




ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 14-15, 2023 ರಂದು ಜಾರ್ಖಂಡ್ ಗೆ ಭೇಟಿ ನೀಡಲಿದ್ದಾರೆ. ನವೆಂಬರ್ 15 ರಂದು ಬೆಳಿಗ್ಗೆ 9:30 ರ ಸುಮಾರಿಗೆ ರಾಂಚಿಯಲ್ಲಿರುವ ಭಗವಾನ್ ಬಿರ್ಸಾ ಮುಂಡಾ ಸ್ಮಾರಕ ಪಾರ್ಕ್ ಮತ್ತು ಸ್ವಾತಂತ್ರ್ಯ ಹೋರಾಟಗಾರ ವಸ್ತುಸಂಗ್ರಹಾಲಯಕ್ಕೆ ಪ್ರಧಾನಮಂತ್ರಿ ಭೇಟಿ ನೀಡಲಿದ್ದಾರೆ. ನಂತರ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮಸ್ಥಳವಾದ ಉಲಿಹಾತು ಗ್ರಾಮಕ್ಕೆ ತೆರಳಿ, ಅಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಈ ಮೂಲಕ , ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮಸ್ಥಳ ಉಲಿಹಾತು ಗ್ರಾಮಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಾಗಲಿದ್ದಾರೆ. ಬೆಳಗ್ಗೆ ಸುಮಾರು 11:30 ಗಂಟೆಗೆ, ಜಾರ್ಖಂಡ್ ನ ಖುಂಟಿಯದಲ್ಲಿ ನಡೆಯಲಿರುವ 2023 ರ ಮೂರನೇ ಜನಜಾತಿಯ ಗೌರವ ದಿವಸ ಆಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಮತ್ತು ಪ್ರಧಾನಮಂತ್ರಿ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ ಮಿಷನ್ ಅನ್ನು ಪ್ರಧಾನಮಂತ್ರಿಯವರು ಚಾಲನೆ ಗೊಳಿಸಲಿದ್ದಾರೆ. ಪಿಎಂ-ಕಿಸಾನ್ ಯೋಜನೆಯ 15 ನೇ ಕಂತನ್ನು ಪ್ರಧಾನಮಂತ್ರಿಯವರು ಬಿಡುಗಡೆ ಮಾಡಲಿದ್ದಾರೆ. ಜಾರ್ಖಂಡ್ ನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ದೇಶಕ್ಕೆ ಸಮರ್ಪಣೆ ಮತ್ತು ಅಡಿಪಾಯ ಹಾಕುವ ಕಾರ್ಯ ಪ್ರಧಾನಮಂತ್ರಿಯವರು ಮಾಡಲಿದ್ದಾರೆ.
ಈ ಯೋಜನೆಗಳ ಪ್ರಯೋಜನಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ನೇರವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನದ ಸಾಂದ್ರತೆಯನ್ನು ಸಾಧಿಸಲು ಪ್ರಧಾನಮಂತ್ರಿಯವರು ಮಾಡುತ್ತಿರುವ ನಿರಂತರ ಪ್ರಯತ್ನಗಳಲ್ಲಿ ಇದೂ ಒಂದಾಗಿದೆ. ಯೋಜನೆಗಳ ಅನುಷ್ಠಾನದ ಪರಿಪೂರ್ಣತೆಯ ಗುರಿಯನ್ನು ಸಾಧಿಸುವ ಪ್ರಮುಖ ಹೆಜ್ಜೆಯಾಗಿ, ಪ್ರಧಾನಮಂತ್ರಿಯವರು ಜನ್ ಜಾತೀಯ ಗೌರವ ದಿವಸ ಸಂದರ್ಭದಲ್ಲಿ 'ವಿಕಸಿತ ಭಾರತ ಸಂಕಲ್ಪ ಯಾತ್ರೆ'ಯನ್ನು ಪ್ರಾರಂಭಿಸಲಿದ್ದಾರೆ.
ನೈರ್ಮಲ್ಯ ಸೌಲಭ್ಯಗಳು, ಅಗತ್ಯ ಹಣಕಾಸು ಸೇವೆಗಳು, ವಿದ್ಯುತ್ ಸಂಪರ್ಕಗಳು, ಎಲ್.ಪಿ.ಜಿ ಸಿಲಿಂಡರ್ ಗಳ ಪ್ರವೇಶ, ಬಡವರಿಗೆ ವಸತಿ, ಆಹಾರ ಭದ್ರತೆ, ಸರಿಯಾದ ಪೋಷಣೆ, ಶುದ್ಧ ಕುಡಿಯುವ ನೀರು, ವಿಶ್ವಾಸಾರ್ಹ ಆರೋಗ್ಯ ರಕ್ಷಣೆಯಂತಹ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಜನರಿಗೆ ತಲುಪುವುದು, ಇತ್ಯಾದಿ ಯೋಜನೆಗಳ ಕುರಿತು ಯಾತ್ರೆಯ ಸಮಯದಲ್ಲಿ ಖಚಿತಪಡಿಸಿದ ವಿವರಗಳ ಸಂಗ್ರಹ ಮೂಲಕ ಸಂಭಾವ್ಯ ಫಲಾನುಭವಿಗಳ ದಾಖಲಾತಿಯನ್ನು ಮಾಡಲಾಗುತ್ತದೆ, ಮತ್ತು ಜಾಗೃತಿ ಮೂಡಿಸುವುದು ಮತ್ತು ಪರಿಹಾರ ಒದಗಿಸುವುದು ಯಾತ್ರೆಯ ಪ್ರಧಾನ ಉದ್ದೇಶವಾಗಿದೆ.
ಪ್ರಧಾನಮಂತ್ರಿಯವರು ಜಾರ್ಖಂಡ್ ನ ಖುಂಟಿಯದಲ್ಲಿ ಐ.ಇ.ಸಿ . (ಮಾಹಿತಿ, ಶಿಕ್ಷಣ ಮತ್ತು ಸಂವಹನ) ವ್ಯಾನ್ ಗಳನ್ನು ಹಾಗೂ ಜೊತೆಯಲ್ಲಿ 'ವಿಕಸಿತ ಭಾರತ ಸಂಕಲ್ಪ ಯಾತ್ರೆ'ಯನ್ನು ಚಾಲನೆಗೊಳಿಸಲಿದ್ದಾರೆ. ಆರಂಭದಲ್ಲಿ ಗಮನಾರ್ಹ ಜನಸಂಖ್ಯೆಯ ಬುಡಕಟ್ಟು ಸಮುದಾಯಗಳನ್ನು ಹೊಂದಿರುವ ಜಿಲ್ಲೆಗಳಿಂದ ಈ ವಿಶೇಷ ಯಾತ್ರೆಯು ಪ್ರಾರಂಭವಾಗುತ್ತದೆ, ಮತ್ತು 25 ನೇ ಜನವರಿ 2024 ರ ವೇಳೆಗೆ ದೇಶದಾದ್ಯಂತ ಎಲ್ಲಾ ಜಿಲ್ಲೆಗಳನ್ನು ಒಳಗೊಳ್ಳಲಿದೆ.
ʼಪ್ರಧಾನಮಂತ್ರಿ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ (ಪಿ.ಎಂ. ಪಿ.ವಿ.ಟಿ.ಜಿ) ಮಿಷನ್'.
ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ʼಪ್ರಧಾನಮಂತ್ರಿ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ (ಪಿ.ಎಂ. ಪಿ.ವಿ.ಟಿ.ಜಿ) ಮಿಷನ್' ಎಂಬ ವಿನೂತನ ಉಪಕ್ರಮವನ್ನು ಪ್ರಪ್ರಥಮವಾಗಿ ಪ್ರಾರಂಭಿಸಲಿದ್ದಾರೆ. ದೇಶದಾದ್ಯಂತ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 22,544 ಹಳ್ಳಿಗಳಲ್ಲಿ (220 ಜಿಲ್ಲೆಗಳು) ವಾಸಿಸುವ ಸುಮಾರು 28 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ದುರ್ಬಲ ಬುಡಕಟ್ಟು ಗುಂಪುಗಳಿಗಾಗಿ, ವಿಶೇಷ 75 ʼಪ್ರಧಾನಮಂತ್ರಿ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ (ಪಿ.ಎಂ. ಪಿ.ವಿ.ಟಿ.ಜಿ) ಮಿಷನ್' ಗಳನ್ನು ಪ್ರಧಾನಮಂತ್ರಿಯವರು ಪ್ರಾರಂಭಿಸಲಿದ್ದಾರೆ.
ಈ ಬುಡಕಟ್ಟು ಜನಾಂಗದವರು ಚದುರಿದ, ದೂರದ ಮತ್ತು ಪ್ರವೇಶಿಸಲಾಗದ ಗುಡ್ಡಗಾಡು ವಾಸಸ್ಥಳಗಳಲ್ಲಿ ವಾಸಿಸುತ್ತಾರೆ, ಆಗಾಗ್ಗೆ ದಟ್ಟ ಅರಣ್ಯ ಪ್ರದೇಶಗಳಲ್ಲಿರುತ್ತಾರೆ. ಆದ್ದರಿಂದ ಸುಮಾರು 24,000 ಕೋಟಿ ರೂಪಾಯಿಗಳ ಬಜೆಟ್ ನೊಂದಿಗೆ ಈ ಪಿ.ವಿ.ಟಿ.ಜಿ. ಸಮುದಾಯ/ ಕುಟುಂಬಗಳು ಮತ್ತು ಅವರುಗಳ ವಾಸಸ್ಥಳಗಳನ್ನು ರಸ್ತೆ ಮತ್ತು ಟೆಲಿಕಾಂ ಸಂಪರ್ಕ, ವಿದ್ಯುತ್, ಸುರಕ್ಷಿತ ವಸತಿ , ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಸುಧಾರಿತ ಪ್ರವೇಶ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳು ಮುಂತಾದ ಮೂಲ ಸೌಕರ್ಯಗಳೊಂದಿಗೆ ಸಂಪರ್ಕ ಜೋಡಿಸಿ ಸರ್ವ ವ್ಯವಸ್ಥೆಗೊಳಿಸಲು ಈ ನೂತನ ಉಪಕ್ರಮವನ್ನು ಯೋಜಿಸಲಾಗಿದೆ.
ಹೆಚ್ಚುವರಿಯಾಗಿ, ಪ್ರತ್ಯೇಕವಾಗಿ, ಪಿಎಂಜೆಎವೈ, ಕುಡಗೋಲು ಕೋಶ ರೋಗ ನಿವಾರಣೆ, ಟಿಬಿ ನಿವಾರಣೆ, 100% ರೋಗನಿರೋಧಕ, ಪಿಎಂ ಸುರಕ್ಷಿತ್ ಮಾತೃತ್ವ ಯೋಜನೆ, ಪಿಎಂ ಮಾತೃ ವಂದನಾ ಯೋಜನೆ, ಪಿಎಂ ಪೋಶನ್, ಪಿಎಂ ಜನ್ ಧನ್ ಯೋಜನೆ ಇತ್ಯಾದಿಗಳಿಗೆ ಈ ಸಮುದಾಯದ ಕುಟುಂಬಗಳನ್ನು ಜೋಡಿಸಿ ಸರ್ವ ವ್ಯವಸ್ಥೆಗೊಳಿಸುವುದನ್ನು ಖಾತ್ರಿಪಡಿಸಲಾಗುತ್ತದೆ.
ಪಿಎಂ-ಕಿಸಾನ್ ಯೋಜನೆಯ 15 ನೇ ಕಂತು ಮತ್ತು ಇತರ ಅಭಿವೃದ್ಧಿ ಉಪಕ್ರಮಗಳು
ರೈತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿಯವರ ಬದ್ಧತೆಯ ಮತ್ತೊಂದು ಮಾದರಿ ಉದಾಹರಣೆಯನ್ನು ಇಲ್ಲಿ ಪಿಎಂ-ಕಿಸಾನ್ ಯೋಜನೆಯ ಮೂಲಕ ಉಲ್ಲೇಖಿಸಬಹುದು. ದೇಶದ ರೈತರ ಕಲ್ಯಾಣದ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ 8 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ 15 ನೇ ಕಂತಿನ ಮೊತ್ತ ಸುಮಾರು ರೂ 18,000 ಕೋಟಿಗಳನ್ನು ನೇರ ಪ್ರಯೋಜನಗಳ ವರ್ಗಾವಣೆಯ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಯೋಜನೆಯಡಿ ಇಲ್ಲಿಯವರೆಗೆ 14 ಕಂತುಗಳಲ್ಲಿ ರೂ. 2.62 ಲಕ್ಷ ಕೋಟಿಗಳನ್ನು ರೈತರ ಖಾತೆಗಳಿಗೆ ನೇರ ಪ್ರಯೋಜನಗಳ ವರ್ಗಾವಣೆಯ ಮೂಲಕ ವರ್ಗಾಯಿಸಲಾಗಿದೆ.
ರೈಲು, ರಸ್ತೆ, ಶಿಕ್ಷಣ, ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಂತಹ ಬಹು ವಲಯಗಳಲ್ಲಿ ರೂ 7200 ಕೋಟಿ ಮೊತ್ತದ ವಿವಿಧ ಯೋಜನೆಗಳ ಉದ್ಘಾಟನೆ, ದೇಶಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ಕಾರ್ಯಗಳನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ.
ರಾಷ್ಟ್ರೀಯ ಹೆದ್ದಾರಿ133 ರ ಮಹಾಗಾಮಾ - ಹಂಸ್ದಿಹಾ ವಿಭಾಗದ 52 ಕಿಮೀ ಉದ್ದದ ನಾಲ್ಕು ಪಥವನ್ನು ಒಳಗೊಂಡಿವೆ; ರಾಷ್ಟ್ರೀಯ ಹೆದ್ದಾರಿ 114-ಎ ನ ಬಸುಕಿನಾಥ್ - ದಿಯೋಘರ್ ವಿಭಾಗದ 45 ಕಿಮೀ ವಿಸ್ತಾರದ ನಾಲ್ಕು ಲೇನಿಂಗ್; ಕೆಡಿಹೆಚ್ –ಪುರ್ಣಾದಿಹ್ ಕಲ್ಲಿದ್ದಲು ನಿರ್ವಹಣೆ ಘಟಕ; ಐಐಐಟಿ ರಾಂಚಿಯ ಹೊಸ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಟ್ಟಡ – ಮುಂತಾದವಗಳು ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ಮಾಡಲಿರುವ ಯೋಜನೆಗಳಾಗಿವೆ.
ಐಐಎಂ ರಾಂಚಿಯ ಹೊಸ ಕ್ಯಾಂಪಸ್ ; ಐಐಟಿ ಐಎಸ್ಎಂ ಧನ್ಬಾದ್ನ ಹೊಸ ಹಾಸ್ಟೆಲ್; ಬೊಕಾರೊದಲ್ಲಿ ಪೆಟ್ರೋಲಿಯಂ ತೈಲ ಮತ್ತು ಲೂಬ್ರಿಕೆಂಟ್ಸ್ ಡಿಪೋ; ಹತಿಯಾ-ಪಕ್ರಾ ವಿಭಾಗ, ತಲ್ಗೇರಿಯಾ - ಬೊಕಾರೊ ವಿಭಾಗ, ಮತ್ತು ಜರಂಗ್ಡಿಹ್-ಪತ್ರಾಟು ವಿಭಾಗವನ್ನು ದ್ವಿಗುಣಗೊಳಿಸುವ ಹಲವಾರು ರೈಲ್ವೆ ಯೋಜನೆಗಳು, ಇದಲ್ಲದೆ, ಜಾರ್ಖಂಡ್ ರಾಜ್ಯದಲ್ಲಿ 100% ರಷ್ಟು ರೈಲ್ವೆ ವಿದ್ಯುದ್ದೀಕರಣ ಯೋಜನೆ – ಮುಂತಾದವಗಳು ಪ್ರಧಾನಮಂತ್ರಿಯವರು ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿರುವ ಯೋಜನೆಗಳಾಗಿವೆ.