ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಫೆಬ್ರವರಿ 7ರಂದು ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಸುಮಾರು 11.45ರ ವೇಳೆಗೆ ಪ್ರಧಾನಮಂತ್ರಿ ಅವರು ಎರಡು ಆಸ್ಪತ್ರೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು ಮತ್ತು ಅಸ್ಸಾಂನ ಸೋನಿತ್ಪುರ್ ಜಿಲ್ಲೆಯ ದೇಕೈಜುಲಿಯ ಪ್ರಮುಖ ಜಿಲ್ಲಾ ರಸ್ತೆಗಳು ಮತ್ತು ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ‘ಅಸೋಮ್ ಮಾಲಾ’ಗೆ ಚಾಲನೆ ನೀಡುವರು. ಆನಂತರ ಸಂಜೆ 4.50ಕ್ಕೆ ಪ್ರಧಾನಮಂತ್ರಿ ಅವರು, ಪಶ್ಚಿಮ ಬಂಗಾಳದ ಹಲ್ದಿಯಾದಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಹಲವು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಅವರು ಭಾರತ್ ಪೆಟ್ರೋಲಿಯಂ ನಿಗಮ ನಿಯಮಿತ ನಿರ್ಮಿಸಿರುವ ಎಲ್ ಪಿ ಜಿ ಆಮದು ಟರ್ಮಿನಲ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದನ್ನು ಸುಮಾರು 1100 ಕೋಟಿ ರೂ.ಗಳ ಹೂಡಿಕೆಯೊಂದಿಗೆ ನಿರ್ಮಿಸಲಾಗಿದೆ ಮತ್ತು ಇದರ ಸಾಮರ್ಥ್ಯ ವಾರ್ಷಿಕ ಒಂದು ಮಿಲಿಯನ್ ಮೆಟ್ರಿಕ್ ಟನ್, ಇದು ಪಶ್ಚಿಮ ಬಂಗಾಳ ಮತ್ತು ಪೂರ್ವ ಹಾಗೂ ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಎಲ್ ಪಿಜಿ ಬೇಡಿಕೆಯನ್ನು ಪೂರೈಸಲು ನೆರವಾಗಲಿದೆ ಮತ್ತು ಪ್ರತಿಯೊಂದು ಮನೆಗೂ ಶುದ್ಧ ಅಡುಗೆ ಅನಿಲ ಒದಗಿಸಬೇಕು ಎನ್ನುವ ಪ್ರಧಾನಮಂತ್ರಿ ಅವರ ಸಾಕಾರ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.
ಅಲ್ಲದೆ ಪ್ರಧಾನಮಂತ್ರಿ ಊರ್ಜಾ ಗಂಗಾ ಯೋಜನೆಯ ಭಾಗವಾಗಿರುವ 348 ಕಿ.ಮೀ. ಉದ್ದದ ದೋಭಿ – ದುರ್ಗಾಪುರ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ‘ಒಂದು ರಾಷ್ಟ್ರ ಒಂದು ಅನಿಲ ಗ್ರಿಡ್’ ಸಾಧನೆ ನಿಟ್ಟಿನಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ. 2400 ಕೋಟಿ ರೂ.ಗಳ ಹೂಡಿಕೆಯೊಂದಿಗೆ ನಿರ್ಮಿಸಲಾಗಿರುವ ಈ ಕೊಳವೆ ಮಾರ್ಗದಿಂದ ಎಚ್ ಯುಆರ್ ಎಲ್ ಸಿಂದ್ರಿ(ಜಾರ್ಖಂಡ್) ರಸಗೊಬ್ಬರ ಘಟಕದ ಪುನಶ್ಚೇತನಕ್ಕೆ, ದುರ್ಗಾಪುರದ(ಪಶ್ಚಿಮಬಂಗಾಳ) ಮಾಟಿಕ್ಸ್ ರಸಗೊಬ್ಬರ ಘಟಕಕ್ಕೆ ಅನಿಲ ಪೂರೈಕೆಗೆ ಮತ್ತು ಕೈಗಾರಿಕಾ ವಾಣಿಜ್ಯ ಹಾಗೂ ಆಟೋಮೊಬೈಲ್ ವಲಯದ ಅನಿಲ ಬೇಡಿಕೆ ಪೂರೈಸಲು ಹಾಗೂ ರಾಜ್ಯದ ಎಲ್ಲ ಪ್ರಮುಖ ಪಟ್ಟಣಗಳ ನಗರ ಅನಿಲ ವಿತರಣಾ ವ್ಯವಸ್ಥೆಗೆ ನೆರವಾಗಲಿದೆ.
ಅಲ್ಲದೆ ಪ್ರಧಾನಮಂತ್ರಿ ಅವರು ಭಾರತೀಯ ತೈಲ ನಿಗಮದ ಹಲ್ದಿಯಾ ಸಂಸ್ಕರಣಾ ಘಟಕದ ಎರಡನೇ ಕ್ಯಾಟಲಿಟಿಕ್ – ಐಸೋಡೊವಾಕ್ಸಿಂಗ್ ಘಟಕಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸುವರು. ಈ ಘಟಕ ವಾರ್ಷಿಕ 270 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯವನ್ನು ಹೊಂದಲಿದೆ ಮತ್ತು ಒಮ್ಮೆ ಇದು ಕಾರ್ಯಾಚರಣೆಗೊಂಡರೆ ಇದರಿಂದ 185 ಮಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ವಿನಿಮಯ ಉಳಿತಾಯವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಹಲ್ದಿಯಾದ ರಾಷ್ಟ್ರೀಯ ಹೆದ್ದಾರಿ 41ರ ರಾಣಿಚಾಕ್ ನಲ್ಲಿನ ನಾಲ್ಕು ಪಥದ ರೈಲು ಮೇಲ್ಸೇತುವೆ ಮತ್ತು ಪ್ಲೈಓವರ್ ಅನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸುವರು. ಇದನ್ನು 190 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಮೇಲ್ಸೇತುವೆ ಕಾರ್ಯಾರಂಭದೊಂದಿಗೆ ಹಲ್ದಿಯಾ ಡಾಕ್ ಕಾಂಪ್ಲೆಕ್ಸ್ ನಿಂದ ಕೋಲಾಘಾಟ್ ವರೆಗೆ ವಾಹನ ಸಂಚಾರ ಯಾವುದೇ ನಿಲುಗಡೆ ಇಲ್ಲದೆ ಮುಂದುವರಿಯಲಿದೆ ಮತ್ತು ಸುತ್ತಮುತ್ತ ಪ್ರದೇಶಗಳಿಗೂ ನೆರವಾಗಲಿದ್ದು, ಭಾರೀ ಪ್ರಮಾಣದ ಪ್ರಯಾಣ ಸಮಯ ಉಳಿತಾಯವಾಗಲಿದೆ ಹಾಗೂ ಬಂದರಿನ ಒಳಗೆ ಮತ್ತು ಹೊರಗೆ ಭಾರೀ ವಾಹನಗಳ ಕಾರ್ಯಾಚರಣೆ ವೆಚ್ಚ ಇಳಿಕೆಯಾಗಲಿದೆ.
ಈ ಎಲ್ಲ ಯೋಜನೆಗಳು ಪ್ರಧಾನಮಂತ್ರಿಗಳ ಪೂರ್ವೋದಯ ಕನಸು ಅಂದರೆ ಈಶಾನ್ಯ ಭಾರತವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವುದಕ್ಕೆ ಪೂರಕವಾಗಿ ರೂಪಿಸಲಾಗಿದೆ. ಪಶ್ಚಿಮಬಂಗಾಳದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಸ್ಸಾಂನಲ್ಲಿ ಪ್ರಧಾನಮಂತ್ರಿ
ಅಸ್ಸಾಂ ರಾಜ್ಯದಲ್ಲಿ ಪ್ರಮುಖ ಜಿಲ್ಲಾ ಸಂಪರ್ಕ ರಸ್ತೆಗಳು ಮತ್ತು ರಾಜ್ಯ ಹೆದ್ದಾರಿಗಳ ಸುಧಾರಣೆಯನ್ನು ಗುರಿಯಾಗಿಟ್ಟುಕೊಂಡು ಕೈಗೆತ್ತಿಕೊಂಡಿರುವ ‘ಅಸೋಮ್ ಮಾಲಾ’ ಯೋಜನೆಗೆ ಪ್ರಧಾನಮಂತ್ರಿ ಚಾಲನೆ ನೀಡುವರು. ಈ ಕಾರ್ಯಕ್ರಮ ಅತ್ಯಂತ ವಿನೂತನವಾಗಿದ್ದು, ನಿರಂತರ ಕ್ಷೇತ್ರ ದತ್ತಾಂಶ ಸಂಗ್ರಹ ಮತ್ತು ರಸ್ತೆ ಸ್ವತ್ತು ನಿಯಂತ್ರಣ ವ್ಯವಸ್ಥೆಯ ಸಂಯೋಜನೆಯಿಂದಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ‘ಅಸೋಮ್ ಮಾಲಾ’ ಯೋಜನೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಡುವೆ ಗುಣಮಟ್ಟದ ಸಂಪರ್ಕ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿಯಾಗುವುದಲ್ಲದೆ, ಸೀಮಾತೀತ ಬಹು ಮಾದರಿ ಸಾರಿಗೆಗೆ ಉತ್ತೇಜನ ದೊರಕಲಿದೆ. ಇದು ಆರ್ಥಿಕ ಪ್ರಗತಿ ಕೇಂದ್ರಗಳು ಮತ್ತು ಸಾರಿಗೆ ಕಾರಿಡಾರ್ ಗಳ ನಡುವೆ ಅಂತರ ಸಂಪರ್ಕ ಕಲ್ಪಿಸುತ್ತದೆ ಹಾಗೂ ಅಂತಾರಾಜ್ಯ ಸಂಪರ್ಕ ಸುಧಾರಿಸಲು ನೆರವಾಗುತ್ತದೆ. ಅಸ್ಸಾಂ ಮುಖ್ಯಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಮಂತ್ರಿ ಅವರು, ಬಿಸ್ವನಾಥ್ ಮತ್ತು ಚರೈಡಿಯೋದಲ್ಲಿ ಒಟ್ಟು 1100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಿರುವ ಎರಡು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ. ಪ್ರತಿಯೊಂದು ಆಸ್ಪತ್ರೆಗಳು 500 ಹಾಸಿಗೆಗಳ ಸಾಮರ್ಥ್ಯ ಹೊಂದಿರಲಿದೆ ಮತ್ತು 100 ಎಂಬಿಬಿಎಸ್ ಸೀಟುಗಳ ಸಾಮರ್ಥ್ಯ ಇರಲಿದೆ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸಂಖ್ಯೆ ಹೆಚ್ಚಳದಿಂದಾಗಿ ರಾಜ್ಯದಲ್ಲಿ ವೈದ್ಯರ ಕೊರತೆಯೊಂದೇ ನೀಗುವುದಲ್ಲದೆ, ಅಸ್ಸಾಂ ಇಡೀ ಈಶಾನ್ಯ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ತೃತೀಯ ಹಂತದ ಆರೋಗ್ಯ ರಕ್ಷಣೆಯ ತಾಣವಾಗಿ ರೂಪುಗೊಳ್ಳಲಿದೆ.