ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 26-27, 2023 ರಂದು ಗುಜರಾತ್ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 27 , 2023ರಂದು ಬೆಳಗ್ಗೆ ಸುಮಾರು 10 ಗಂಟೆಗೆ, ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ 20 ವರ್ಷಗಳ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಲಿದ್ದಾರೆ. ಅದರ ನಂತರ, ಮಧ್ಯಾಹ್ನ 12:45 ರ ಸುಮಾರಿಗೆ, ಪ್ರಧಾನಮಂತ್ರಿಯವರು ಛೋಟೌಡೆಪುರದ ಬೋಡೆಲಿಯನ್ನು ತಲುಪಲಿದ್ದಾರೆ, ಅಲ್ಲಿ ಅವರು ರೂ.5200 ಕೋಟಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಮತ್ತು ದೇಶಕ್ಕೆ ಸಮರ್ಪಿಸಲಿದ್ದಾರೆ.
20 ವರ್ಷಗಳನ್ನು ತುಂಬಿದ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ ಅಹಮದಾಬಾದ್ ನ ಸೈನ್ಸ್ ಸಿಟಿಯಲ್ಲಿ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ 20 ವರ್ಷಗಳ ಸಂಭ್ರಮಾಚರಣೆಯ ನಿಮಿತ್ತ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಲಿದ್ದಾರೆ. ಇದು ಉದ್ಯಮ ಸಂಘಟನೆಗಳು, ಒಕ್ಕೂಟಗಳು, ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದ ಪ್ರಮುಖ ವ್ಯಕ್ತಿಗಳು, ಯುವ ಉದ್ಯಮಿಗಳು, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಇತರರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
20 ವರ್ಷಗಳ ಹಿಂದೆ, ಅಂದಿನ ಗುಜರಾತ್ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯು ಪ್ರಾರಂಭವಾಯಿತು. ಸೆಪ್ಟೆಂಬರ್ 28, 2003 ರಂದು ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ ಪ್ರಯಾಣ ಪ್ರಾರಂಭವಾಯಿತು. ಕಾಲಾನಂತರದಲ್ಲಿ, ಇದು ನಿಜವಾದ ಜಾಗತಿಕ ಕಾರ್ಯಕ್ರಮವಾಗಿ ರೂಪಾಂತರಗೊಂಡಿತು. ಭಾರತದಲ್ಲಿನ ಅತ್ಯಂತ ಪ್ರಮುಖ ವ್ಯಾಪಾರ ಶೃಂಗಸಭೆಗಳ ಸ್ಥಾನಮಾನವನ್ನು ಪಡೆಯಿತು. ಶೃಂಗಸಭೆಯು 2019 ರಲ್ಲಿ 135 ಕ್ಕೂ ಹೆಚ್ಚು ರಾಷ್ಟ್ರಗಳಿಂದ ಸಾವಿರಾರು ಪ್ರತಿನಿಧಿಗಳಿಂದ ಅಗಾಧ ಭಾಗವಹಿಸುವಿಕೆ ಹಾಗೂ 2003 ರಲ್ಲಿ ಸುಮಾರು 300 ಅಂತರಾಷ್ಟ್ರೀಯ ಭಾಗವಹಿಸುವವರೊಂದಿಗೆ ಸ್ಥಾನಮಾನ ಪಡೆಯಿತು.
ಕಳೆದ 20 ವರ್ಷಗಳಲ್ಲಿ, "ಗುಜರಾತ್ ಅನ್ನು ಆದ್ಯತೆಯ ಹೂಡಿಕೆಯ ತಾಣವಾಗಿ ಮಾಡುವುದು" ಧ್ಯೇಯದಿಂದ ತೊಡಗಿ, "ಹೊಸ ಭಾರತವನ್ನು ರೂಪಿಸುವುದು" ವರೆಗೆ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯು ಜಾಗತಿಕವಾಗಿ ವಿಕಸನಗೊಂಡಿದೆ. ವೈಬ್ರಂಟ್ ಗುಜರಾತ್ನ ಅಪ್ರತಿಮ ಯಶಸ್ಸು ಇಡೀ ದೇಶಕ್ಕೆ ಒಂದು ಮಾದರಿಯಾಗಿದೆ ಮತ್ತು ಇಂತಹ ಹೂಡಿಕೆ ಶೃಂಗಸಭೆಗಳ ಸಂಘಟನೆಯನ್ನು ಪುನರಾವರ್ತಿಸಲು ಇತರ ಭಾರತೀಯ ರಾಜ್ಯಗಳನ್ನು ಈ ಸಭೆಯು ಪ್ರೇರೇಪಿಸಿದೆ.
ಛೋಟೌದೇಪುರದ ಬೋಡೆಲಿಯಲ್ಲಿ ಪ್ರಧಾನಮಂತ್ರಿ ‘ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್’ ಕಾರ್ಯಕ್ರಮದಡಿಯಲ್ಲಿ ಪ್ರಧಾನಮಂತ್ರಿಯವರು ರೂಪಾಯಿ 4500 ಕೋಟಿಗೂ ಹೆಚ್ಚು ಮೌಲ್ಯದ ಬಹುವಿಧದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದು ಹಾಗೂ ದೇಶಕ್ಕೆ ಸಮರ್ಪಿಸಲಿರುವ ಕಾರಣ ಈ ಯೋಜನೆಗಳಿಂದ ಗುಜರಾತ್ ನಾದ್ಯಂತ ಶಾಲಾ ಮೂಲಸೌಕರ್ಯಕ್ಕೆ ಭಾರಿ ಉತ್ತೇಜನ ದೊರೆಯಲಿದೆ. ಗುಜರಾತ್ ನ ಶಾಲೆಗಳಾದ್ಯಂತ ನಿರ್ಮಿಸಲಾದ ಸಾವಿರಾರು ಹೊಸ ತರಗತಿ ಕೊಠಡಿಗಳು, ಸ್ಮಾರ್ಟ್ ತರಗತಿಗಳು, ಕಂಪ್ಯೂಟರ್ ಲ್ಯಾಬ್ಗಳು, ಸ್ಟೆಮ್ (ವಿಜ್ಞಾನ, ತಂತ್ರಜ್ಞಾನ ಎಂಜಿನಿಯರಿಂಗ್ ಮತ್ತು ಗಣಿತ) ಲ್ಯಾಬ್ಗಳು ಮತ್ತು ಇತರ ಮೂಲಸೌಕರ್ಯಗಳನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ‘ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್’ ಕಾರ್ಯಕ್ರಮದಡಿಯಲ್ಲಿ ಗುಜರಾತ್ ಶಾಲೆಗಳಾದ್ಯಂತ ಸಾವಿರಾರು ತರಗತಿ ಕೊಠಡಿಗಳನ್ನು ಸುಧಾರಿಸಲು ಮತ್ತು ನವೀಕರಿಸಲು ಅವರು ಅಡಿಪಾಯ (ಶಂಕುಸ್ಥಾಪನೆ) ಹಾಕಲಿದ್ದಾರೆ.
ಪ್ರಧಾನಮಂತ್ರಿ ಅವರು ‘ವಿದ್ಯಾ ಸಮೀಕ್ಷಾ ಕೇಂದ್ರ 2.0’ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗುಜರಾತ್ನಲ್ಲಿ ಶಾಲೆಗಳ ನಿರಂತರ ಮೇಲ್ವಿಚಾರಣೆ ಮತ್ತು ವಿದ್ಯಾರ್ಥಿಗಳ ಕಲಿಕಾ ಫಲಿತಾಂಶಗಳಲ್ಲಿ ಸುಧಾರಣೆಯನ್ನು ಖಚಿತಪಡಿಸಿರುವ ‘ವಿದ್ಯಾ ಸಮೀಕ್ಷಾ ಕೇಂದ್ರ’ದ ಯಶಸ್ಸಿನ ಮೇಲೆ ಈ ಯೋಜನೆಯನ್ನು ನಿರ್ಮಿಸಲಾಗಿದೆ. ‘ವಿದ್ಯಾ ಸಮೀಕ್ಷಾ ಕೇಂದ್ರ 2.0’ ಗುಜರಾತ್ನ ಎಲ್ಲಾ ಜಿಲ್ಲೆಗಳು ಮತ್ತು ಬ್ಲಾಕ್ಗಳಲ್ಲಿ ವಿದ್ಯಾ ಸಮೀಕ್ಷಾ ಕೇಂದ್ರಗಳ ಸ್ಥಾಪನೆಗೆ ಕಾರಣವಾಗುತ್ತದೆ.
ಈ ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ವಡೋದರ ಜಿಲ್ಲೆಯ ತಾಲೂಕಾ ಸಿನೋರ್ನಲ್ಲಿ 'ಒಡರಾ ದಭೋಯಿ-ಸಿನೋರ್-ಮಲ್ಸಾರ್-ಆಸಾ ರಸ್ತೆ'ಯಲ್ಲಿ ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹೊಸ ಸೇತುವೆ, ಚಬ್ ತಲವ್ ಮರು-ಅಭಿವೃದ್ಧಿ ಯೋಜನೆ, ದಾಹೋದ್ನಲ್ಲಿ ನೀರು ಸರಬರಾಜು ಯೋಜನೆ, ವಡೋದರಾದಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ ಹೊಸದಾಗಿ ನಿರ್ಮಿಸಲಾದ ಸುಮಾರು 400 ಮನೆಗಳು, ಗುಜರಾತ್ನಾದ್ಯಂತ 7500 ಹಳ್ಳಿಗಳಲ್ಲಿ ಗ್ರಾಮ ವೈ-ಫೈ ಯೋಜನೆ; ಮತ್ತು ದಾಹೋಡ್ನಲ್ಲಿ ಹೊಸದಾಗಿ ನಿರ್ಮಿಸಲಾದ ಜವಾಹರ್ ನವೋದಯ ವಿದ್ಯಾಲಯ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಛೋಟೌಡೆಪುರದಲ್ಲಿ ನೀರು ಸರಬರಾಜು ಯೋಜನೆಯ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ಅವರು ನೆರವೇರಿಸಲಿದ್ದಾರೆ; ಗೋಧ್ರಾ, ಪಂಚಮಹಲ್ ನಲ್ಲಿ ಮೇಲ್ಸೇತುವೆ; ಮತ್ತು ಕೇಂದ್ರ ಸರ್ಕಾರದ 'ಬ್ರಾಡ್ಕಾಸ್ಟಿಂಗ್ ಇನ್ಫ್ರಾಸ್ಟ್ರಕ್ಚರ್ ಅಂಡ್ ನೆಟ್ವರ್ಕ್ ಡೆವಲಪ್ಮೆಂಟ್ (ಬಿಐಎನ್ಡಿ)' ಯೋಜನೆಯಡಿಯಲ್ಲಿ ದಹೋದ್ನಲ್ಲಿ ಎಫ್.ಎಂ. ರೇಡಿಯೋ ಸ್ಟುಡಿಯೋ ನಿರ್ಮಿಸಲಾಗುವುದು, ಇದರ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ಅವರು ನೆರವೇರಿಸಲಿದ್ದಾರೆ.