ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 10 ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಸುಮಾರು 10.15 ಕ್ಕೆ ಪ್ರಧಾನಮಂತ್ರಿ ಅವರು ನವಸಾರಿಯಲ್ಲಿ ಗುಜರಾತ್ ಗೌರವ್ ಅಭಿಯಾನ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳನ್ವಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅಪರಾಹ್ನ 12.15 ಕ್ಕೆ ಎ.ಎಂ. ನಾಯಕ್ ಆರೋಗ್ಯ ಸಂಕೀರ್ಣ ಮತ್ತು ನರಾಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ತರುವಾಯ 3.45 ಕ್ಕೆ ಅಹಮದಾಬಾದ್ ನ ಬೋಪಾಲ್ ನಲ್ಲಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ದೃಢೀಕರಣ ಕೇಂದ್ರ [ಇನ್-ಸ್ಪೇಸ್]ವನ್ನು ಉದ್ಘಾಟಿಸಲಿದ್ದಾರೆ.
ನವಸಾರಿಯಲ್ಲಿ ಪ್ರಧಾನಮಂತ್ರಿ
“ಗುಜರಾತ್ ಗೌರವ್ ಅಭಿಯಾನ್” ಹೆಸರಿನ ಕಾರ್ಯಕ್ರಮಗಳಲ್ಲಿ ಪ್ರಧಾನಮಂತ್ರಿ ಅವರು ಪಾಲ್ಗೊಳ್ಳಲಿದ್ದು, ಅವರು ನವಸಾರಿಯ ಬುಡಕಟ್ಟು ವಲಯದ ಖುದುವೇಲ್ ನಲ್ಲಿ 3050 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. 7 ಯೋಜನೆಗಳ ಉದ್ಘಾಟನೆ, 12 ಯೋಜನೆಗಳಿಗೆ ಶಿಲಾನ್ಯಾಸ ಮತ್ತು 14 ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಯೋಜನೆಗಳಿಂದ ಈ ಭಾಗದಲ್ಲಿ ಕುಡಿಯುವ ನೀರಿನ ಸೌಲಭ್ಯ ಸುಧಾರಣೆಯಾಗಲಿದ್ದು, ಸಂಪರ್ಕ ವಲಯ ವೃದ್ಧಿಯಾಗಲಿರುವ ಜೊತೆಗೆ ಸುಗಮ ಜೀವನಕ್ಕೆ ಸಹಕಾರಿಯಾಗಲಿದೆ.
ತಾಪಿ, ನವಸಾರಿ ಮತ್ತು ಸೂರತ್ ಜಿಲ್ಲೆಗಳ ಜನರಿಗಾಗಿ 951 ಕೋಟಿ ರೂಪಾಯಿ ಮೊತ್ತದ 13 ಕುಡಿಯುವ ನೀರಿನ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ನವಸಾರಿ ಜಿಲ್ಲೆಯಲ್ಲಿ 542 ಕೋಟಿ ರೂಪಾಯಿ ಅಂದಾಜು ವೆಚ್ಚದ ವೈದ್ಯಕೀಯ ಕಾಲೇಜಿಗೆ ಭೂಮಿ ಪೂಜೆ ನೆರವೇರಿಸಲಿದ್ದು, ಇದರಿಂದ ಈ ಭಾಗದ ಜನರಿಗೆ ಕೈಗೆಟುವ ಮತ್ತು ಗುಣಮಟ್ಟದ ಚಿಕಿತ್ಸೆ ದೊರೆಯಲಿದೆ.
ಸುಮಾರು 586 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮಧುಬನ್ ಅಣೆಕಟ್ಟೆ ಆಧಾರಿತ ಪ್ರಾದೇಶಿಕ ನೀರು ಸರಬರಾಜು ಯೋಜನೆಯನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ನೀರು ಸರಬರಾಜು ವಲಯದ ಅದ್ಭುತ ತಾಂತ್ರಿಕ ಕೌಶಲ್ಯಗಳನ್ನು ಈ ಯೋಜನೆ ಒಳಗೊಂಡಿದೆ. ಅಲ್ಲದೇ 163 ಕೋಟಿ ರೂಪಾಯಿ ವೆಚ್ಚದ “ನಲ್ ಸೆ ಜಲ್” ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಇದರಿಂದ ಸೂರತ್, ನವಸಾರಿ, ವಲ್ಸದ್ ಮತ್ತು ತಾಪಿ ಜಿಲ್ಲೆಗಳ ಜನರಿಗೆ ಸುರಕ್ಷಿತ ಮತ್ತು ಸೂಕ್ತ ಪ್ರಮಾಣದಲ್ಲಿ ಕುಡಿಯುವ ನೀರು ದೊರೆಯಲಿದೆ.
ತಾಪಿ ಜಿಲ್ಲೆಯ ಜನರಿಗೆ ಸೂಕ್ತ ಪ್ರಮಾಣದಲ್ಲಿ ವಿದ್ಯುತ್ ಪೂರೈಸುವ 85 ಕೋಟಿ ರೂಪಾಯಿ ಮೊತ್ತದ ವಿರ್ಪುರ್ ವ್ಯಾರ ಜಿಲ್ಲೆಯ ವಿದ್ಯುತ್ ಉಪ ಕೇಂದ್ರವನ್ನು ನಿರ್ಮಿಸಿದ್ದು, ಇದನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ. 14 ಎಂ.ಎಲ್.ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ವಲ್ಸದ್ ಜಿಲ್ಲೆಯ ವಾಪಿ ನಗರದ ಜನರಿಗಾಗಿ 20 ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಿಸಿದ್ದು, ಇದನ್ನೂ ಸಹ ಉದ್ಘಾಟಿಸಲಿದ್ದಾರೆ. 21 ಕೋಟಿ ರೂಪಾಯಿ ಮೊತ್ತದಲ್ಲಿ ನವಸಾರಿಯಲ್ಲಿ ಸರ್ಕಾರಿ ನೌಕರರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪಿಪ್ಲೈದೇವಿ – ಜುನೆರ್ – ಚಿಚ್ಚೈಹಿರ್ – ಪಿಪ್ಲಾದಾಹದ್ ನಡುವೆ ನಿರ್ಮಿಸಿರುವ ರಸ್ತೆ ಮತ್ತು ದಂಗ್ ನಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶಾಲಾ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
549 ಕೋಟಿ ರೂಪಾಯಿ ವೆಚ್ಚದ 8 ನೀರು ಪೂರೈಕೆ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ನೆರವೇರಿಸಲಿದ್ದು, ಇದರಿಂದ ಸೂರತ್, ನವಸಾರಿ, ವಲ್ಸದ್ ಮತ್ತು ತಾಪಿ ಜಿಲ್ಲೆಗಳ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಲಿದೆ. ನವಸಾರಿ ಜಿಲ್ಲೆಯಲ್ಲಿ ಖೇರ್ಗಾಮ್ ಮತ್ತು ಪಿಪಲ್ಖೇಡ್ ನಡುವೆ 33 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಿರುವ ರಸ್ತೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ನವಸಾರಿ – ಬರ್ದೋಲಿ ಮೂಲಕ ಸೂಪಗೆ ಸಂಪರ್ಕ ಕಲ್ಪಿಸುವ 27 ಕೋಟಿ ರೂಪಾಯಿ ವೆಚ್ಚದ ಮತ್ತೊಂದು ನಾಲ್ಕು ಪಥದ ಮಾರ್ಗದ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಪ್ರಧಾನಮಂತ್ರಿ ಅವರು 28 ಕೋಟಿ ರೂಪಾಯಿ ವೆಚ್ಚದ ಜಿಲ್ಲಾ ಪಂಚಾಯತ್ ಭವನ ನಿರ್ಮಾಣ ಮತ್ತು ಡಾಂಗ್ ನಲ್ಲಿ 10 ಕೋಟಿ ರೂಪಾಯಿ ವೆಚ್ಚದ ಅಭಿವೃದ‍್ಧಿ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.
ಎ.ಎಂ. ನಾಯಕ್ ಆರೋಗ್ಯ ಸಂಕೀರ್ಣದಲ್ಲಿ ಪ್ರಧಾನಮಂತ್ರಿ
ನವಸಾರಿಯಲ್ಲಿ ನಿರಾಳಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಎ.ಎಂ. ನಾಯಕ್ ಆರೋಗ್ಯ ಸಂಕೀರ್ಣವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ಆರೋಗ್ಯ ಸಂಕೀರ್ಣದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಮಂತ್ರಿ ಅವರು, ಬಳಿಕ ವರ್ಚುವಲ್ ಮೂಲಕ ಖರೆಲ್ ಶಿಕ್ಷಣ ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ.
ಇನ್ – ಸ್ಪೇಸ್ ಮುಖ್ಯದ್ವಾರದಲ್ಲಿ ಪ್ರಧಾನಮಂತ್ರಿ
ಅಹಮದಾಬಾದ್ ನ ಬೋಪಾಲ್ ನಲ್ಲಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ದೃಢೀಕರಣ ಕೇಂದ್ರ [ಇನ್-ಸ್ಪೇಸ್]ವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಾಹ್ಯಾಕಾಶ ಆಧಾರಿತ ಅಪ್ಲಿಕೇಶನ್ ಮತ್ತು ಸೇವೆಗಳ ಕುರಿತು ಇನ್ – ಸ್ಪೇಸ್ ಮತ್ತು ಖಾಸಗಿ ಕಂಪೆನಿಗಳ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಗುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಉತ್ತೇಜನ ಮತ್ತು ಸಕ್ರಿಯಗೊಳಿಸುವ ಹಾಗೂ ಬಾಹ್ಯಾಕಾಶ ಕ್ಷೇತ್ರಕ್ಕೆ ಇದು ಪ್ರಮುಖ ಅವಕಾಶವಾಗಿದೆ ಮತ್ತು ಭಾರತದ ಪ್ರತಿಭಾವಂತ ಯುವಕರಿಗೆ ಹೊಸ ಅವಕಾಶದ ಬಾಗಿಲು ತೆರೆದಂತಾಗುತ್ತದೆ.
2020 ರ ಜೂನ್ ನಲ್ಲಿ ಇನ್-ಸ್ಪೇಸ್ ಸ್ಥಾಪನೆ ಬಗ್ಗೆ ಘೋಷಣೆ ಮಾಡಲಾಗಿತ್ತು. ಇದು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಬಾಹ್ಯಾಕಾಶ ಚಟುವಟಿಕೆಗಳ ಪ್ರಚಾರ, ಉತ್ತೇಜನ ಮತ್ತು ನಿಯಂತ್ರಣಕ್ಕಾಗಿ ಬಾಹ್ಯಾಕಾಶ ಇಲಾಖೆಯಲ್ಲಿ ಏಕ ಗವಾಕ್ಷಿ ವ್ಯವಸ್ಥೆಯಾಗಿ ಮತ್ತು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಇಸ್ರೋ ಸೌಲಭ್ಯಗಳನ್ನು ಖಾಸಗಿ ಸಂಸ್ಥೆಗಳು ಬಳಸಿಕೊಳ್ಳುವುದನ್ನು ಈ ಸಂಸ್ಥೆ ಸುಗಮಗೊಳಿಸುತ್ತದೆ.