ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಏಪ್ರಿಲ್ 21ರಂದು ಬೆಳಿಗ್ಗೆ ಸುಮಾರು 9.15 ಗಂಟೆಗೆ ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಶ್ರೀ ಗುರು ತೇಜ್ ಬಹಾದ್ದೂರ್ ಜಿ ಅವರ 400ನೇ ಪ್ರಕಾಶ್ ಪುರಬ್ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವರು ಮತ್ತು ಇದೇ ವೇಳೆ ಸ್ಮಾರಕ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ.
ಭಾರತ ಸರ್ಕಾರವು, ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಎರಡು ದಿನಗಳ (20 ಮತ್ತು 21 ಏಪ್ರಿಲ್) ಕಾರ್ಯಕ್ರಮದಲ್ಲಿ ದೇಶದ ಭಾಗಗಳಿಂದ ಕೀರ್ತನಕಾರರು ಮತ್ತು ಮಕ್ಕಳು ‘ಶಾಬಾದ್ ಕೀರ್ತನೆ’ಯಲ್ಲಿ ಭಾಗವಹಿಸುತ್ತಾರೆ. ಗುರು ತೇಜ್ ಬಹದ್ದೂರ್ ಜಿ ಅವರ ಜೀವನವನ್ನು ಬಿಂಬಿಸುವ ಭವ್ಯವಾದ ಧ್ವನಿ ಮತ್ತು ಬೆಳಕಿನ ಪ್ರದರ್ಶನವೂ ನಡೆಯಲಿದೆ. ಇದಲ್ಲದೇ ಸಿಖ್ಖರ ಸಾಂಪ್ರದಾಯಿಕ ಸಮರ ಕಲೆ ‘ಗಟ್ಕಾ’ ಕೂಡ ಆಯೋಜಿಸಲಾಗುವುದು.
ಜಾಗತಿಕ ಇತಿಹಾಸದಲ್ಲಿ ಧರ್ಮ ಮತ್ತು ಮಾನವೀಯ ಮೌಲ್ಯಗಳು, ಆದರ್ಶಗಳು ಮತ್ತು ತತ್ವಗಳನ್ನು ರಕ್ಷಿಸಲು ತನ್ನ ಜೀವನವನ್ನು ತ್ಯಾಗ ಮಾಡಿದ ಒಂಬತ್ತನೇ ಸಿಖ್ ಗುರು ಗುರು ತೇಜ್ ಬಹಾದ್ದೂರ್ ಜಿ ಅವರ ಬೋಧನೆಗಳನ್ನು ಪ್ರಮುಖವಾಗಿ ಪ್ರಚುರಪಡಿಸಲು ಕಾರ್ಯಕ್ರಮ ಕೇಂದ್ರೀಕೃತವಾಗಿದೆ. ಮೊಘಲ್ ದೊರೆ ಔರಂಗಜೇಬನ ಆದೇಶದ ಮೇರೆಗೆ ಕಾಶ್ಮೀರಿ ಪಂಡಿತರ ಧಾರ್ಮಿಕ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದಕ್ಕಾಗಿ ಅವರನ್ನು ಗಲ್ಲಿಗೇರಿಸಲಾಯಿತು. ಅವರ ವಾರ್ಷಿಕ ಪುಣ್ಯತಿಥಿಯನ್ನು ಪ್ರತಿ ವರ್ಷ ನವೆಂಬರ್ 24 ರಂದು ಶಾಹೀದಿ ದಿನವನ್ನಾಗಿ ಸ್ಮರಿಸಲಾಗುತ್ತದೆ. ಗುರುದ್ವಾರ ಸಿಸ್ ಗಂಜ್ ಸಾಹಿಬ್ ಮತ್ತು ದೆಹಲಿಯ ಗುರುದ್ವಾರ ರಕಬ್ ಗಂಜ್ ಅವರ ಪವಿತ್ರ ತ್ಯಾಗಕ್ಕೆ ಸಂಬಂಧಿಸಿವೆ. ಅವರ ಗತವೈಭವ ರಾಷ್ಟ್ರವನ್ನು ಒಗ್ಗೂಡಿಸುವ ದೊಡ್ಡ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.