‘ಆತ್ಮನಿರ್ಭರ್ ನಾರಿಶಕ್ತಿ ಸೆ ಸಂವಾದ್’ ದೇಶವ್ಯಾಪಿ ಕಾರ್ಯಕ್ರಮ ನಾಳೆ (ಆಗಸ್ಟ್ 12) ಆಯೋಜಿತವಾಗಿದೆ. ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡೇ-ಎನ್ಆರ್|ಎಲ್ಎಂ) ಅಡಿ ಉತ್ತೇಜನ ನೀಡಲಾಗಿರುವ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಸದಸ್ಯರ ಜತೆ ನಾಳೆ ಮಧ್ಯಾಹ್ನ 12.30ಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸ್|ನಲ್ಲಿ ನೇರ ಸಂವಾದ ನಡೆಸಲಿದ್ದಾರೆ. ದೇಶಾದ್ಯಂತ ಇರುವ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಈ ಸಂವಾದದಲ್ಲಿ ತಮ್ಮ ಯಶೋಗಾಥೆಗಳನ್ನು ಪ್ರಧಾನ ಮಂತ್ರಿ ಅವರ ಜತೆ ಹಂಚಿಕೊಳ್ಳಲಿದ್ದಾರೆ. ಪ್ರಧಾನ ಮಂತ್ರಿ ಅವರು ಕೃಷಿ ಜೀವನೋಪಾಯ ಸಾರ್ವತ್ರೀಕರಣಕ್ಕೆ ಸಂಬಂಧಿಸಿದ ಕೈಪಿಡಿಯನ್ನು ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲದೆ, ದೇಶದಲ್ಲಿರುವ ಸುಮಾರು 4 ಲಕ್ಷ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಹಣಕಾಸಿನ ನೆರವು ಒದಗಿಸುವ 1,625 ಕೋಟಿ ರೂಪಾಯಿ ಬಂಡವಾಳ ನಿಧಿಯನ್ನು ಬಿಡುಗಡೆ ಮಾಡಲಿದ್ದಾರೆ. ಜತೆಗೆ, “ಪ್ರಧಾನ ಮಂತ್ರಿಗಳ ಅತಿಸಣ್ಣ ಆಹಾರ ಸಂಸ್ಕರಣೆ ಉದ್ದಿಮೆಗಳ ತರ್ಕಬದ್ಧಗೊಳಿಸುವಿಕೆ ಯೋಜನೆ” ಅಡಿ ದೇಶದ 7,500 ಸ್ವಸಹಾಯ ಗುಂಪಿನ ಸದಸ್ಯರಿಗೆ 25 ಕೋಟಿ ರೂ. ಮೂಲಧನ ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಆಹಾರ ಸಂಸ್ಕರಣೆ ಉದ್ಯಮ ಸಚಿವಾಲಯದ ಯೋಜನೆ ಇದಾಗಿದೆ. ಅಲ್ಲದೆ, ಪ್ರಧಾನ ಮಂತ್ರಿ ಅವರು ಕೃಷಿ ಉತ್ಪಾದಕ ಸಂಘಟನೆ(ಎಫ್|ಪಿಒ)ಗಳಿಗೆ 4.13 ಕೋಟಿ ರೂ. ನಿಧಿ ಬಿಡುಗಡೆ ಮಾಡಲಿದ್ದಾರೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್|ರಾಜ್ ಖಾತೆ ಸಚಿವ ಶ್ರೀ ಗಿರಿರಾಜ್ ಸಿಂಗ್, ಆಹಾರ ಸಂಸ್ಕರಣೆ ಉದ್ಯಮಗಳ ಖಾತೆ ಸಚಿವ ಶ್ರೀ ಪುಷ್ಪಪತಿ ಕುಮಾರ್ ಪಾರಸ್, ಗ್ರಾಮೀಣಾಭಿವೃದ್ಧಿ ಖಾತೆ ಸಹಾಯಕ ಸಚಿವರಾದ ಸಾಧ್ವಿ ನಿರಂಜನ್ ಜ್ಯೋತಿ ಮತ್ತು ಶ್ರೀ ಫಗ್ಗಾನ್ ಸಿಂಗ್ ಕುಲಾಸ್ತೆ, ಪಂಚಾಯತ್|ರಾಜ್ ಖಾತೆ ಸಹಾಯಕ ಸಚಿವ ಶ್ರೀ ಕಪಿಲ್ ಮೊರೇಶ್ವರ್ ಪಾಟೀಲ್, ಆಹಾರ ಸಂಸ್ಕರಣೆ ಉದ್ಯಮಗಳ ಖಾತೆ ಸಹಾಯಕ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡೇ-ಎನ್ಆರ್|ಎಲ್ಎಂ) ಕುರಿತು
ಗ್ರಾಮೀಣ ಬಡ ಕುಟುಂಬಗಳನ್ನು ಸ್ವಸಹಾಯ ಗುಂಪುಗಳಿಗೆ ಸೇರುವಂತೆ ಉತ್ತೇಜಿಸಿ, ಹಂತ ಹಂತವಾಗಿ ಅವರನ್ನು ನಾನಾ ಕಸುಬು, ಉದ್ದಿಮೆಗಳಿಗೆ ತೊಡಗಿಸಿ, ಆರ್ಥಿಕ ಸ್ವಾವಲಂಬಿಗಳಾಗಿಸುವುದೇ ಡೇ-ಎನ್ಆರ್|ಎಲ್ಎಂ ಕಾರ್ಯಕ್ರಮದ ಉದ್ದೇಶವಾಗಿದೆ. ಗ್ರಾಮೀಣ ಬಡ ಕುಟುಂಬಗಳ ಜೀವನೋಪಾಯವನ್ನು ಸುಧಾರಣೆಗೆ ತರಲು ದೀರ್ಘಕಾಲೀನ ಬೆಂಬಲ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಈ ಮೂಲಕ ಗ್ರಾಮೀಣ ಬಡವರ ಆದಾಯ ಮಟ್ಟ ಹೆಚ್ಚಿಸಿ, ಅವರಿಗೆ ಗುಣಮಟ್ಟದ ಜೀವನ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಗ್ರಾಮೀಣ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಮರ್ಪಕ ತರಬೇತಿ ನೀಡಿ ಅವರನ್ನು ಸಮುದಾಯ ಸಂಪನ್ಮಮೂಲ ವ್ಯಕ್ತಿಗಳಾಗಿ ರೂಪಿಸಲಾಗುತ್ತಿದೆ. ಕೃಷಿ ಸಾಖಿ(ಸೇವಾದಾರರು)ಗಳು, ಪಶು ಸಾಖಿಗಳು, ಬ್ಯಾಂಕ್ ಸಾಖಿಗಳು, ವಿಮಾ ಸಾಖಿಗಳು, ಬ್ಯಾಂಕಿಂಗ್ ಪ್ರತಿನಿಧಿ ಸಾಖಿಗಳಾಗಿ ಸೇವೆ ಒದಗಿಸಲು ತರಬೇತಿ ನೀಡಲಾಗುತ್ತಿದೆ. ಅಲ್ಲದೆ, ಕೌಟುಂಬಿಕ ದೌರ್ಜನ್ಯ, ಹಿಂಸಾಚಾರ, ಮಹಿಳಾ ಶಿಕ್ಷಣ, ಲಿಂಗ ಅಸಮಾನತೆ ಮತ್ತಿತರ ಸಮಸ್ಯೆಗಳ ಕುರಿತು ಮಹಿಳೆಯರಿಗೆ ಜಾಗೃತಿ ಮೂಡಿಸುವ ಮೂಲಕ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳನ್ನು ಸಬಲೀಕರಿಸಲು ಮಿಷನ್ ಕಾರ್ಯೋನ್ಮುಖವಾಗಿದೆ.