ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ಸೆಪ್ಟೆಂಬರ್ 15ರಿಂದ 17ರ ವರೆಗೆ ಜಾರ್ಖಂಡ್, ಗುಜರಾತ್ ಮತ್ತು ಒಡಿಶಾ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 15 ರಂದು ಜಾರ್ಖಂಡ್‌ಗೆ ಭೇಟಿ ನೀಡಲಿದ್ದು, ಅಂದು ಬೆಳಗ್ಗೆ ಸುಮಾರು 10 ಗಂಟೆಗೆ ಅವರು ಟಾಟಾನಗರ-ಪಾಟ್ನಾ ನಡುವಿನ ವಂದೇ ಭಾರತ್ ರೈಲಿಗೆ ಜಾರ್ಖಂಡ್‌ನ ಟಾಟಾನಗರ ಜಂಕ್ಷನ್ ರೈಲು ನಿಲ್ದಾಣದಲ್ಲಿ ಹಸಿರುನಿಶಾನೆ ತೋರಲಿದ್ದಾರೆ. ಬೆಳಗ್ಗೆ 10.30ರ ಸುಮಾರಿಗೆ ಅವರು 660 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಜಾರ್ಖಂಡ್‌ನ ಟಾಟಾನಗರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ(ಪಿಎಂಎವೈ-ಜಿ) ಯೋಜನೆಯ 20 ಸಾವಿರ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಿದ್ದಾರೆ.
ಪ್ರಧಾನ ಮಂತ್ರಿ ಅವರು ಸೆಪ್ಟೆಂಬರ್ 16ರಂದು ಬೆಳಗ್ಗೆ ಸುಮಾರು 09.45ಕ್ಕೆ ಗಾಂಧಿನಗರದಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಸುಮಾರು 10.30ಕ್ಕೆ ಅವರು ಗುಜರಾತ್‌ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ 4ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ವಸ್ತುಪ್ರದರ್ಶನ(ರೀ-ಇನ್ವೆಸ್ಟ್) ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 1:45ರ ಸುಮಾರಿಗೆ ಪ್ರಧಾನಿ ಅವರು ಅಹಮದಾಬಾದ್ ಮೆಟ್ರೋ ರೈಲು ಯೋಜನೆ ಉದ್ಘಾಟಿಸಿ, ಸೆಕ್ಷನ್ 1 ಮೆಟ್ರೋ ನಿಲ್ದಾಣದಿಂದ ಗಿಫ್ಟ್ ಸಿಟಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಸಂಚಾರ ಮಾಡುತ್ತಾರೆ. ಅಪರಾಹ್ನ 3.30ಕ್ಕೆ ಅಹಮದಾಬಾದ್‌ನಲ್ಲಿ 8,000 ಕೋಟಿ ರೂ.ಗಿಂತ ಅಧಿಕ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರಧಾನ ಮಂತ್ರಿ ಅವರು ಸೆಪ್ಟೆಂಬರ್ 17ರಂದು, ಒಡಿಶಾಗೆ ಪ್ರಯಾಣಿಸಲಿದ್ದಾರೆ. ಅಂದು ಬೆಳಗ್ಗೆ ಸುಮಾರು 11.15ಕ್ಕೆ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 12 ಗಂಟೆ ಸುಮಾರಿಗೆ ಒಡಿಶಾದ ಭುವನೇಶ್ವರದಲ್ಲಿ 3800 ಕೋಟಿ ರೂ. ಗಿಂತ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಟಾಟಾನಗರದಲ್ಲಿ ಪ್ರಧಾನ ಮಂತ್ರಿ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ 660 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ದಿಯೋಘರ್ ಜಿಲ್ಲೆಯ ಮಧುಪುರ್ ಬೈಪಾಸ್ ಲೈನ್ ಮತ್ತು ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಹಜಾರಿಬಾಗ್ ಟೌನ್ ಕೋಚಿಂಗ್ ಡಿಪೋಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯ ಕಾಮಗಾರಿ ಪೂರ್ಣಗೊಂಡರೆ, ಮಧುಪುರ್ ಬೈಪಾಸ್ ಮಾರ್ಗವು ಹೌರಾ-ದೆಹಲಿ ಮುಖ್ಯ ಮಾರ್ಗದಲ್ಲಿ ರೈಲುಗಳನ್ನು ಅಡೆತಡೆ ತಪ್ಪಿಸಲು ಅನುಕೂಲವಾಗುತ್ತದೆ. ಜತೆಗೆ, ಗಿರಿದಿಹ್ ಮತ್ತು ಜಸಿದಿಹ್ ನಡುವಿನ ಪ್ರಯಾಣದ ಸಮಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಹಜಾರಿಬಾಗ್ ಟೌನ್ ಕೋಚಿಂಗ್ ಡಿಪೋ ಈ ನಿಲ್ದಾಣದಲ್ಲಿ ಕೋಚಿಂಗ್ ಸರಕು(ಸ್ಟಾಕ್)ಗಳ ನಿರ್ವಹಣೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ.
ಪ್ರಧಾನ ಮಂತ್ರಿ ಅವರು ಕುರ್ಕುರಾ-ಕನರೋನ್ ಜೋಡಿ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ, ಇದು ಬೊಂಡಾಮುಂಡ-ರಾಂಚಿ ಏಕಮಾರ್ಗದ ಭಾಗವಾಗಿದೆ. ರಾಂಚಿ, ಮುರಿ ಮತ್ತು ಚಂದ್ರಾಪುರ ನಿಲ್ದಾಣಗಳ ಮೂಲಕ ರೂರ್ಕೆಲಾ-ಗೋಮೋಹ್ ಮಾರ್ಗದ ಒಂದು ಭಾಗವಾಗಿದೆ. ಈ ಯೋಜನೆಯು ಸರಕು ಮತ್ತು ಪ್ರಯಾಣಿಕರ ದಟ್ಟಣೆ ನಿವಾರಿಸಿ, ಹೆಚ್ಚಿನ ಸಂಚಾರಕ್ಕೆ ಗಣನೀಯವಾಗಿ ಸಹಾಯ ಮಾಡುತ್ತದೆ. ಇದರ ಹೊರತಾಗಿ, ಸಾಮಾನ್ಯ ಜನರಿಗೆ ಸುರಕ್ಷತೆ ಹೆಚ್ಚಿಸಲು 4 ರಸ್ತೆ ಕೆಳ ಸೇತುವೆಗಳನ್ನು(ಆರ್ ಯು ಬಿಗಳು) ರಾಷ್ಟ್ರಕ್ಕೆ ಪ್ರಧಾನಿ ಸಮರ್ಪಿಸಲಿದ್ದಾರೆ.
6 ವಂದೇ ಭಾರತ್ ರೈಲುಗಳಿಗೆ ಪ್ರಧಾನ ಮಂತ್ರಿ ಚಾಲನೆ ನೀಡಲಿದ್ದಾರೆ. ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಈ ಮಾರ್ಗಗಳಲ್ಲಿ ಸಂಪರ್ಕ ಸುಧಾರಿಸುತ್ತವೆ:
1) ಟಾಟಾನಗರ - ಪಾಟ್ನಾ
2) ಭಾಗಲ್ಪುರ್ - ದುಮ್ಕಾ - ಹೌರಾ
3) ಬ್ರಹ್ಮಪುರ - ಟಾಟಾನಗರ
4) ಗಯಾ - ಹೌರಾ
5) ದಿಯೋಘರ್ - ವಾರಾಣಸಿ
6) ರೂರ್ಕೆಲಾ – ಹೌರಾ
6 ಮಾರ್ಗಗಳಲ್ಲಿ ಪರಿಚಯಿಸಲಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಾಮಾನ್ಯ ಪ್ರಯಾಣಿಕರು, ವೃತ್ತಿಪರರು, ವ್ಯಾಪಾರ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲ ನೀಡುತ್ತವೆ. ಈ ರೈಲುಗಳು ದಿಯೋಘರ್(ಜಾರ್ಖಂಡ್‌ನ ಬೈದ್ಯನಾಥ ಧಾಮ), ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನ(ಉತ್ತರ ಪ್ರದೇಶ), ಕಾಳಿಘಾಟ್, ಕೋಲ್ಕತ್ತಾದ ಬೇಲೂರು ಮಠ(ಪಶ್ಚಿಮ ಬಂಗಾಳ) ಮತ್ತಿತ ಯಾತ್ರಾ ಸ್ಥಳಗಳಿಗೆ ತ್ವರಿತ ಪ್ರಯಾಣ ಒದಗಿಸಿ, ಈ ಪ್ರದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಉತ್ತೇಜಿಸುತ್ತದೆ. ಇದಲ್ಲದೆ, ಧನ್‌ಬಾದ್‌ನ ಕಲ್ಲಿದ್ದಲು ಗಣಿ ಉದ್ಯಮಗಳು, ಕೋಲ್ಕತ್ತಾದ ಸೆಣಬು ಕೈಗಾರಿಕೆಗಳು, ದುರ್ಗಾಪುರದಲ್ಲಿ ಕಬ್ಬಿಣ ಮತ್ತು ಉಕ್ಕಿನ ಸಂಬಂಧಿತ ಕೈಗಾರಿಕೆಗಳು ಸಹ ಪ್ರಮುಖ ಉತ್ತೇಜನ ಪಡೆಯುತ್ತವೆ.
ಎಲ್ಲರಿಗೂ ವಸತಿ ಕಲ್ಪಿಸುವ ಬದ್ಧತೆಗೆ ಅನುಗುಣವಾಗಿ ಶ್ರೀ ಮೋದಿ ಅವರು, ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ(ಪಿಎಂಎವೈ-ಜಿ) ಜಾರ್ಖಂಡ್‌ನ 20 ಸಾವಿರ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸುವ ಜತೆಗೆ, ಫಲಾನುಭವಿಗಳಿಗೆ 1ನೇ ಕಂತು ಸಹಾಯಧನ ಬಿಡುಗಡೆ ಮಾಡಲಿದ್ದಾರೆ. ಪ್ರಧಾನ ಮಂತ್ರಿಗಳು 46 ಸಾವಿರ ಫಲಾನುಭವಿಗಳ ಗೃಹ ಪ್ರವೇಶ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.
ಗಾಂಧಿನಗರದಲ್ಲಿ ಪ್ರಧಾನ ಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ RE-INVEST-2024 ವಸ್ತುಪ್ರದರ್ಶನ(ಎಕ್ಸ್-ಪೋ) ಉದ್ಘಾಟಿಸಲಿದ್ದಾರೆ. ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ನಿಯೋಜನೆಯಲ್ಲಿ ಭಾರತದ ಪ್ರಭಾವಶಾಲಿ ಪ್ರಗತಿಯ ಮೇಲೆ ಬೆಳಕು ಚೆಲ್ಲಲು ಈ ಕಾರ್ಯಕ್ರಮ ಸಿದ್ಧವಾಗಿದೆ. ಇದು ಜಾಗತಿಕ ಪ್ರತಿನಿಧಿಗಳನ್ನು ಆಕರ್ಷಿಸುವ ಎರಡೂವರೆ ದಿನಗಳ ಸಮ್ಮೇಳನವಾಗಿದೆ. ಪ್ರತಿನಿಧಿಗಳು ಮುಖ್ಯಮಂತ್ರಿಗಳ ಪೂರ್ಣ ಸಭೆ, ಸಿಇಒ ದುಂಡುಮೇಜಿನ ಸಭೆ ಮತ್ತು ನವೀನ ಹಣಕಾಸು, ಹಸಿರು ಹೈಟ್ರೋಜನ್ ಮತ್ತು ಭವಿಷ್ಯದ ಇಂಧನ ಪರಿಹಾರಗಳ ಕುರಿತು ವಿಶೇಷ ಚರ್ಚೆಗಳನ್ನು ನಡೆಸುವ ಸಮಗ್ರ ಕಾರ್ಯಕ್ರಮದಲ್ಲಿ ತೊಡಗುತ್ತಾರೆ. ಜರ್ಮನಿ, ಆಸ್ಟ್ರೇಲಿಯಾ, ಡೆನ್ಮಾರ್ಕ್ ಮತ್ತು ನಾರ್ವೆ ರಾಷ್ಟ್ರಗಳು ಈ ಕಾರ್ಯಕ್ರಮದಲ್ಲಿ ಪಾಲುದಾರ ರಾಷ್ಟ್ರಗಳಾಗಿ ಭಾಗವಹಿಸುತ್ತಿವೆ. ಗುಜರಾತ್ ರಾಜ್ಯವು ಅತಿಥೇಯ ರಾಜ್ಯವಾಗಿದೆ. ಆಂಧ್ರ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳು ಪಾಲುದಾರ ರಾಜ್ಯಗಳಾಗಿ ಭಾಗವಹಿಸುತ್ತಿವೆ.
200 ಗಿಗಾವ್ಯಾಟ್ ಗಿಂತಲೂ ಹೆಚ್ಚಿನ ಸ್ಥಾಪಿತ ಉರವಲುಯೇತರ ಇಂಧನ ಸಾಮರ್ಥ್ಯದ ಭಾರತದ ಗಮನಾರ್ಹ ಸಾಧನೆಗೆ ನೀಡಿರುವ ಪ್ರಮುಖ ಕೊಡುಗೆದಾರರನ್ನು ಈ ಶೃಂಗಸಭೆಯಲ್ಲಿ ಗೌರವಿಸಲಾಗುತ್ತದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು, ಸ್ಟಾರ್ಟಪ್‌ಗಳು ಮತ್ತು ಪ್ರಮುಖ ಉದ್ಯಮ ಪಾಲುದಾರರ ಅತ್ಯಾಧುನಿಕ ಆವಿಷ್ಕಾರಗಳನ್ನು ಪ್ರದರ್ಶಿಸುವ ವಸ್ತುಪ್ರದರ್ಶನ ಆಯೋಜಿಸಲಾಗಿದೆ. ಈ ಪ್ರದರ್ಶನವು ಸುಸ್ಥಿರ ಭವಿಷ್ಯಕ್ಕಾಗಿ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ.
ಅಹಮದಾಬಾದ್‌ನಲ್ಲಿ ಪ್ರಧಾನಮಂತ್ರಿ
ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರಧಾನಮಂತ್ರಿ ಅವರು 8,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸಮಖಿಯಾಲಿ - ಗಾಂಧಿಧಾಮ್ ಮತ್ತು ಗಾಂಧಿಧಾಮ್ - ಆದಿಪುರ ರೈಲು ಮಾರ್ಗಗಳ ಚತುಷ್ಪಥ, ಅಹಮದಾಬಾದ್‌ನ ಎಎಮ್‌ಸಿಯಲ್ಲಿ ಪ್ರಾತಿನಿಧಿ ರಸ್ತೆಗಳ ಅಭಿವೃದ್ಧಿ ಮತ್ತು ಬಕ್ರೋಲ್, ಹಥಿಜನ್, ರಾಮೋಲ್ ಮತ್ತು ಪಂಜರ್ಪೋಲ್ ಜಂಕ್ಷನ್ ಮೇಲೆ ಫ್ಲೈಓವರ್ ಸೇತುವೆಗಳ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ..
ಪ್ರಧಾನ ಮಂತ್ರಿ ಅವರು 30 ಮೆಗಾವ್ಯಾಟ್ ಸೋಲಾರ್ ಸಿಸ್ಟಮ್ ಉದ್ಘಾಟಿಸಲಿದ್ದಾರೆ. ಅದಲ್ಲದೆ, ಕಚ್ ಲಿಗ್ನೈಟ್ ಥರ್ಮಲ್ ಪವರ್ ಸ್ಟೇಷನ್, ಕಚ್‌ನಲ್ಲಿ 35 ಮೆಗಾವ್ಯಾಟ್ ಬಿಇಎಸ್ಎಸ್ ಸೋಲಾರ್ ಪಿವಿ ಯೋಜನೆ ಮತ್ತು ಮೊರ್ಬಿ ಮತ್ತು ರಾಜ್‌ಕೋಟ್‌ನಲ್ಲಿ 220 ಕಿಲೋವೋಲ್ಟ್ ಸಬ್‌ಸ್ಟೇಷನ್‌ಗಳನ್ನು ಅವರು ಉದ್ಘಾಟಿಸಲಿದ್ದಾರೆ.
ಹಣಕಾಸು ಸೇವೆಗಳನ್ನು ಸುವ್ಯವಸ್ಥಿತಗೊಳಿಸಲು ವಿನ್ಯಾಸಗೊಳಿಸಲಾದ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರದ ಏಕಗವಾಕ್ಷಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ(ಸ್ವಿಟ್ಸ್)ಯನ್ನು ಪ್ರಧಾನ ಮಂತ್ರಿ ಅನಾವರಣಗೊಳಿಸಲಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ ಯೋಜನೆ ಅಡಿ, ಪ್ರಧಾನಮಂತ್ರಿ ಅವರು ಫಲಾನುಭವಿಗಳಿಗೆ 30,000ಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಲಿದ್ದಾರೆ. ಜತೆಗೆ, ಈ ಮನೆಗಳಿಗೆ ಮೊದಲ ಕಂತು ಬಿಡುಗಡೆ ಮಾಡುತ್ತಾರೆ, ಜತೆಗೆ ಪಿಎಂಎವೈ ಯೋಜನೆಯಡಿ, ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. ಪಿಎಂಎವೈ ಯೋಜನೆಯ ನಗರ ಮತ್ತು ಗ್ರಾಮೀಣ ವಿಭಾಗಗಳ ಅಡಿ, ಪೂರ್ಣಗೊಂಡ ಮನೆಗಳನ್ನು ರಾಜ್ಯದ ಫಲಾನುಭವಿಗಳಿಗೆ ಹಸ್ತಾಂತರಿಸಲಿದ್ದಾರೆ.
ಇದಲ್ಲದೆ, ಅವರು ಭುಜ್-ಅಹಮದಾಬಾದ್ ಮಾರ್ಗದ ಭಾರತದ ಮೊದಲ ವಂದೇ ಮೆಟ್ರೋ ಸೇರಿದಂತೆ ಹಲವಾರು ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಹಸಿರುನಿಶಾನೆ ತೋರಲಿದ್ದಾರೆ. ನಾಗ್‌ಪುರದಿಂದ ಸಿಕಂದರಾಬಾದ್, ಕೊಲ್ಹಾಪುರದಿಂದ ಪುಣೆ, ಆಗ್ರಾ ಕ್ಯಾಂಟ್‌ನಿಂದ ಬನಾರಸ್, ದುರ್ಗ್‌ನಿಂದ ವಿಶಾಖಪಟ್ಟಣಂ, ಪುಣೆಯಿಂದ ಹುಬ್ಬಳ್ಳಿ ಮತ್ತು ವಾರಣಾಸಿಯಿಂದ ದೆಹಲಿಗೆ ಮೊದಲ 20-ಕೋಚ್ ಗಳಿರುವ ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರುನಿಶಾನೆ ತೋರಲಿದ್ದಾರೆ.
ಭುವನೇಶ್ವರದಲ್ಲಿ ಪ್ರಧಾನಮಂತ್ರಿ
ಒಡಿಶಾ ಸರ್ಕಾರದ ಪ್ರಮುಖ ಯೋಜನೆ ‘ಸುಭದ್ರ’ಕ್ಕೆ ಭುವನೇಶ್ವರದಲ್ಲಿ ಪ್ರಧಾನ ಮಂತ್ರಿ ಚಾಲನೆ ನೀಡಲಿದ್ದಾರೆ. ಇದು ಒಂಟಿ ಮಹಿಳಾ ಕೇಂದ್ರಿತ ಬೃಹತ್ ಯೋಜನೆಯಾಗಿದೆ, ಈ ಯೋಜನೆಯಲ್ಲಿ 1 ಕೋಟಿಗೂ ಹೆಚ್ಚು ಮಹಿಳೆಯರು ಒಳಗೊಳ್ಳುವ ನಿರೀಕ್ಷೆಯಿದೆ. ಈ ಯೋಜನೆಯಡಿ, 21-60 ವರ್ಷ ವಯಸ್ಸಿನ ಎಲ್ಲಾ ಅರ್ಹ ಫಲಾನುಭವಿಗಳು 2024-25ರಿಂದ 2028-29ರ ನಡುವಿನ 5 ವರ್ಷಗಳ ಅವಧಿಯಲ್ಲಿ 50,000 ರೂ. ಸಹಾಯಧನ ಪಡೆಯಲಿದ್ದಾರೆ. ವಾರ್ಷಿಕ 10,000 ರೂ. ಮೊತ್ತವನ್ನು 2 ಸಮಾನ ಕಂತುಗಳಲ್ಲಿ ನೇರವಾಗಿ ಫಲಾನುಭವಿಯ ಆಧಾರ್-ಸಕ್ರಿಯಗೊಳಿಸಿದ ಮತ್ತು ಡಿಬಿಟಿ-ಸಕ್ರಿಯಗೊಳಿಸಿದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಐತಿಹಾಸಿಕ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಿ ಅವರು 10 ಲಕ್ಷಕ್ಕೂ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಿದ್ದಾರೆ.
ಪ್ರಧಾನ ಮಂತ್ರಿ ಅವರು ಭುವನೇಶ್ವರದಲ್ಲಿ 2800 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ರೈಲ್ವೆ ಯೋಜನೆಗಳು ಒಡಿಶಾದಲ್ಲಿ ರೈಲ್ವೆ ಮೂಲಸೌಕರ್ಯ ಹೆಚ್ಚಿಸಲಿವೆ, ಈ ಪ್ರದೇಶದಲ್ಲಿ ಬೆಳವಣಿಗೆ ಮತ್ತು ಸಂಪರ್ಕ ಸುಧಾರಿಸುತ್ತವೆ. ಅಲ್ಲದೆ, 1000 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪಿಎಂಎವೈ-ಜಿ ಯೋಜನೆ ಅಡಿ, 14 ರಾಜ್ಯಗಳ ಸುಮಾರು 10 ಲಕ್ಷ ಫಲಾನುಭವಿಗಳಿಗೆ ಸಹಾಯಧನದ 1ನೇ ಕಂತನ್ನು ಪ್ರಧಾನ ಮಂತ್ರಿ ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದ ವೇಳೆ ಪಿಎಂಎವೈ ಯೋಜನೆಯ ಗ್ರಾಮೀಣ ಮತ್ತು ನಗರ ವಿಭಾಗದ ದೇಶಾದ್ಯಂತದ 26 ಲಕ್ಷ ಫಲಾನುಭವಿಗಳ ಗೃಹ ಪ್ರವೇಶ ಆಚರಣೆ ನಡೆಯಲಿದೆ. ಪ್ರಧಾನ ಮಂತ್ರಿ ಅವರು ಮನೆಯ ಕೀಲಿಗಳನ್ನು ಪಿಎಂಎವೈ(ಗ್ರಾಮೀಣ ಮತ್ತು ನಗರ) ಫಲಾನುಭವಿಗಳಿಗೆ ಹಸ್ತಾಂತರಿಸಲಿದ್ದಾರೆ. ಪಿಎಂಎವೈ-ಜಿ ಯೋಜನೆಗೆ ಹೆಚ್ಚುವರಿ ಕುಟುಂಬಗಳ ಸಮೀಕ್ಷೆ ನಡೆಸಲು ನೆರವಾಗುವ ಆವಾಸ್ + 2024 ಅಪ್ಲಿಕೇಶನ್(ಆಪ್) ಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಇದಲ್ಲದೆ, ಪ್ರಧಾನ ಮಂತ್ರಿ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ(ಪಿಎಂಎವೈ-ಯು) 2.0ರ ಕಾರ್ಯಾಚರಣೆ ಮಾರ್ಗಸೂಚಿಗಳನ್ನು ಅನಾವರಣಗೊಳಿಸಲಿದ್ದಾರೆ.