ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 4ರಂದು ಸಂಜೆ 6:30ಕ್ಕೆ ನವದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್ ನಲ್ಲಿ ನಡೆಯಲಿರುವ ಕೌಟಿಲ್ಯ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣವನ್ನೂ ಕೂಡಾ ಮಾಡಲಿದ್ದಾರೆ.
ಕೌಟಿಲ್ಯ ಆರ್ಥಿಕ ಸಮಾವೇಶದ ಮೂರನೇ ಆವೃತ್ತಿಯು ಅಕ್ಟೋಬರ್ 4ರಿಂದ 6ರವರೆಗೆ ನಡೆಯಲಿದೆ. ಈ ವರ್ಷದ ಸಮಾವೇಶವು ಹಸಿರು ಪರಿವರ್ತನೆಗೆ ಹಣಕಾಸು ಪೂರೈಕೆ, ಭೌಗೋಳಿಕ-ಆರ್ಥಿಕ ವಿಘಟನೆ ಮತ್ತು ಬೆಳವಣಿಗೆಯ ಪರಿಣಾಮಗಳು, ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ನೀತಿ ಕ್ರಮದ ತತ್ವಗಳು ಮುಂತಾದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ.
ಭಾರತೀಯ ಮತ್ತು ಅಂತರರಾಷ್ಟ್ರೀಯ ವಿದ್ವಾಂಸರು ಮತ್ತು ನೀತಿ ನಿರೂಪಕರು ಭಾರತೀಯ ಮತ್ತು ಜಾಗತಿಕ ದಕ್ಷಿಣದ ಇತರ ಆರ್ಥಿಕತೆಗಳು ಎದುರಿಸುತ್ತಿರುವ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ವಿಶ್ವದಾದ್ಯಂತದ ಭಾಷಣಕಾರರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಈ ಕೌಟಿಲ್ಯ ಆರ್ಥಿಕ ಸಮಾವೇಶವನ್ನು ಹಣಕಾಸು ಸಚಿವಾಲಯದ ಸಹಭಾಗಿತ್ವದಲ್ಲಿ ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋತ್ ಆಯೋಜಿಸುತ್ತಿದೆ.