ನಾಳೆ ಜುಲೈ 26ರಂದು 25ನೇ ಕಾರ್ಗಿಲ್ ವಿಜಯ ದಿವಸ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೆಳಗ್ಗೆ ಸುಮಾರು 9:20ಕ್ಕೆ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಕರ್ತವ್ಯದ ವೇಳೆ ದೇಶಕ್ಕೆ ಅತ್ಯುನ್ನತ ತ್ಯಾಗ ಮಾಡಿದ ಧೀರ ಯೋಧರ ಸ್ಮಾರಕಗಳಿಗೆ ನಮನ ಸಲ್ಲಿಸಲಿದ್ದಾರೆ. ನಂತರ ಪ್ರಧಾನಮಂತ್ರಿ ಅವರು ಶಿಂಕುನ್ ಲಾ ಸುರಂಗ ಯೋಜನೆ ಕಾಮಗಾರಿಯನ್ನು ವರ್ಚುವಲ್ ಮಾದರಿಯಲ್ಲಿ ಮೊದಲ ಸ್ಫೋಟ ನಡೆಸುವ ಮೂಲಕ ಆರಂಭಿಸಲಿದ್ದಾರೆ.
ಶಿಂಕುನ್ ಲಾ ಸುರಂಗ ಯೋಜನೆಯು 4.1 ಕಿಮೀ ಉದ್ದದ ಅವಳಿ-ಟ್ಯೂಬ್ ಸುರಂಗವನ್ನು ಒಳಗೊಂಡಿದೆ, ನಿಮು - ಪಾಡುಮ್ - ದರ್ಚಾ ರಸ್ತೆಯಲ್ಲಿ ಸುಮಾರು 15,800 ಅಡಿ ಎತ್ತರದಲ್ಲಿ ಲೇಹ್‌ಗೆ ಎಲ್ಲಾ ಹವಾಮಾನದಲ್ಲಿ ಸಂಪರ್ಕ ಒದಗಿಸುವ ಸುರಂಗ ಇದಾಗಿದೆ. ಇದರ ಕೆಲಸ ಪೂರ್ಣಗೊಂಡರೆ, ವಿಶ್ವದ ಅತಿ ಎತ್ತರದ ಸುರಂಗವಾಗಲಿದೆ. ಶಿಂಕುನ್ ಲಾ ಸುರಂಗವು ನಮ್ಮ ಸಶಸ್ತ್ರ ಪಡೆಗಳು ಮತ್ತು ಸಲಕರಣೆಗಳ ತ್ವರಿತ ಮತ್ತು ಪರಿಣಾಮಕಾರಿ ಚಲನೆ ನೀಡುತ್ತದೆ ಮಾತ್ರವಲ್ಲದೆ ಲಡಾಖ್‌ನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.