ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 25ರಂದು ಮಹಾರಾಷ್ಟ್ರದ ಜಲಗಾಂವ್ ಮತ್ತು ರಾಜಸ್ಥಾನದ ಜೋಧಪುರಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11:15 ಕ್ಕೆ ಪ್ರಧಾನಮಂತ್ರಿಯವರು ಲಖ್ಪತಿ ದೀದಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4:30 ಕ್ಕೆ ಜೋಧಪುರದಲ್ಲಿ ರಾಜಸ್ಥಾನ ಹೈಕೋರ್ಟ್ ನ ಪ್ಲಾಟಿನಂ ಜುಬಿಲಿ (ವಜ್ರಮಹೋತ್ಸವ) ಆಚರಣೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮಹಾರಾಷ್ಟ್ರದಲ್ಲಿ ಪ್ರಧಾನಮಂತ್ರಿ
ಲಕ್ಷಾದಿಪತಿ ದೀದಿ ಸಮ್ಮೇಳನದಲ್ಲಿ ಭಾಗವಹಿಸಲು ಪ್ರಧಾನ ಮಂತ್ರಿ ಅವರು ಜಲಗಾಂವ್ ಗೆ ಭೇಟಿ ನೀಡಲಿದ್ದಾರೆ. ಎನ್ ಡಿ ಎ ಸರ್ಕಾರದ ಮೂರನೇ ಅವಧಿಯಲ್ಲಿ ಇತ್ತೀಚೆಗೆ ಲಕ್ಷಾದಿಪತಿಯಾದ 11 ಲಕ್ಷ ಹೊಸ ಲಕ್ಷಾದಿಪತಿ ದೀದಿಗಳಿಗೆ ಅವರು ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ ಮತ್ತು ಸನ್ಮಾನಿಸಲಿದ್ದಾರೆ. ಪ್ರಧಾನ ಮಂತ್ರಿ ಅವರು ದೇಶಾದ್ಯಂತದ ಲಕ್ಷಾದಿಪತಿ ದೀದಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಪ್ರಧಾನಮಂತ್ರಿ ಅವರು 2,500 ಕೋಟಿ ರೂ.ಗಳ ಆವರ್ತ ನಿಧಿಯನ್ನು ಬಿಡುಗಡೆ ಮಾಡಲಿದ್ದು, ಇದರಿಂದ 4.3 ಲಕ್ಷ ಸ್ವಸಹಾಯ ಗುಂಪುಗಳ (ಎಸ್ ಎಚ್ ಜಿ) ಸುಮಾರು 48 ಲಕ್ಷ ಸದಸ್ಯರಿಗೆ ಪ್ರಯೋಜನವಾಗಲಿದೆ. 2.35 ಲಕ್ಷ ಸ್ವಸಹಾಯ ಗುಂಪುಗಳ 25.8 ಲಕ್ಷ ಸದಸ್ಯರಿಗೆ ಅನುಕೂಲವಾಗುವಂತೆ 5,000 ಕೋಟಿ ರೂ.ಗಳ ಬ್ಯಾಂಕ್ ಸಾಲವನ್ನು ಅವರು ವಿತರಿಸಲಿದ್ದಾರೆ.
ಲಕ್ಷಾದಿಪತಿ ದೀದಿ ಯೋಜನೆ ಪ್ರಾರಂಭವಾದಾಗಿನಿಂದ, ಒಂದು ಕೋಟಿ ಮಹಿಳೆಯರನ್ನು ಈಗಾಗಲೇ ಲಕ್ಷಾದಿಪತಿ ದೀದಿಗಳನ್ನಾಗಿ ಮಾಡಲಾಗಿದೆ. 3 ಕೋಟಿ ಲಕ್ಷಾದಿಪತಿ ದೀದಿಗಳನ್ನು ಮಾಡುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.
ರಾಜಸ್ಥಾನದಲ್ಲಿ ಪ್ರಧಾನಮಂತ್ರಿ
ಜೋಧಪುರದ ಹೈಕೋರ್ಟ್ ಆವರಣದಲ್ಲಿ ನಡೆಯಲಿರುವ ರಾಜಸ್ಥಾನ ಹೈಕೋರ್ಟ್ ನ ಪ್ಲಾಟಿನಂ ಜುಬಿಲಿ (ವಜ್ರ ಮಹೋತ್ಸವ) ಆಚರಣೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರಧಾನ ಮಂತ್ರಿಯವರು ರಾಜಸ್ಥಾನ ಹೈಕೋರ್ಟ್ ವಸ್ತು ಸಂಗ್ರಹಾಲಯವನ್ನೂ ಉದ್ಘಾಟಿಸಲಿದ್ದಾರೆ.