25,000 ಕೋಟಿ ರೂ.ಗೂ ಅಧಿಕ ಮೊತ್ತದ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ
ಬೆಂಗಳೂರಿನಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ; ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಗೆ ಹಸಿರು ನಿಶಾನೆ ತೋರಲಿದ್ದಾರೆ
ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಅನಾವರಣಗೊಳಿಸಲಿರುವ ಪ್ರಧಾನಿ
ಪ್ರಧಾನಿಯವರು ವಿಶಾಖಪಟ್ಟಣದಲ್ಲಿ ಒ ಎನ್‌ ಜಿ ಸಿ ಯ ಯು-ಫೀಲ್ಡ್ ಆನ್‌ಶೋರ್ ಡೀಪ್ ವಾಟರ್ ಬ್ಲಾಕ್ ಯೋಜನೆ ಲೋಕಾರ್ಪಣೆ ಮಾಡಲಿದ್ದಾರೆ; ಗೇಲ್ನ ಶ್ರೀಕಾಕುಳಂ ಅಂಗುಲ್ ನೈಸರ್ಗಿಕ ಅನಿಲ ಪೈಪ್‌ಲೈನ್ ಯೋಜನೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ
ವಿಶಾಖಪಟ್ಟಣದಲ್ಲಿ 6-ಪಥಗಳ ಗ್ರೀನ್‌ಫೀಲ್ಡ್ ರಾಯ್‌ಪುರ - ವಿಶಾಖಪಟ್ಟಣಂ ಆರ್ಥಿಕ ಕಾರಿಡಾರ್‌ನ ಆಂಧ್ರಪ್ರದೇಶ ವಿಭಾಗದ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನ ಮಂತ್ರಿ; ವಿಶಾಖಪಟ್ಟಣ ರೈಲು ನಿಲ್ದಾಣದ ಪುನರಾಭಿವೃದ್ಧಿಗೂ ಅಡಿಪಾಯ
ರಾಮಗುಂಡಂನಲ್ಲಿ ರಸಗೊಬ್ಬರ ಸ್ಥಾವರವನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಿ - ಅದರ ಶಿಲಾನ್ಯಾಸವನ್ನು 2016 ರಲ್ಲಿ ಪ್ರಧಾನ ಮಂತ್ರಿಯವರು ನೆರವೇರಿಸಿದ್ದರು
ದಿಂಡಿಗಲ್‌ನಲ್ಲಿ ಗಾಂಧಿಗ್ರಾಮ್ ಗ್ರಾಮೀಣ ಸಂಸ್ಥೆಯ 36 ನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ನವೆಂಬರ್ 11 ಮತ್ತು 12 ರಂದು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ. ನವೆಂಬರ್ 11 ರಂದು ಬೆಳಿಗ್ಗೆ 9:45 ರ ಸುಮಾರಿಗೆ ಪ್ರಧಾನಮಂತ್ರಿಯವರು ಬೆಂಗಳೂರಿನ ವಿಧಾನಸೌಧದಲ್ಲಿ ಸಂತ ಕವಿ ಶ್ರೀ ಕನಕದಾಸರು ಮತ್ತು ಮಹರ್ಷಿ ವಾಲ್ಮೀಕಿ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ಬೆಳಗ್ಗೆ 10:20 ರ ಸುಮಾರಿಗೆ ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ಪ್ರಧಾನಿಯವರು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಭಾರತ್ ಗೌರವ್ ಕಾಶಿ ದರ್ಶನ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಬೆಳಗ್ಗೆ 11:30ರ ಸುಮಾರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ಪ್ರಧಾನಿಯವರು ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಮಧ್ಯಾಹ್ನ 12:30 ಕ್ಕೆ ಬೆಂಗಳೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3:30 ರ ಸುಮಾರಿಗೆ, ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಗಾಂಧಿಗ್ರಾಮ ಗ್ರಾಮೀಣ ಸಂಸ್ಥೆಯ 36 ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ.

ನವೆಂಬರ್ 12 ರಂದು, ಬೆಳಿಗ್ಗೆ 10:30 ರ ಸುಮಾರಿಗೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಪ್ರಧಾನ ಮಂತ್ರಿಯವರು ಅನೇಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3:30 ರ ಸುಮಾರಿಗೆ ಪ್ರಧಾನಿಯವರು ತೆಲಂಗಾಣದ ರಾಮಗುಂಡಂನಲ್ಲಿರುವ ಆರ್‌ ಎಫ್‌ ಸಿ ಎಲ್‌ ಸ್ಥಾವರಕ್ಕೆ ಭೇಟಿ ನೀಡಲಿದ್ದಾರೆ. ನಂತರ, ಸಂಜೆ 4:15 ರ ಸುಮಾರಿಗೆ, ರಾಮಗುಂಡಂನಲ್ಲಿ ಅನೇಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಕರ್ನಾಟಕದ ಬೆಂಗಳೂರಿನಲ್ಲಿ ಪ್ರಧಾನ ಮಂತ್ರಿ

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 5000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಟರ್ಮಿನಲ್ 2ನ್ನು ಪ್ರಧಾನಿಯವರು ಉದ್ಘಾಟಿಸಲಿದ್ದಾರೆ. ಈ ಟರ್ಮಿನಲ್ ವಿಮಾನ ನಿಲ್ದಾಣದ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು ವಾರ್ಷಿಕ 5-6 ಕೋಟಿ ಪ್ರಯಾಣಿಕರಿಗೆ ದ್ವಿಗುಣಗೊಳಿಸುತ್ತದೆ, ಪ್ರಸ್ತುತ ಇದರ ಸಾಮರ್ಥ್ಯ ಸುಮಾರು 2.5 ಕೋಟಿಯಷ್ಟಿದೆ.

ಟರ್ಮಿನಲ್ 2 ಅನ್ನು ಬೆಂಗಳೂರಿನ ಉದ್ಯಾನ ನಗರಿ ಹೆಸರಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಪ್ರಯಾಣಿಕರ ಅನುಭವವು "ಉದ್ಯಾನದಲ್ಲಿ ನಡಿಗೆ" ಯಾಗಿರುತ್ತದೆ. ಪ್ರಯಾಣಿಕರು 10,000ಕ್ಕೂ ಹೆಚ್ಚು ಚದರ ಮೀಟರ್‌ಗಳಷ್ಟು ಹಸಿರು ಗೋಡೆಗಳು, ತೂಗು ಉದ್ಯಾನಗಳು ಮತ್ತು ಹೊರಾಂಗಣ ಉದ್ಯಾನಗಳ ಮೂಲಕ ಪ್ರಯಾಣಿಸುತ್ತಾರೆ. ಕ್ಯಾಂಪಸ್‌ನಾದ್ಯಂತ ನವೀಕರಿಸಬಹುದಾದ ಇಂಧನದ ಶೇ.100 ರಷ್ಟು ಬಳಕೆಯೊಂದಿಗೆ ವಿಮಾನ ನಿಲ್ದಾಣವು ಈಗಾಗಲೇ ಸುಸ್ಥಿರತೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಸುಸ್ಥಿರತೆಯ ತತ್ವಗಳೊಂದಿಗೆ ಟರ್ಮಿನಲ್ 2 ಅನ್ನು ವಿನ್ಯಾಸಗೊಳಿಸಲಾಗಿದೆ. ಟರ್ಮಿನಲ್ 2 ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೊದಲು, ಸುಸ್ಥಿರತೆಯ ಉಪಕ್ರಮಗಳ ಆಧಾರದಲ್ಲಿ ಯುಎಸ್‌ ಜಿಬಿಸಿ (ಹಸಿರು ಕಟ್ಟಡ ಮಂಡಳಿ) ಯಿಂದ ಪೂರ್ವ ಪ್ರಮಾಣೀಕರಿಸಿದ ಪ್ಲಾಟಿನಂ ರೇಟಿಂಗ್ ಅನ್ನು ಹೊಂದಿರುವ ವಿಶ್ವದ ಅತಿದೊಡ್ಡ ಟರ್ಮಿನಲ್ ಆಗಿರುತ್ತದೆ. ಟರ್ಮಿನಲ್ 2 ರ 'ನವರಸ' ಧ್ಯೇಯವು ಎಲ್ಲಾ ಕಲಾಕೃತಿಗಳನ್ನು ಒಂದುಗೂಡಿಸುತ್ತದೆ. ಕಲಾಕೃತಿಗಳು ಕರ್ನಾಟಕದ ಪರಂಪರೆ ಮತ್ತು ಸಂಸ್ಕೃತಿ ಮತ್ತು ವಿಶಾಲವಾದ ಭಾರತೀಯ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತವೆ.

ಒಟ್ಟಾರೆಯಾಗಿ, ಟರ್ಮಿನಲ್ 2 ರ ವಿನ್ಯಾಸ ಮತ್ತು ವಾಸ್ತುಶಿಲ್ಪವು ನಾಲ್ಕು ಮಾರ್ಗದರ್ಶಿ ತತ್ವಗಳಿಂದ ಪ್ರಭಾವಿತವಾಗಿದೆ: ಉದ್ಯಾನದಲ್ಲಿ ಟರ್ಮಿನಲ್, ಸುಸ್ಥಿರತೆ, ತಂತ್ರಜ್ಞಾನ ಮತ್ತು ಕಲೆ ಮತ್ತು ಸಂಸ್ಕೃತಿ. ಈ ಎಲ್ಲಾ ಅಂಶಗಳು ಟರ್ಮಿನಲ್ 2ನ್ನು ಆಧುನಿಕವಾದರೂ ನಿಸರ್ಗ ಪ್ರೀತಿಯ ಟರ್ಮಿನಲ್ ಆಗಿ ಪ್ರದರ್ಶಿಸುತ್ತವೆ ಮತ್ತು ಎಲ್ಲಾ ಪ್ರಯಾಣಿಕರಿಗೆ ಸ್ಮರಣೀಯ 'ಗಮ್ಯಸ್ಥಾನ' ಅನುಭವವನ್ನು ನೀಡುತ್ತದೆ.

ಪ್ರಧಾನಮಂತ್ರಿಯವರು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆ ಎಸ್‌ ಆರ್) ರೈಲು ನಿಲ್ದಾಣದಲ್ಲಿ ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಿದ್ದಾರೆ. ಇದು ದೇಶದ ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮತ್ತು ದಕ್ಷಿಣ ಭಾರತದ ಮೊದಲ ರೈಲು. ಇದು ಕೈಗಾರಿಕಾ ಕೇಂದ್ರವಾದ ಚೆನ್ನೈ ಮತ್ತು ತಂತ್ರಜ್ಞಾನ ಮತ್ತು ಸ್ಟಾರ್ಟ್ಅಪ್ ಕೇಂದ್ರವಾದ ಬೆಂಗಳೂರು ಮತ್ತು ಪ್ರಸಿದ್ಧ ಪ್ರವಾಸಿ ನಗರವಾದ ಮೈಸೂರಿನ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ.

ಬೆಂಗಳೂರು ಕೆಎಸ್‌ಆರ್ ರೈಲು ನಿಲ್ದಾಣದಿಂದ ಭಾರತ್ ಗೌರವ್ ಕಾಶಿ ಯಾತ್ರಾ ರೈಲಿಗೆ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ. ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಸಚಿವಾಲಯವು ಕರ್ನಾಟಕದಿಂದ ಕಾಶಿಗೆ ಯಾತ್ರಾರ್ಥಿಗಳನ್ನು ಕಳುಹಿಸಲು ಒಟ್ಟಾಗಿ ಕೆಲಸ ಮಾಡುತ್ತಿರುವ ಭಾರತ್ ಗೌರವ್ ಯೋಜನೆಯಡಿಯಲ್ಲಿ ಈ ರೈಲನ್ನು ಓಡಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಕಾಶಿ, ಅಯೋಧ್ಯೆ ಮತ್ತು ಪ್ರಯಾಗರಾಜ್‌ಗೆ ಭೇಟಿ ನೀಡಲು ಯಾತ್ರಾರ್ಥಿಗಳಿಗೆ ಆರಾಮದಾಯಕ ವಾಸ್ತವ್ಯ ಮತ್ತು ಮಾರ್ಗದರ್ಶನವನ್ನು ಒದಗಿಸಲಾಗುವುದು.

ಪ್ರಧಾನಮಂತ್ರಿಯವರು 108 ಅಡಿ ಉದ್ದದ ಶ್ರೀ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಬೆಂಗಳೂರಿನ ಬೆಳವಣಿಗೆಗೆ ನಗರ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡರ ಕೊಡುಗೆ ಸ್ಮರಣಾರ್ಥ ಇದನ್ನು ನಿರ್ಮಿಸಲಾಗಿದೆ. ಏಕತಾ ಪ್ರತಿಮೆ ಖ್ಯಾತಿಯ ರಾಮ್ ವಿ ಸುತಾರ್ ಅವರ ಪರಿಕಲ್ಪನೆ ಮತ್ತು ಕೆತ್ತನೆಯಲ್ಲಿ ಇದು ಮೂಡಿಬಂದಿದೆ. 98 ಟನ್ ಕಂಚು ಮತ್ತು 120 ಟನ್ ಉಕ್ಕಿನಿಂದ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಪ್ರಧಾನಿ

10,500 ಕೋಟಿ ರೂ.ಗೂ ಅಧಿಕ ಮೊತ್ತದ ಯೋಜನೆಗಳ ಶಂಕುಸ್ಥಾಪನೆಯನ್ನು ಪ್ರಧಾನಿಯವರು ದೇಶಕ್ಕೆ ಸಮರ್ಪಿಸಲಿದ್ದಾರೆ. ಅವರು ಆರು ಪಥದ ಗ್ರೀನ್‌ಫೀಲ್ಡ್ ರಾಯ್‌ಪುರ-ವಿಶಾಖಪಟ್ಟಣಂ ಆರ್ಥಿಕ ಕಾರಿಡಾರ್‌ನ ಆಂಧ್ರಪ್ರದೇಶ ವಿಭಾಗಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದು 3750 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈ ಆರ್ಥಿಕ ಕಾರಿಡಾರ್ ಛತ್ತೀಸ್‌ಗಢ ಮತ್ತು ಒಡಿಶಾದ ಕೈಗಾರಿಕಾ ಪ್ರದೇಶಗಳಿಂದ ವಿಶಾಖಪಟ್ಟಣಂ ಬಂದರು ಮತ್ತು ಚೆನ್ನೈ - ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿಗೆ ವೇಗವಾದ ಸಂಪರ್ಕವನ್ನು ಒದಗಿಸುತ್ತದೆ. ಇದು ಆಂಧ್ರಪ್ರದೇಶ ಮತ್ತು ಒಡಿಶಾದ ಬುಡಕಟ್ಟು ಮತ್ತು ಹಿಂದುಳಿದ ಪ್ರದೇಶಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ. ವಿಶಾಖಪಟ್ಟಣದ ಕಾನ್ವೆಂಟ್ ಜಂಕ್ಷನ್‌ನಿಂದ ಶೀಲಾ ನಗರ ಜಂಕ್ಷನ್‌ವರೆಗೆ ಸಮರ್ಪಿತ ಪೋರ್ಟ್ ರಸ್ತೆಯ ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿಯವರು ನೆರವೇರಿಸಲಿದ್ದಾರೆ. ಇದು ಸ್ಥಳೀಯ ಮತ್ತು ಬಂದರು ಸರಕಿನ ದಟ್ಟಣೆಯನ್ನು ಪ್ರತ್ಯೇಕಿಸುವ ಮೂಲಕ ವಿಶಾಖಪಟ್ಟಣ ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಪ್ರಧಾನಿಯವರು ಶ್ರೀಕಾಕುಳಂ-ಗಜಪತಿ ಕಾರಿಡಾರ್‌ನ ಭಾಗವಾಗಿ 200 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಎನ್‌ ಹೆಚ್‌ -326ಎ  ನರಸನ್ನಪೇಟೆ- ಪಥಪಟ್ಟಣಂ ವಿಭಾಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಯೋಜನೆಯು ಈ ಪ್ರದೇಶದಲ್ಲಿ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ.

ಆಂಧ್ರಪ್ರದೇಶದ ಒಎನ್‌ಜಿಸಿಯ ಯು-ಫೀಲ್ಡ್ ಆನ್‌ಶೋರ್ ಡೀಪ್ ವಾಟರ್ ಬ್ಲಾಕ್ ಯೋಜನೆಯನ್ನು ಪ್ರಧಾನಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ, ಇದು ದಿನಕ್ಕೆ ಸುಮಾರು 3 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಅನಿಲ ಉತ್ಪಾದನಾ ಸಾಮರ್ಥ್ಯದೊಂದಿಗೆ ಯೋಜನೆಯ ಆಳ ಸಮುದ್ರದ ಅನಿಲ ಆವಿಷ್ಕಾರವಾಗಿದೆ. ಪ್ರಧಾನಿಯವರು ಸುಮಾರು 6.65 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಸಾಮರ್ಥ್ಯದ ಗೇಲ್ ನ ಶ್ರೀಕಾಕುಳಂ ಅಂಗುಲ್ ನೈಸರ್ಗಿಕ ಅನಿಲ ಪೈಪ್‌ಲೈನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.  ಒಟ್ಟು 2650 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ 745 ಕಿ.ಮೀ ಉದ್ದದ ಈ ಪೈಪ್‌ಲೈನ್‌ ನಿರ್ಮಾಣವಾಗಲಿದೆ. ನೈಸರ್ಗಿಕ ಅನಿಲ ಗ್ರಿಡ್ (ಎನ್‌ ಎಸ್‌ ಜಿ) ನ ಭಾಗವಾಗಿರುವ ಪೈಪ್‌ಲೈನ್ ಆಂಧ್ರಪ್ರದೇಶ ಮತ್ತು ಒಡಿಶಾದ ವಿವಿಧ ಜಿಲ್ಲೆಗಳಲ್ಲಿ ಮನೆಗಳು, ಕೈಗಾರಿಕೆಗಳು, ವಾಣಿಜ್ಯ ಘಟಕಗಳು ಮತ್ತು ಆಟೋಮೊಬೈಲ್ ವಲಯಗಳಿಗೆ ನೈಸರ್ಗಿಕ ಅನಿಲವನ್ನು ಪೂರೈಸಲು ಪ್ರಮುಖ ಮೂಲಸೌಕರ್ಯವನ್ನು ರಚಿಸುತ್ತದೆ. ಆಂಧ್ರಪ್ರದೇಶದ ಶ್ರೀಕಾಕುಳ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ಜಾಲಕ್ಕೆ ಈ ಪೈಪ್‌ಲೈನ್ ನೈಸರ್ಗಿಕ ಅನಿಲವನ್ನು ಪೂರೈಸುತ್ತದೆ.

ಸುಮಾರು 450 ಕೋಟಿ ರೂ. ವೆಚ್ಚದ ವಿಶಾಖಪಟ್ಟಣಂ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪುನರಾಭಿವೃದ್ಧಿಗೊಂಡ ನಿಲ್ದಾಣವು ದಿನಕ್ಕೆ 75,000 ಪ್ರಯಾಣಿಕರಿಗೆ ಸೇವೆ ನೀಡುತ್ತದೆ ಮತ್ತು ಆಧುನಿಕ ಸೌಕರ್ಯಗಳನ್ನು ಒದಗಿಸುವ ಮೂಲಕ ಪ್ರಯಾಣಿಕರ ಅನುಭವವನ್ನು ಸುಧಾರಿಸುತ್ತದೆ.

ಪ್ರಧಾನಮಂತ್ರಿಯವರು ವಿಶಾಖಪಟ್ಟಣಂ ಮೀನುಗಾರಿಕೆ ಬಂದರಿನ ಆಧುನೀಕರಣ ಮತ್ತು ಮೇಲ್ದರ್ಜೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಯೋಜನೆಯ ಒಟ್ಟು ವೆಚ್ಚ ಸುಮಾರು 150 ಕೋಟಿ ರೂ. ಮೀನುಗಾರಿಕೆ ಬಂದರು, ಅದರ ಉನ್ನತೀಕರಣ ಮತ್ತು ಆಧುನೀಕರಣದ ನಂತರ, ನಿರ್ವಹಣೆ ಸಾಮರ್ಥ್ಯವನ್ನು ದಿನಕ್ಕೆ 150 ಟನ್‌ಗಳಿಂದ ಸುಮಾರು 300 ಟನ್‌ಗಳಿಗೆ ದ್ವಿಗುಣಗೊಳಿಸುತ್ತದೆ, ಸುರಕ್ಷಿತ ಲ್ಯಾಂಡಿಂಗ್ ಮತ್ತು ಬರ್ತಿಂಗ್ ಮತ್ತು ಇತರ ಆಧುನಿಕ ಮೂಲಸೌಕರ್ಯ ಸೌಲಭ್ಯಗಳು ಜೆಟ್ಟಿಯಲ್ಲಿ ತಂಗುವ ಸಮಯವನ್ನು ಕಡಿಮೆ ಮಾಡುತ್ತವೆ, ನಷ್ಟವನ್ನು ಕಡಿಮೆ ಮಾಡುತ್ತವೆ ಮತ್ತು ಬೆಲೆ ಸುಧಾರಣೆಗೆ  ಸಹಾಯ ಮಾಡುತ್ತವೆ.

ತೆಲಂಗಾಣದ ರಾಮಗುಂಡಂನಲ್ಲಿ ಪ್ರಧಾನಿ

ಪ್ರಧಾನಮಂತ್ರಿಯವರು ರಾಮಗುಂಡಂನಲ್ಲಿ 9500 ಕೋಟಿ ರೂ.ಗೂ ಅಧಿಕ ಮೊತ್ತದ ಬಹುವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಮಗುಂಡಂನಲ್ಲಿರುವ ರಸಗೊಬ್ಬರ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 7ನೇ ಆಗಸ್ಟ್ 2016 ರಂದು ಪ್ರಧಾನಮಂತ್ರಿಯವರು ರಾಮಗುಂಡಂ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ರಸಗೊಬ್ಬರ ಸ್ಥಾವರದ ಪುನರುಜ್ಜೀವನಕ್ಕೆ ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಪ್ರಧಾನಿಯವರ ದೂರದೃಷ್ಟಿಯು ಪ್ರೇರಕ ಶಕ್ತಿಯಾಗಿದೆ. ರಾಮಗುಂಡಂ ಸ್ಥಾವರವು ವಾರ್ಷಿಕ 12.7 ಲಕ್ಷ ಮೆಟ್ರಿಕ್‌ ಟನ್‌ ಸ್ಥಳೀಯ ಬೇವು ಲೇಪಿತ ಯೂರಿಯಾ ಉತ್ಪಾದನೆಯನ್ನು ಲಭ್ಯವಾಗುವಂತೆ ಮಾಡುತ್ತದೆ.

ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್‌ ಎಫ್‌ ಎಲ್), ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇ‌ ಐ ಎಲ್) ಮತ್ತು ಫರ್ಟಿಲೈಸರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಫ್‌ ಸಿ ಐ ಎಲ್) ನ ಜಂಟಿ ಸಹಭಾಗಿತ್ವದ ಕಂಪನಿಯಾದ ರಾಮಗುಂಡಂ ಫರ್ಟಿಲೈಸರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್ (ಆರ್‌ ಎಫ್‌ ಸಿ ಎಲ್) ಅಡಿಯಲ್ಲಿ ಯೋಜನೆಯನ್ನು ಸ್ಥಾಪಿಸಲಾಗಿದೆ. 6300 ಕೋಟಿ‌ ರೂ.ಗೂ ಹೆಚ್ಚು ಹೂಡಿಕೆಯೊಂದಿಗೆ ಹೊಸ ಅಮೋನಿಯಾ-ಯೂರಿಯಾ ಸ್ಥಾವರವನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಆರ್‌ ಎಫ್‌ ಸಿ ಎಲ್ ಗೆ ವಹಿಸಲಾಗಿತ್ತು. ಆರ್‌ಎಫ್‌ಸಿಎಲ್ ಸ್ಥಾವರಕ್ಕೆ ಅನಿಲವನ್ನು ಜಗದೀಶ್‌ಪುರ - ಫುಲ್‌ಪುರ- ಹಲ್ದಿಯಾ ಪೈಪ್‌ಲೈನ್ ಮೂಲಕ ಸರಬರಾಜು ಮಾಡಲಾಗುತ್ತದೆ.

ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರ ರಾಜ್ಯಗಳ ರೈತರಿಗೆ ಯೂರಿಯಾ ರಸಗೊಬ್ಬರವನ್ನು ಸಮರ್ಪಕವಾಗಿ ಮತ್ತು ಸಮಯಕ್ಕೆ ಸರಿಯಾಗಿ ಸರಬರಾಜು ಮಾಡುವುದನ್ನು ಈ ಸ್ಥಾವರ ಖಚಿತಪಡಿಸುತ್ತದೆ. ಸ್ಥಾವರವು ರಸಗೊಬ್ಬರದ ಲಭ್ಯತೆಯನ್ನು ಸುಧಾರಿಸುವುದಲ್ಲದೆ, ರಸ್ತೆಗಳು, ರೈಲ್ವೇ, ಪೂರಕ ಕೈಗಾರಿಕೆಗಳಂತಹ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಈ ಪ್ರದೇಶದಲ್ಲಿ ಒಟ್ಟಾರೆ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಇದರ ಹೊರತಾಗಿ, ವಿವಿಧ ಕಾರ್ಖಾನೆಗೆ ಸರಕುಗಳನ್ನು ಪೂರೈಸುವ ಎಂ ಎಸ್‌ ಎಂ ಇ ಅಭಿವೃದ್ಧಿಯಿಂದ ಪ್ರದೇಶವು ಪ್ರಯೋಜನ ಪಡೆಯುತ್ತದೆ. ಆರ್‌ಎಫ್‌ಸಿಎಲ್‌ನ ‘ಭಾರತ್ ಯೂರಿಯಾ’ ಆಮದುಗಳನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ರಸಗೊಬ್ಬರಗಳ ಸಕಾಲಿಕ ಪೂರೈಕೆ ಮತ್ತು ವಿಸ್ತರಣಾ ಸೇವೆಗಳ ಮೂಲಕ ಸ್ಥಳೀಯ ರೈತರಿಗೆ ಉತ್ತೇಜನ ನೀಡುವ ಮೂಲಕ ಆರ್ಥಿಕತೆಗೆ ಅದ್ಭುತವಾದ ಉತ್ತೇಜನವನ್ನು ನೀಡುತ್ತದೆ.

ಸುಮಾರು 1000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಭದ್ರಾಚಲಂ ರಸ್ತೆ-ಸತ್ತುಪಲ್ಲಿ ರೈಲು ಮಾರ್ಗವನ್ನು ಪ್ರಧಾನಿಯವರು ದೇಶಕ್ಕೆ ಸಮರ್ಪಿಸಲಿದ್ದಾರೆ. ಅವರು 2200 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ರಸ್ತೆ ಯೋಜನೆಗಳಿಗೆ ಅಡಿಗಲ್ಲು ಹಾಕುತ್ತಾರೆ, ಅವುಗಳೆಂದರೆ ಎನ್‌ ಹೆಚ್‌ -765 ಡಿಜಿಯ ಮೇದಕ್-ಸಿದ್ದಿಪೇಟೆ-ಎಲ್ಕತುರ್ಥಿ ವಿಭಾಗ; ಎನ್‌ ಹೆಚ್-161ಬಿಬಿ ಯ ಬೋಧನ್-ಬಸಾರ್-ಭೈಂಸಾ ವಿಭಾಗ; ಎನ್‌ ಹೆಚ್-353ಸಿ ಯ ಸಿರೊಂಚಾದಿಂದ ಮಹದೇವಪುರ ವಿಭಾಗ.

ತಮಿಳುನಾಡಿನ ಗಾಂಧಿಗ್ರಾಮದಲ್ಲಿ ಪ್ರಧಾನಿ

ಪ್ರಧಾನಮಂತ್ರಿಯವರು ಗಾಂಧಿಗ್ರಾಮ ಗ್ರಾಮೀಣ ಸಂಸ್ಥೆಯ 36 ನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಘಟಿಕೋತ್ಸವ ಸಮಾರಂಭದಲ್ಲಿ 2018-19 ಮತ್ತು 2019-20 ತಂಡಗಳ 2300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಸ್ವೀಕರಿಸಲಿದ್ದಾರೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet extends One-Time Special Package for DAP fertilisers to farmers

Media Coverage

Cabinet extends One-Time Special Package for DAP fertilisers to farmers
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 2 ಜನವರಿ 2025
January 02, 2025

Citizens Appreciate India's Strategic Transformation under PM Modi: Economic, Technological, and Social Milestones