ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಮಜ್ದೂರೋನ್ ಕಾ ಹಿತ್ ಮಜ್ದೂರೋನ್ ಕೋ ಸಮರ್ಪಿತ್ ' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಮತ್ತು ಹುಕುಮ್ ಚಂದ್ ಮಿಲ್ ಕಾರ್ಮಿಕರ ಬಾಕಿಗೆ ಸಂಬಂಧಿಸಿದ ಸುಮಾರು 224 ಕೋಟಿ ರೂ.ಗಳ ಚೆಕ್ ಅನ್ನು ಇಂದೋರ್ ನ ಹುಕುಮ್ ಚಂದ್ ಮಿಲ್ ನ ಅಧಿಕೃತ ಲಿಕ್ವಿಡೇಟರ್ ಮತ್ತು ಕಾರ್ಮಿಕ ಒಕ್ಕೂಟದ ಮುಖ್ಯಸ್ಥರಿಗೆ 2023ರ ಡಿಸೆಂಬರ್ 25ರಂದು ಮಧ್ಯಾಹ್ನ 12 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸ್ತಾಂತರಿಸಲಿದ್ದಾರೆ. ಈ ಕಾರ್ಯಕ್ರಮವು ಹುಕುಂ ಚಂದ್ ಗಿರಣಿ ಕಾರ್ಮಿಕರ ದೀರ್ಘಕಾಲದ ಬೇಡಿಕೆಗಳ ಇತ್ಯರ್ಥವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
1992 ರಲ್ಲಿ ಇಂದೋರಿನ ಹುಕುಮ್ ಚಂದ್ ಗಿರಣಿ ಮುಚ್ಚಲ್ಪಟ್ಟ ನಂತರ ಹುಕುಮ್ ಚಂದ್ ಗಿರಣಿಯ ಕಾರ್ಮಿಕರು ತಮ್ಮ ಬಾಕಿ ಪಾವತಿಗಾಗಿ ಸುದೀರ್ಘ ಕಾನೂನು ಹೋರಾಟ ನಡೆಸಿದರು.ಮತ್ತು ಲಿಕ್ವಿಡೇಶನ್ನಿಗಾಗಿ ಪ್ರಯತ್ನಿಸಿದರು. ಇತ್ತೀಚೆಗೆ, ಮಧ್ಯಪ್ರದೇಶ ಸರ್ಕಾರವು ಇದರಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸಿತು ಮತ್ತು ಇತ್ಯರ್ಥ ಪ್ಯಾಕೇಜ್ ಗಾಗಿ ಮಾತುಕತೆ ನಡೆಸಿ ಅದನ್ನು ಯಶಸ್ವಿಗೊಳಿಸಿತು., ಇದನ್ನು ನ್ಯಾಯಾಲಯಗಳು, ಕಾರ್ಮಿಕ ಸಂಘಗಳು, ಗಿರಣಿ ಕಾರ್ಮಿಕರು ಸೇರಿದಂತೆ ಎಲ್ಲಾ ಭಾಗೀದಾರರು ಅನುಮೋದಿಸಿದರು. ಇತ್ಯರ್ಥ ಯೋಜನೆಯಲ್ಲಿ ಮಧ್ಯಪ್ರದೇಶ ಸರ್ಕಾರವು ಎಲ್ಲಾ ಬಾಕಿಗಳನ್ನು ಮುಂಚಿತವಾಗಿ ಪಾವತಿಸುವುದು, ಗಿರಣಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅದನ್ನು ವಸತಿ ಹಾಗು ವಾಣಿಜ್ಯ ಸ್ಥಳವಾಗಿ ಅಭಿವೃದ್ಧಿಪಡಿಸುವುದು ಸೇರಿದೆ.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಖಾರ್ಗೋನ್ ಜಿಲ್ಲೆಯ ಸಾಮ್ರಾಜ್ ಮತ್ತು ಅಶುಖೇಡಿ ಗ್ರಾಮಗಳಲ್ಲಿ ಸ್ಥಾಪಿಸುತ್ತಿರುವ 60 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರಕ್ಕೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 308 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಸೌರ ವಿದ್ಯುತ್ ಸ್ಥಾವರದ ಸ್ಥಾಪನೆಯು ಇಂದೋರ್ ಮುನ್ಸಿಪಲ್ ಕಾರ್ಪೊರೇಷನಿಗೆ ತಿಂಗಳಿಗೆ ಸುಮಾರು 4 ಕೋಟಿ ರೂ.ಗಳ ವಿದ್ಯುತ್ ಬಿಲ್ ಉಳಿಸಲು ಸಹಾಯ ಮಾಡುತ್ತದೆ. ಸೌರ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ನಿಧಿ ಒದಗಿಸಲು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ 244 ಕೋಟಿ ರೂ.ಗಳ ಹಸಿರು ಬಾಂಡ್ ಗಳನ್ನು ನೀಡಿತ್ತು. ಇದು ಹಸಿರು ಬಾಂಡ್ ಗಳನ್ನು ವಿತರಿಸಿದ ದೇಶದ ಮೊದಲ ನಗರ ಸಂಸ್ಥೆಯಾಗಿದೆ. 29 ರಾಜ್ಯಗಳ ಜನರು ಸುಮಾರು 720 ಕೋಟಿ ರೂ.ಗಳ ಮೌಲ್ಯದೊಂದಿಗೆ ಚಂದಾದಾರರಾಗಿದ್ದರಿಂದ ಇದು ಅಸಾಧಾರಣ ಪ್ರತಿಕ್ರಿಯೆಯನ್ನು ದಾಖಲಿಸಿತು. ಇದು ಬಿಡುಗಡೆಯಾದ ಸಂದರ್ಭದಲ್ಲಿದ್ದ ಆರಂಭಿಕ ಮೌಲ್ಯಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.