ ಉದ್ದದ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಯು ಬೆಂಗಳೂರಿನೊಂದಿಗೆ ಕುಶಾಲನಗರದ ಸಂಪರ್ಕವನ್ನು ಸುಧಾರಿಸಲು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಪ್ರಯಾಣದ ಸಮಯವನ್ನು ಸುಮಾರು 5 ರಿಂದ ಕೇವಲ ಎರಡೂವರೆ ಗಂಟೆಗಳಿಗೆ ಇಳಿಸಲು ಸಹಾಯ ಮಾಡುತ್ತದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಧಾನಿ
ಪ್ರಧಾನಮಂತ್ರಿಯವರು ಐಐಟಿ ಧಾರವಾಡವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಫೆಬ್ರುವರಿ 2019 ರಲ್ಲಿ ಪ್ರಧಾನ ಮಂತ್ರಿಯವರು ಈ ಸಂಸ್ಥೆಗೆ ಅಡಿಪಾಯ ಹಾಕಿದ್ದರು. 850 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸಂಸ್ಥೆಯು ಪ್ರಸ್ತುತ 4-ವರ್ಷದ ಬಿ.ಟೆಕ್ ಕೋರ್ಸ್, ಅಂತರ-ಶಿಸ್ತೀಯ 5-ವರ್ಷದ ಬಿಎಸ್-ಎಂಎಸ್, ಎಂ.ಟೆಕ್ ಮತ್ತು ಪಿಎಚ್.ಡಿ. ಕೋರ್ಸ್ ಗಳನ್ನು ಹೊಂದಿದೆ.
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ಪ್ರಧಾನಿಯವರು ದೇಶಕ್ಕೆ ಸಮರ್ಪಿಸಲಿದ್ದಾರೆ. ಈ ದಾಖಲೆಯನ್ನು ಇತ್ತೀಚೆಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗುರುತಿಸಿದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ 1507 ಮೀ ಉದ್ದದ ಪ್ಲಾಟ್‌ಫಾರ್ಮ್ ನಿರ್ಮಿಸಲಾಗಿದೆ.
ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿಭಾಗದ ವಿದ್ಯುದ್ದೀಕರಣ ಮತ್ತು ನವೀಕರಣಗೊಂಡ ಹೊಸಪೇಟೆ ರೈಲು ನಿಲ್ದಾಣವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 530 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ವಿದ್ಯುದ್ದೀಕರಣ ಯೋಜನೆಯು ತಡೆರಹಿತ ರೈಲು ಕಾರ್ಯಾಚರಣೆಯನ್ನು ಸಾಧ್ಯವಾಗಿಸುತ್ತದೆ. ಹೊಸಪೇಟೆ ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡಲಾಗಿದ್ದು, ಪ್ರಯಾಣಿಕರಿಗೆ ಅನುಕೂಲಕರ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದನ್ನು ಹಂಪಿ ಸ್ಮಾರಕಗಳನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿಯ ವಿವಿಧ ಯೋಜನೆಗಳನ್ನು ಪ್ರಧಾನಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳ ಒಟ್ಟು ಅಂದಾಜು ವೆಚ್ಚ ಸುಮಾರು 520 ಕೋಟಿ ರೂ.ಗಳು. ಈ ಪ್ರಯತ್ನಗಳು ನೈರ್ಮಲ್ಯ, ಸುರಕ್ಷಿತ ಮತ್ತು ಕಾರ್ಯಸಮರ್ಥ ಸಾರ್ವಜನಿಕ ಸ್ಥಳಗಳನ್ನು ನಿರ್ಮಿಸುವ ಮೂಲಕ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ಪಟ್ಟಣವನ್ನು ಭವಿಷ್ಯದ ನಗರ ಕೇಂದ್ರವಾಗಿ ಪರಿವರ್ತಿಸುತ್ತವೆ.
ಪ್ರಧಾನಮಂತ್ರಿಯವರು ಜಯದೇವ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಆಸ್ಪತ್ರೆಯು ಈ ಪ್ರದೇಶದ ಜನರಿಗೆ ತೃತೀಯ ಹೃದ್ರೋಗ ಚಿಕಿತ್ಸೆ ಒದಗಿಸಲಿದೆ. ಈ ಪ್ರದೇಶದಲ್ಲಿ ನೀರು ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಪ್ರಧಾನ ಮಂತ್ರಿಯವರು ಧಾರವಾಡ ಬಹುಗ್ರಾಮ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದು, ಇದನ್ನು 1040 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಸುಮಾರು 150 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ತುಪ್ಪರಿಹಳ್ಳ ಪ್ರವಾಹ ಹಾನಿ ನಿಯಂತ್ರಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಯೋಜನೆಯು ಪ್ರವಾಹದಿಂದ ಉಂಟಾಗುವ ಹಾನಿಯನ್ನು ತಗ್ಗಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ತಡೆಗೋಡೆಗಳು ಮತ್ತು ಒಡ್ಡುಗಳನ್ನು ನಿರ್ಮಿಸಲಾಗುವುದು.