ತಳಮಟ್ಟದ ರೈತರನ್ನು ಸಬಲೀಕರಣಗೊಳಿಸುವ ಮತ್ತು ತಮ್ಮ ನಿರಂತರ ಬದ್ಧತೆಗೆ ಅನುಗುಣವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 1, 2022 ರಂದು 12.30 ಕ್ಕೆ ಆರ್ಥಿಕ ನೆರವು ಕಲ್ಪಿಸುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ [ಪಿಎಂ-ಕಿಸಾನ್] ಯೋಜನೆಯಡಿ 10 ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. 10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 20,000 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವರ್ಗಾವಣೆ ಮಾಡಲಿದ್ದಾರೆ.
ಪಿಎಂ-ಕಿಸಾನ್ ಯೋಜನೆಯಡಿ ರೈತ ಕುಟುಂಬಗಳಿಗೆ ಪ್ರತಿವರ್ಷ 6000 ರೂಪಾಯಿ ಮೊತ್ತವನ್ನು ನಾಲ್ಕು ಸಮಾನ ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಬಿಡುಗಡೆ ಮಾಡಲಾಗುತ್ತಿದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ. ಕಿಸಾನ್ ಸಮ್ಮಾನ್ ನಿಧಿಯಡಿ ರೈತ ಕುಟುಂಬಗಳಿಗೆ 1.6 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಈವರೆಗೆ ವರ್ಗಾಯಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು 351 ರೈತ ಉತ್ಪಾದನಾ ಸಂಘಟನೆಗಳಿಗೆ [ಎಫ್.ಪಿ.ಓಗಳಿಗೆ] 14 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಇಕ್ವಿಟಿ ಅನುದಾನವನ್ನು ಸಹ ಬಿಡುಗಡೆ ಮಾಡಲಿದ್ದಾರೆ. ಇದರಿಂದ 1.24 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಲಾಭವಾಗಲಿದೆ. ಪ್ರಧಾನಮಂತ್ರಿಯವರು ಇದೇ ಸಂದರ್ಭದಲ್ಲಿ ಎಫ್.ಪಿ.ಓಗಳೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಕೇಂದ್ರ ಕೃಷಿ ಸಚಿವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.