ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ 2023ರ ಡಿಸೆಂಬರ್ 4 ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ಧಾರೆ. ಮಧ್ಯಾಹ್ನ ಸುಮಾರು 4.15ಕ್ಕೆ ಪ್ರಧಾನಮಂತ್ರಿಗಳು ಮಹಾರಾಷ್ಟ್ರದ ಸಿಂಧುದುರ್ಗ್ ತಲುಪಲಿದ್ದು, ರಾಜ್ ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಬಳಿಕ ಅವರು, ‘ನೌಕಾ ದಿನ 2023’ ರ ಅಂಗವಾಗಿ ಸಿಂಧುದುರ್ಗ್ ನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಾರತೀಯ ನೌಕಾಪಡೆಯ ಹಡುಗುಗಳು, ಸಬ್ ಮರೀನ್, ವಿಮಾನ ಮತ್ತು ವಿಶೇಷ ಪಡೆಗಳ “ಆಪರೇಷನಲ್ ಡೆಮಾನ್ಸ್ ಟ್ರೇಷನ್ “ (ಕಾರ್ಯನಿರ್ವಹಣಾ ಪ್ರದರ್ಶನ) ಅನ್ನು ಸಿಂಧುದುರ್ಗ್ ನ ತರ್ಕರ್ಲಿ ಬೀಚ್ ನಿಂದ ವೀಕ್ಷಿಸಲಿದ್ದಾರೆ.
ಪ್ರತಿ ವರ್ಷ ಡಿಸೆಂಬರ್ 4 ರಂದು ನೌಕಾ ದಿನ ಆಚರಿಸಲಾಗುತ್ತದೆ. ಮೊದಲ ದೇಶೀಯ ವಿಮಾನವಾಹಕ ಐಎನ್ಎಸ್ ವಿಕ್ರಾಂತ್ ಅನ್ನು ಸಮರ್ಪಿಸಿದ ಸಂದರ್ಭದಲ್ಲಿ ಕಳೆದ ವರ್ಷ ಅಳವಡಿಸಿಕೊಳ್ಳಲಾದ ನೌಕಾ ಧ್ವಜಕ್ಕೆ ಪ್ರೇರಣೆ ನೀಡಿದ ಛತ್ರಪತಿ ಶಿವಾಜಿ ಮಹಾರಾಜರ ಶ್ರೀಮಂತ ಕಡಲ ಪರಂಪರೆಗೆ ನೌಕಾ ದಿನ 2023ರ ಅಂಗವಾಗಿ ಗೌರವ ನಮನ ಸಲ್ಲಿಸಲಾಗುವುದು.
ಪ್ರತಿ ವರ್ಷ ನೌಕಾ ದಿನದ ಅಂಗವಾಗಿ, ಭಾರತೀಯ ನೌಕೆಯ ಹಡಗುಗಳು, ಸಬ್ ಮರೀನ್, ವಿಮಾನ ಮತ್ತು ವಿಶೇಷ ಪಡೆಗಳಿಂದ “ಆಪರೇಷನಲ್ ಡೆಮಾನ್ಸ್ ಟ್ರೇಷನ್” ಆಯೋಜನೆ ನಡೆಸುವ ಸಂಪ್ರದಾಯವಿದೆ. ಈ “ಆಪರೇಷನಲ್ ಡೆಮಾನ್ಸ್ ಟ್ರೇಷನ್” ಗಳು ಬಹು-ಆಯಾಮದ ಕಾರ್ಯಾಚರಣೆಗಳ ವೈವಿಧ್ಯತೆಯನ್ನು ಸಾರ್ವಜನಿಕರು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ನಾಗರಿಕರಿಗೆ ಸಾಗರ ಜ್ಞಾನ ಹಂಚುವ ಜೊತೆಗೆ ಸಾರ್ವಜನಿಕರಿಗಾಗಿ ದೇಶದ ಭದ್ರತೆಗೆ ನೌಕಾಪಡೆಯ ಕೊಡುಗೆಗಳ ಬಗ್ಗೆಯೂ ಬೆಳಕು ಚೆಲ್ಲುತ್ತದೆ.