ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ರ ಜನವರಿ 15 ರಂದು ಅಪರಾಹ್ನ 12 ಗಂಟೆಗೆ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಪ್ರಧಾನಮಂತ್ರಿ ಜನ್ ಜಾತಿ ಆದಿವಾಸಿ ನ್ಯಾಯ್ ಮಹಾ ಅಭಿಯಾನ್ [ಪಿಎಂ – ಜನ್ ಮನ್]ದ ಭಾಗವಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆ [ಪಿಎಂಎಐ-ಗ್ರಾಮೀಣ]ಯಡಿ ಒಂದು ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ ನೆರವು ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಪಿಎಂ – ಜನ್ ಮನ್ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಅಂತ್ಯೋದಯ ದೃಷ್ಟಿಕೋನದಲ್ಲಿ ಕಟ್ಟಕಡೆಯ ವ್ಯಕ್ತಿಯ ಸಬಲೀಕರಣದ ಉದ್ದೇಶದಡಿ ಪ್ರಧಾನಮಂತ್ರಿ ಅವರು 2023 ರ ನವೆಂಬರ್ 15 ರಂದು ಜನ್ ಜಾತೀಯಾ ಗೌರವ್ ದಿನದಂದು ನಿರ್ದಿಷ್ಟವಾದ ದುರ್ಬಲ ಬುಡಕಟ್ಟು ಗುಂಪುಗಳ [ಪಿವಿಟಿಜಿ] ಸಾಮಾಜಿಕ ಆರ್ಥಿಕ ಕಲ್ಯಾಣದ ದೃಷ್ಟಿಯಿಂದ ಪಿಎಂ – ಜನ್ ಮನ್ ಯೋಜನೆಗೆ ಚಾಲನೆ ನೀಡಿದ್ದರು.
ಪಿಎಂ – ಜನ್ ಮನ್ ಯೋಜನೆಯಡಿ 24,000 ಕೋಟಿ ರೂಪಾಯಿ ಆಯವ್ಯಯ ನಿಗದಿ ಮಾಡಲಾಗಿದೆ. ಪ್ರಮುಖವಾಗಿ 9 ಸಚಿವಾಲಯಗಳ 11 ಮಧ್ಯಸ್ಥಿಕೆಗಳಡಿ ಪಿವಿಜಿಟಿಗಳ ಸಾಮಾಜಿಕ ಆರ್ಥಿಕ ಸುಧಾರಣೆ ಉದ್ದೇಶವನ್ನು ಇದು ಒಳಗೊಂಡಿದೆ. ಪಿವಿಜಿಟಿ ಸಮುದಾಯ ವಾಸವಿರುವ ಪ್ರದೇಶಗಳಲ್ಲಿ ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು, ನೈರ್ಮಲ್ಯ, ಶಿಕ್ಷಣ ಕೈಗೆಟುವಂತೆ ಮಾಡುವುದು, ಆರೋಗ್ಯ ಮತ್ತು ಪೌಷ್ಟಿಕತೆ, ವಿದ್ಯುತ್ ಸಂಪರ್ಕ, ರಸ್ತೆ, ದೂರ ಸಂಪರ್ಕ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸುವ ಗುರಿ ಹೊಂದಲಾಗಿದೆ.