ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ಡಿಸೆಂಬರ್, 13ರಂದು ಸಂಜೆ 5 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಶ್ರೀ ಅರಬಿಂದೋ ಅವರ 150 ನೇ ಜನ್ಮದಿನದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪುದುಚೇರಿಯ ಕಂಬನ್ ಕಲೈ ಸಂಗಮದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಶ್ರೀ ಅರಬಿಂದೋ ಅವರ ಗೌರವಾರ್ಥ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ದೇಶಾದ್ಯಂತದ ಶ್ರೀ ಅರಬಿಂದೋ ಅವರ ಅನುಯಾಯಿಗಳು ಪಾಲ್ಗೊಳ್ಳುವ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.
1872 ರ ಆಗಸ್ಟ್ 15 ರಂದು ಜನಿಸಿದ ಶ್ರೀ ಅರಬಿಂದೋ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅನನ್ಯ ಕೊಡುಗೆ ನೀಡಿದ ದಾರ್ಶನಿಕರಾಗಿದ್ದರು. ಆಜಾದಿ ಕಾ ಅಮೃತ ಮಹೋತ್ಸವ - ಸ್ವಾತಂತ್ರ್ಯದ 75ನೇ ವರ್ಷದ ಸಂದರ್ಭದಲ್ಲಿ ಭಾರತದ ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವದ ಇತಿಹಾಸವನ್ನು ಸಂಭ್ರಮಿಸುವ ಪ್ರಯತ್ನದ ಅಂಗವಾಗಿ ದೇಶದಾದ್ಯಂತ ವರ್ಷವಿಡೀ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶ್ರೀ ಅರಬಿಂದೋ ಅವರ 150 ನೇ ಜನ್ಮ ಜಯಂತಿಯನ್ನು ಆಚರಿಸಲಾಗುತ್ತಿದೆ.