ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ಫೆ.6ರಂದು ಗೋವಾಕ್ಕೆ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ ಸುಮಾರು 10.30ಕ್ಕೆ ಪ್ರಧಾನ ಮಂತ್ರಿ ಅವರು ಒಎನ್ ಜಿಸಿ ಸಾಗರ ಸಂರಕ್ಷಣಾ(ಸರ್ವೈವಲ್) ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಬೆಳಗ್ಗೆ ಸುಮಾರು 10.45ಕ್ಕೆ ಅವರು ಇಂಡಿಯಾ ಇಂಧನ ಸಪ್ತಾಹ-2024 ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ ಸುಮಾರು 2.45ಕ್ಕೆ ಅವರು ವಿಕ್ಷಿತ್ ಭಾರತ್, ವಿಕ್ಷಿತ್ ಗೋವಾ-2047 ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇಂಡಿಯಾ ಇಂಧನ ಸಪ್ತಾಹ-2024
ಇಂಧನ ಅಗತ್ಯತೆಗಳಲ್ಲಿ ಆತ್ಮನಿರ್ಭರ್ ಸಾಧಿಸುವುದು ಪ್ರಧಾನ ಮಂತ್ರಿ ಅವರ ಪ್ರಮುಖ ಕೇಂದ್ರೀಕೃತ ಕ್ಷೇತ್ರವಾಗಿದೆ. ಈ ದಿಕ್ಕಿನಲ್ಲಿ ಮತ್ತೊಂದು ದಿಟ್ಟ ಹೆಜ್ಜೆಯಾಗಿ, ಇಂಡಿಯಾ ಇಂಧನ ಸಪ್ತಾಹ-2024 ಕಾರ್ಯಕ್ರಮ ಫೆ.6ರಿಂದ 9ರ ವರೆಗೆ ಗೋವಾದಲ್ಲಿ ನಡೆಯಲಿದೆ. ಇದು ಸಂಪೂರ್ಣ ಇಂಧನ ಮೌಲ್ಯ ಸರಪಳಿಯನ್ನು ಒಟ್ಟುಗೂಡಿಸುವ ಭಾರತದ ಅತಿದೊಡ್ಡ ಮತ್ತು ಏಕೈಕ ಇಂಧನ ಪ್ರದರ್ಶನ ಮತ್ತು ಸಮ್ಮೇಳನವಾಗಿದೆ. ಭಾರತದ ಇಂಧನ ಪರಿವರ್ತನೆ ಗುರಿಗಳಿಗೆ ವೇಗವರ್ಧಕವಾಗಿ ಇದು ಕಾರ್ಯ ನಿರ್ವಹಿಸುತ್ತದೆ. ಜಾಗತಿಕ ತೈಲ ಮತ್ತು ಅನಿಲ ವಲಯದ ಸಿಇಒಗಳು ಮತ್ತು ತಜ್ಞರೊಂದಿಗೆ ಪ್ರಧಾನ ಮಂತ್ರಿ ದುಂಡುಮೇಜಿನ ಸಭೆ ನಡೆಸಲಿದ್ದಾರೆ.
ಸ್ಟಾರ್ಟಪ್‌ಗಳನ್ನು ಉತ್ತೇಜಿಸುವುದು ಮತ್ತು ಬೆಳೆಸುವುದು, ಅವುಗಳನ್ನು ಇಂಧನ ಮೌಲ್ಯ ಸರಪಳಿಯಲ್ಲಿ ಸಂಯೋಜಿಸುವುದು ಭಾರತ ಇಂಧನ ಸಪ್ತಾಹ-2024ರ ಪ್ರಮುಖ ಗಮನವಾಗಿದೆ. ವಿವಿಧ ದೇಶಗಳ ಸುಮಾರು 17 ಇಂಧನ ಸಚಿವರು, 35,000+ ಪ್ರತಿನಿಧಿಗಳು ಮತ್ತು 900ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುವ ನಿರೀಕ್ಷೆಯಿದೆ. ಇದು 6 ಮೀಸಲಾದ ದೇಶದ ಮಂಟಪಗಳನ್ನು ಹೊಂದಿರುತ್ತದೆ – ಅವುಗಳೆಂದರೆ ಕೆನಡಾ, ಜರ್ಮನಿ, ನೆದರ್ಲ್ಯಾಂಡ್ಸ್, ರಷ್ಯಾ, ಯುಕೆ ಮತ್ತು ಯುಎಸ್ಎ. ಭಾರತೀಯ ಎಂಎಸ್‌ಎಂಇಗಳು ಇಂಧನ ವಲಯದಲ್ಲಿ ಮುನ್ನಡೆಸುತ್ತಿರುವ ನವೀನ ಪರಿಹಾರಗಳನ್ನು ಪ್ರದರ್ಶಿಸಲು ವಿಶೇಷ ಮೇಕ್ ಇನ್ ಇಂಡಿಯಾ ಪೆವಿಲಿಯನ್ ಅನ್ನು ಸಹ ಆಯೋಜಿಸಲಾಗುತ್ತಿದೆ.
ವಿಕಸಿತ ಭಾರತ, ವಿಕ್ಷಿತ್ ಗೋವಾ 2047
ಗೋವಾದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ 1330 ಕೋಟಿ ರೂ.ಗಿಂತ ಅಧಿಕ ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿ ಅವರು ನೆರವೇರಿಸಲಿದ್ದಾರೆ.
ಗೋವಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಾಯಂ ಕ್ಯಾಂಪಸ್ ಅನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಹೊಸದಾಗಿ ನಿರ್ಮಿಸಲಾದ ಕ್ಯಾಂಪಸ್ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಯ ಅಗತ್ಯತೆಗಳನ್ನು ಪೂರೈಸಲು ಸಂಸ್ಥೆಯ ಟ್ಯುಟೋರಿಯಲ್ ಸಂಕೀರ್ಣ, ವಿಭಾಗೀಯ ಸಂಕೀರ್ಣ, ಸೆಮಿನಾರ್ ಸಂಕೀರ್ಣ, ಆಡಳಿತ ಸಂಕೀರ್ಣ, ಹಾಸ್ಟೆಲ್‌ಗಳು, ಆರೋಗ್ಯ ಕೇಂದ್ರ, ಸಿಬ್ಬಂದಿ ಕ್ವಾರ್ಟರ್ಸ್, ಸೌಕರ್ಯ ಕೇಂದ್ರ, ಕ್ರೀಡಾ ಮೈದಾನ ಮತ್ತು ಇತರ ಉಪಯುಕ್ತತೆಗಳಂತಹ ವಿವಿಧ ಸೌಲಭ್ಯಗಳನ್ನು ಹೊಂದಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಾಟರ್‌ಸ್ಪೋರ್ಟ್ಸ್‌ನ ಹೊಸ ಕ್ಯಾಂಪಸ್ ಅನ್ನು ಪ್ರಧಾನಿ ಲೋಕಾರ್ಪಣೆ ಮಾಡಲಿದ್ದಾರೆ. ಸಂಸ್ಥೆಯು ಸಾರ್ವಜನಿಕರು ಮತ್ತು ಸಶಸ್ತ್ರ ಪಡೆಗಳೆರಡಕ್ಕೂ ಜಲಕ್ರೀಡೆ ಮತ್ತು ಜಲ ರಕ್ಷಣಾ ಚಟುವಟಿಕೆಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ 28 ಸಂರಚಿತ ಕೋರ್ಸ್‌ಗಳನ್ನು ಪರಿಚಯಿಸುತ್ತದೆ. ಪ್ರಧಾನ ಮಂತ್ರಿ ಅವರು ದಕ್ಷಿಣ ಗೋವಾದಲ್ಲಿ 100 ಟಿಪಿಡಿ ಸಮಗ್ರ ತ್ಯಾಜ್ಯ ನಿರ್ವಹಣಾ ಸೌಲಭ್ಯ(ಇಂಟಿಗ್ರೇಟೆಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಫೆಸಿಲಿಟಿ)ವನ್ನು ಉದ್ಘಾಟಿಸಲಿದ್ದಾರೆ. 60 ಟಿಪಿಡಿ ಹಸಿ ತ್ಯಾಜ್ಯ ಮತ್ತು 40 ಟಿಪಿಡಿ ಒಣ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ, ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ 500 ಕಿಲೋ ವ್ಯಾಟ್ ಸೌರವಿದ್ಯುತ್ ಸ್ಥಾವರವನ್ನು ಸಹ ಹೊಂದಿದೆ.
ಪಣಜಿ ಮತ್ತು ರೀಸ್ ಮಾಗೋಸ್ ಅನ್ನು ಸಂಪರ್ಕಿಸುವ ಪ್ರವಾಸೋದ್ಯಮ ಚಟುವಟಿಕೆಗಳ ಜತೆಗೆ ಪ್ಯಾಸೆಂಜರ್ ರೋಪ್‌ವೇಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ದಕ್ಷಿಣ ಗೋವಾದಲ್ಲಿ 100 ಎಂಎಲ್‌ಡಿ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದಲ್ಲದೆ, ಅವರು ರೋಜ್‌ಗಾರ್ ಮೇಳದ ಅಡಿ, ವಿವಿಧ ಇಲಾಖೆಗಳ 1,930 ಹೊಸ ಸರ್ಕಾರಿ ನೇಮಕಾತಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸುತ್ತಾರೆ. ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ಹಸ್ತಾಂತರಿಸಲಿದ್ದಾರೆ.
ಒಎನ್ ಜಿಸಿ ಸಾಗರ ಸಂರಕ್ಷಣಾ ಕೇಂದ್ರ(ಸರ್ವೈವಲ್ ಸೆಂಟರ್)
ಒಎನ್ ಜಿಸಿ ಸಾಗರ ಸಂರಕ್ಷಣಾ ಕೇಂದ್ರವನ್ನು ಒಂದು ರೀತಿಯ ಸಮಗ್ರ ಸಾಗರ ಸರಕ್ಷಣಾ ತರಬೇತಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಭಾರತೀಯ ಸಮುದ್ರ ಸಂರಕ್ಷಣಾ ತರಬೇತಿ ಪರಿಸರ ವ್ಯವಸ್ಥೆಯನ್ನು ಜಾಗತಿಕ ಗುಣಮಟ್ಟಕ್ಕೆ ಮುನ್ನಡೆಸುತ್ತದೆ. ವಾರ್ಷಿಕವಾಗಿ 10,000-15,000 ಸಿಬ್ಬಂದಿಗೆ ತರಬೇತಿ ನೀಡುವ ನಿರೀಕ್ಷೆಯಿದೆ. ಸಿಮ್ಯುಲೇಟೆಡ್ ಮತ್ತು ನಿಯಂತ್ರಿತ ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿನ ವ್ಯಾಯಾಮಗಳು ಪ್ರಶಿಕ್ಷಣಾರ್ಥಿಗಳಿಗೆ ಸಮುದ್ರದಲ್ಲಿ ಬದುಕುಳಿಯುವ ಕೌಶಲಗಳನ್ನು ಕಲಿಸುತ್ತವೆ. ಆದ್ದರಿಂದ ನೈಜ ಜೀವನದ ವಿಪತ್ತುಗಳಿಂದ ಸುರಕ್ಷಿತವಾಗಿ ಪಾರಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.