ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರೂನೈ ಸುಲ್ತಾನ್ ಅವರ ಆಹ್ವಾನದ ಮೇರೆಗೆ 2021ರ ಅಕ್ಟೋಬರ್ 28ರಂದು ವರ್ಚ್ಯುಯಲ್ ಮಾದರಿಯಲ್ಲಿ ನಡೆಯಲಿರುವ 18ನೇ ʻಆಸಿಯಾನ್-ಭಾರತ ಶೃಂಗಸಭೆʼಯಲ್ಲಿ ಭಾಗವಹಿಸಲಿದ್ದಾರೆ. ಈ ಶೃಂಗಸಭೆಯಲ್ಲಿ ಆಸಿಯಾನ್ ರಾಷ್ಟ್ರಗಳ/ಸರ್ಕಾರಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.
18ನೇ ʻಆಸಿಯಾನ್-ಭಾರತʼ ಶೃಂಗಸಭೆಯಲ್ಲಿ ಆಸಿಯಾನ್-ಭಾರತ ವ್ಯೂಹಾತ್ಮಕ ಪಾಲುದಾರಿಕೆಯ ಸ್ಥಿತಿಗತಿಯನ್ನು ಪರಿಶೀಲಿಸಲಾಗುವುದು. ಜೊತೆಗೆ ಕೋವಿಡ್-19 ಮತ್ತು ಆರೋಗ್ಯ, ವ್ಯಾಪಾರ ಮತ್ತು ವಾಣಿಜ್ಯ, ಸಂಪರ್ಕ ಮತ್ತು ಶಿಕ್ಷಣ ಹಾಗೂ ಸಂಸ್ಕೃತಿ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯ ಬಗ್ಗೆ ಪರಾಮರ್ಶೆ ನಡೆಸಲಾಗುವುದು. ಸಾಂಕ್ರಾಮಿಕದ ಬಳಿಕ ಆರ್ಥಿಕ ಚೇತರಿಕೆ ಸೇರಿದಂತೆ ಪ್ರಮುಖ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆಯೂ ಚರ್ಚಿಸಲಾಗುವುದು. ವಾರ್ಷಿಕವಾಗಿ ನಡೆಸಲಾಗುವ ಆಸಿಯಾನ್-ಭಾರತ ಶೃಂಗಸಭೆಗಳು ಭಾರತ ಮತ್ತು ಆಸಿಯಾನ್ ದೇಶಗಳು ಅತ್ಯುನ್ನತ ಮಟ್ಟದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಒದಗಿಸುತ್ತವೆ. ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ 17ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಿ ಭಾಗವಹಿಸಿದ್ದರು. 18ನೇ ಆಸಿಯಾನ್-ಭಾರತ ಶೃಂಗಸಭೆಯು ಅವರು ಭಾಗವಹಿಸಲಿರುವ ಒಂಬತ್ತನೇ ಆಸಿಯಾನ್-ಭಾರತ ಶೃಂಗಸಭೆಯಾಗಲಿದೆ.
ಆಸಿಯಾನ್-ಭಾರತ ವ್ಯೂಹಾತ್ಮಕ ಪಾಲುದಾರಿಕೆಯು ಪರಸ್ಪರ ಹಂಚಿಕೊಂಡ ಭೌಗೋಳಿಕ, ಐತಿಹಾಸಿಕ ಮತ್ತು ನಾಗರಿಕತೆಯ ಸಂಬಂಧಗಳ ಬಲವಾದ ಅಡಿಪಾಯದ ಮೇಲೆ ನಿಂತಿದೆ. ಭಾರತದ ʻಆಕ್ಟ್ ಈಸ್ಟ್ ನೀತಿʼ ಮತ್ತು ʻಇಂಡೋ-ಪೆಸಿಫಿಕ್ʼ ಕುರಿತಾಗಿ ನಮ್ಮ ವಿಶಾಲ ದೃಷ್ಟಿಕೋನಕ್ಕೆ ಆಸಿಯಾನ್ ಕೇಂದ್ರಬಿಂದುವಾಗಿದೆ. 2022ನೇ ವರ್ಷವು ಆಸಿಯಾನ್-ಭಾರತ ಸಂಬಂಧಗಳ 30ವರ್ಷಗಳಿಗೆ ಸಾಕ್ಷಿಯಾಗಲಿದೆ. ಭಾರತ ಮತ್ತು ಆಸಿಯಾನ್ ಹಲವು ಮಾತುಕತೆ ವ್ಯವಸ್ಥೆಗಳನ್ನು ಹೊಂದಿದೆ. ನಿಯಮಿತವಾಗಿ ನಡೆಯುವ ಶೃಂಗಸಭೆ, ಸಚಿವರ ಮಟ್ಟದ ಸಭೆಗಳು ಮತ್ತು ಹಿರಿಯ ಅಧಿಕಾರಿಗಳ ಸಭೆಗಳನ್ನು ಇದರಲ್ಲಿ ಸೇರಿವೆ. ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು 2021ರ ಆಗಸ್ಟ್‌ನಲ್ಲಿ ನಡೆದ ಆಸಿಯಾನ್-ಭಾರತ ವಿದೇಶಾಂಗ ಸಚಿವರ ಸಭೆ ಮತ್ತು ʻಇಎಎಸ್ʼ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದ್ದರು. ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಹಾಯಕ ಸಚಿವರಾದ ಶ್ರೀ ಅನುಪ್ರಿಯಾ ಪಟೇಲ್ ಅವರು 2021ರ ಸೆಪ್ಟೆಂಬರ್‌ನಲ್ಲಿ ನಡೆದ ʻಆಸಿಯಾನ್ ಆರ್ಥಿಕ ಸಚಿವರು+ಭಾರತ ಸಮಾಲೋಚನೆʼಯಲ್ಲಿ ಭಾಗವಹಿಸಿದ್ದರು, ಈ ವೇಳೆ ಸಚಿವರು ಆರ್ಥಿಕ ಸಹಕಾರವನ್ನು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.
ಪ್ರಧಾನಮಂತ್ರಿಯವರು ಅಕ್ಟೋಬರ್ 27, 2021ರಂದು ನಡೆಯಲಿರುವ 16ನೇ ʻಪೂರ್ವ ಏಷ್ಯಾ ಶೃಂಗಸಭೆʼಯಲ್ಲೂ ಭಾಗವಹಿಸಲಿದ್ದಾರೆ. ಪೂರ್ವ ಏಷ್ಯಾ ಶೃಂಗಸಭೆಯು ʻಇಂಡೋ-ಪೆಸಿಫಿಕ್ʼ ಪ್ರದೇಶದ ಪ್ರಮುಖ ನಾಯಕರ ನೇತೃತ್ವದ ವೇದಿಕೆಯಾಗಿದೆ. 2005ರಲ್ಲಿ ಪ್ರಾರಂಭವಾದಾಗಿನಿಂದ, ಇದು ಪೂರ್ವ ಏಷ್ಯಾದ ವ್ಯೂಹಾತ್ಮಕ ಮತ್ತು ಭೌಗೋಳಿಕ ವಿಕಸನದಲ್ಲಿ ಮಹತ್ವದ ಪಾತ್ರ ವಹಿಸಿದೆ. 10 ಆಸಿಯಾನ್ ಸದಸ್ಯ ರಾಷ್ಟ್ರಗಳನ್ನು ಮಾತ್ರವಲ್ಲದೆ ಭಾರತ, ಚೀನಾ, ಜಪಾನ್, ಕೊರಿಯಾ ಗಣರಾಜ್ಯ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಯುನೈಟೆಡ್ ಸ್ಟೇಟ್ಸ್ ಮತ್ತು ರಷ್ಯಾಗಳನ್ನು ಪೂರ್ವ ಏಷ್ಯಾ ಶೃಂಗಸಭೆಯು ಒಳಗೊಂಡಿದೆ.
ʻಪೂರ್ವ ಏಷ್ಯಾ ಶೃಂಗಸಭೆʼಯ ಸಂಸ್ಥಾಪಕ ಸದಸ್ಯರಾಷ್ಟ್ರವಾಗಿರುವ ಭಾರತವು ʻಪೂರ್ವ ಏಷ್ಯಾ ಶೃಂಗಸಭೆʼಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಸಮಕಾಲೀನ ಸವಾಲುಗಳನ್ನು ಮತ್ತಷ್ಟು ಪರಿಣಾಮಕಾರಿ ಎದುರಿಸಲು ಅದನ್ನು ಸಜ್ಜುಗೊಳಿಸಲು ಬದ್ಧವಾಗಿದೆ. ʻಇಂಡೋ-ಪೆಸಿಫಿಕ್ ಕುರಿತಾದ ಆಸಿಯಾನ್ ಔಟ್‌ಲುಕ್ʼ(ಎಒಐಪಿ) ಮತ್ತು ʻಇಂಡೋ-ಪೆಸಿಫಿಕ್ ಸಾಗರದ ಉಪಕ್ರಮʼದ (ಐಪಿಒಐ) ನಡುವಿನ ಸಂಯೋಜನೆ ಮೂಲಕ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪ್ರಾಯೋಗಿಕ ಸಹಕಾರವನ್ನು ಮುಂದುವರಿಸಲು ಇದು ಪ್ರಮುಖ ವೇದಿಕೆಯಾಗಿದೆ. 16ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ನಾಯಕರು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಹಿತಾಸಕ್ತಿ, ಸಾಗರ ಭದ್ರತೆ, ಭಯೋತ್ಪಾದನೆ, ಕೋವಿಡ್-19 ಸಹಕಾರ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಭಾರತವು ಸಹ-ಪ್ರಾಯೋಜಕತ್ವ ವಹಿಸಿರುವ ʻಪ್ರವಾಸೋದ್ಯಮ ಮತ್ತು ಹಸಿರು ಚೇತರಿಕೆಯ ಮೂಲಕ ಮಾನಸಿಕ ಆರೋಗ್ಯ, ಆರ್ಥಿಕ ಚೇತರಿಕೆʼ ಕುರಿತಾದ ಘೋಷಣೆಗಳನ್ನು ನಾಯಕರು ಸ್ವೀಕರಿಸುವ ನಿರೀಕ್ಷೆಯಿದೆ.