ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ರ ಆಗಸ್ಟ್ 30 ರಂದು ಮಹಾರಾಷ್ಟ್ರದ ಮುಂಬೈ ಮತ್ತು ಫ;ಲ್ಘರ್ ಗೆ ಭೇಟಿ ನೀಡಲಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಸಮ್ಮೇಳನ ಸಭಾಂಗಣದಲ್ಲಿ ಪ್ರಧಾನಮಂತ್ರಿಯವರು ಬೆಳಿಗ್ಗೆ 11 ಗಂಟೆಗೆ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ [ಜಿಎಫ್ಎಫ್] 2024 ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ತರುವಾಯ ಮಧ್ಯಾಹ್ನ 1;30ಕ್ಕೆ ಪ್ರಧಾನಮಂತ್ರಿಯವರು ಫಲ್ಘರ್ ನ ಸಿಐಡಿಸಿಒ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಮುಂಬೈನಲ್ಲಿ ಪ್ರಧಾನಮಂತ್ರಿ
ಮುಂಬೈನಲ್ಲಿ ಫಿನ್ ಟೆಕ್ ಫೆಸ್ಟ್ [ಜಿಎಫ್ಎಫ್] 2024 ಉದ್ದೇಶಿಸಿ ಪ್ರಧಾನಮಂತ್ರಿ ಅವರು ಭಾಷಣ ಮಾಡಲಿದ್ದಾರೆ. ಇಂಡಿಯಾ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಮತ್ತು ಫಿನ್ ಟೆಕ್ ಕನ್ವರ್ಜೆನ್ಸ್ ಕೌನ್ಸಿಲ್ ಮೂಲಕ ಜಿಇಎಫ್ ಜಂಟಿಯಾಗಿ ಸಮ್ಮೇಳನ ಆಯೋಜಿಸಿದೆ. ನೀತಿ ನಿರೂಪಕರು, ನಿಯಂತ್ರಣಕರು, ಹಿರಿಯ ಬ್ಯಾಂಕರ್ ಗಳು, ಕೈಗಾರಿಕಾ ವಲಯದ ನಾಯಕರು ಮತ್ತು ಶೈಕ್ಷಣಿಕ ವಲಯ ಒಳಗೊಂಡಂತೆ ಸುಮಾರು 800 ಮಂದಿ ಭಾಷಣಕಾರರು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, 350 ಕ್ಕೂ ಅಧಿಕ ಅಧಿವೇಶನಗಳು ನೆರವೇರಲಿವೆ. ಈ ಸಮ್ಮೇಳನ ಹಣಕಾಸು ವಲಯದ ಇತ್ತೀಚಿನ ನಾವೀನ್ಯತೆಗಳನ್ನು ಅನಾವರಣಗೊಳಿಸಲಿದೆ. ಜಿಎಫ್ಎಫ್ 2024 ರಲ್ಲಿ 20 ಕ್ಕೂ ಹೆಚ್ಚು ಚಿಂತನೆಯ ನಾಯಕತ್ವದ ವರದಿಗಳು ಮತ್ತು ಶ್ವೇತಪತ್ರಗಳನ್ನು ಹೊರಡಿಸಲಾಗುತ್ತದೆ. ಇದು ಒಳನೋಟಗಳು ಮತ್ತು ಆಳವಾದ ಉದ್ಯಮ ವಲಯದ ಮಾಹಿತಿಯನ್ನು ನೀಡಲಿದೆ.
ಪಾಲ್ಘರ್ ನಲ್ಲಿ ಪ್ರಧಾನಮಂತ್ರಿ
ಪ್ರಧಾನ ಮಂತ್ರಿಯವರು 2024 ರ ಆಗಸ್ಟ್ 30 ರಂದು ವಧ್ವಾನ್ ಬಂದರಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದರ ಒಟ್ಟಾರೆ ವೆಚ್ಚ 76,000 ಕೋಟಿ ರೂಪಾಯಿ. ಇದು ವಿಶ್ವ ದರ್ಜೆಯ ಸಾಗರ ವಲಯದ ಹೆಬ್ಬಾಗಿಲಾಗಿ ಹೊರ ಹೊಮ್ಮಲಿದ್ದು, ದೇಶದ ವ್ಯಾಪಾರ ವಲಯವನ್ನು ಬಲಪಡಿಸಲಿದೆ ಮತ್ತು ದೊಡ್ಡ ಕಂಟೈನರ್ ಹಡಗುಗಳನ್ನು ಪೂರೈಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ವ್ಯಾಪಕಗೊಳಿಸುವ ಮತ್ತು ಅತಿ ದೊಡ್ಡ ಸರಕು ಹಡಗುಗಳಿಗೆ ಅವಕಾಶ ಕಲ್ಪಿಸಲಿದೆ.
ವಧ್ವನ್ ಬಂದರು ಪಾಲ್ಘರ್ ಜಿಲ್ಲೆಯ ಧಹನು ಬಳಿ ಇದ್ದು, ಇದು ಭಾರತದ ಅತ್ಯಂತ ಆಳವಾದ ಬಂದರಾಗಿದೆ ಮತ್ತು ಇದರ ಮೂಲಕ ಅಂತಾರಾಷ್ಟ್ರೀಯ ಬಂದರು ಮಾರ್ಗಗಳಿಗೆ ಸಂಪರ್ಕ ಕಲ್ಪಿಸಲಿದೆ. ಇದರಿಂದ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೂಲ ಸೌಕರ್ಯವನ್ನು ಇದು ಒಳಗೊಂಡಿದೆ ಮತ್ತು ಈ ಬಂದರು ಆಳವಾದ ಬರ್ತ್‌ಗಳು, ಸಮರ್ಥ ಸರಕು ನಿರ್ವಹಣೆ ಸೌಲಭ್ಯಗಳು ಮತ್ತು ಆಧುನಿಕ ಬಂದರು ನಿರ್ವಹಣಾ ವ್ಯವಸ್ಥೆಗಳನ್ನು ಹೊಂದಿದೆ. ಈ ಬಂದರು ಮೂಲಕ ನಿರ್ಣಾಯಕ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಜೊತೆಗೆ ಸ್ಥಳೀಯ ವ್ಯಾಪಾರಕ್ಕೆ ಉತ್ತೇಜನ ನೀಡಲಿದೆ ಮತ್ತು ಈ ವಲಯದ ಒಟ್ಟಾರೆ ಆರ್ಥಿಕಾಭಿವೃದ್ಧಿಗೆ ಇದು ಕೊಡುಗೆ ನೀಡಲಿದೆ. ವಧ್ವಾನ್ ಬಂದರು ಯೋಜನೆ ಸುಸ್ಥಿರ ಅಭಿವೃದ್ಧಿ ಅಭ್ಯಾಸಗಳನ್ನು ಒಳಗೊಂಡಿದ್ದು, ಪರಿಸರದ ಪ್ರಭಾವವನ್ನು ಕಡಿಮೆ ಮಾಡುವ ಮತ್ತು ಕಟ್ಟುನಿಟ್ಟಾದ ಪರಿಸರ ಮಾನದಂಡಗಳಿಗೆ ಬದ್ಧವಾಗಿರುವ ಮೂಲಕ ಇದು ಕೇಂದ್ರೀಕರಿಸಿಕೊಳ್ಳಲಾಗಿದೆ. ಇದು ಒಮ್ಮೆ ಕಾರ್ಯಾಚರಣೆ ಆರಂಭಿಸಿದರೆ ಭಾರತದ ಸಾಗರ ವಲಯದ ಸಂರ್ಪಕ ವೃದ್ಧಿಸಲಿದೆ ಮತ್ತು ಜಾಗತಿಕ ವ್ಯಾಪಾರ ತಾಣದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲಿದೆ.
ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು 1,560 ಕೋಟಿ ರೂಪಾಯಿ ಮೊತ್ತದ 218 ಮೀನುಗಾರಿಕೆ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ರಾಷ್ಟ್ರದಾದ್ಯಂತ ಮೂಲಸೌಕರ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಈ ಉಪಕ್ರಮಗಳು ಮೀನುಗಾರಿಕಾ ವಲಯದಲ್ಲಿ ಐದು ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ರಾಷ್ಟ್ರೀಯ ರೋಲ್ ಔಟ್ ಆಫ್ ವೆಸೆಲ್ ಕಮ್ಯುನಿಕೇಷನ್ ಮತ್ತು ಸಪೋರ್ಟ್ ಸಿಸ್ಟಂ ಅಡಿಯಲ್ಲಿ, 13 ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೋಟಾರು ಮತ್ತು ಯಾಂತ್ರಿಕೃತ ಮೀನುಗಾರಿಕೆ ಹಡಗುಗಳಲ್ಲಿ 1 ಲಕ್ಷ ಟ್ರಾನ್ಸ್‌ಪಾಂಡರ್‌ಗಳನ್ನು 360 ಕೋಟಿ ರೂಪಾಯಿ ವೆಚ್ಚದಲ್ಲಿ ಹಂತ ಹಂತವಾಗಿ ಅಳವಡಿಸಲಾಗುತ್ತದೆ. ಹಡಗು ಸಂವಹನ ಮತ್ತು ಬೆಂಬಲ ವ್ಯವಸ್ಥೆಯು ಇಸ್ರೋ ಅಭಿವೃದ್ಧಿಪಡಿಸಿದ ಸ್ಥಳೀಯ ತಂತ್ರಜ್ಞಾನವಾಗಿದೆ, ಇದು ಮೀನುಗಾರರು ಸಮುದ್ರದಲ್ಲಿರುವಾಗ ಎರಡು ಪಥದಲ್ಲಿ ಸಂವಹನವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ನೆರವಾಗುತ್ತದೆ ಮತ್ತು ನಮ್ಮ ಮೀನುಗಾರರ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
ಪ್ರಧಾನ ಮಂತ್ರಿಯವರು ಉದ್ಘಾಟಿಸಲಿರುವ ಇತರ ಉಪಕ್ರಮಗಳಲ್ಲಿ ಮೀನುಗಾರಿಕೆ ಬಂದರುಗಳು ಮತ್ತು ಸಮಗ್ರ ಮೀನುಗಾರಿಕಾ ಪಾರ್ಕ್ ಗಳ ಅಭಿವೃದ್ಧಿ, ಜೊತೆಗೆ ಸುಧಾರಿತ ತಂತ್ರಜ್ಞಾನಗಳಾದ ಮರು ಪ್ರಸರನ ಮೀನುಗಾರಿಕಾ ವ್ಯವಸ್ಥೆ ಮತ್ತು ಬಯೋಫ್ಲೋಕ್‌ಗಳನ್ನು ಅಳವಡಿಸಿಕೊಳ್ಳುವುದು ಸಹ ಸೇರಿವೆ. ಈ ಯೋಜನೆಗಳು ಬಹು ರಾಜ್ಯಗಳಲ್ಲಿ ಕಾರ್ಯಗತಗೊಳ್ಳುತ್ತವೆ ಮತ್ತು ಮೀನು ಉತ್ಪಾದನೆಯನ್ನು ಹೆಚ್ಚಿಸಲು, ಸುಗ್ಗಿಯ ನಂತರದ ನಿರ್ವಹಣೆಯನ್ನು ಸುಧಾರಿಸಲು ಮತ್ತು ಮೀನುಗಾರಿಕೆ ವಲಯದಲ್ಲಿ ತೊಡಗಿರುವ ಲಕ್ಷಾಂತರ ಜನರಿಗೆ ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸಲು ನಿರ್ಣಾಯಕ ಮೂಲಸೌಕರ್ಯ ಮತ್ತು ಉತ್ತಮ-ಗುಣಮಟ್ಟದ ವ್ಯವಸ್ಥೆಯನ್ನು ಒದಗಿಸುತ್ತವೆ.
ಮೀನುಗಾರಿಕಾ ಬಂದರು, ಮೀನುಗಾರಿಕೆ ಕೇಂದ್ರಗಳು ಮತ್ತು ಮೀನು ಮಾರುಕಟ್ಟೆಗಳ ನಿರ್ಮಾಣ, ಮೀನುಗಾರಿಕಾ ಬಂದರು ಯೋಜನೆಗಳು, ಅತ್ಯಾಧುನಿಕ ಮತ್ತು ಮೇಲ್ದರ್ಜೆಗೇರಿಸುವ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದು ಮೀನು ಮತ್ತು ಸಮುದ್ರಾಹಾರದ ಸುಗ್ಗಿಯ ನಂತರದ ನಿರ್ವಹಣೆಗೆ ಅಗತ್ಯ ಸೌಲಭ್ಯಗಳು ಮತ್ತು ನೈರ್ಮಲ್ಯದ ಪರಿಸ್ಥಿತಿಗಳನ್ನು ಒದಗಿಸುವ ನಿರೀಕ್ಷೆಯಿದೆ.