ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 18 ರಂದು ಮಧ್ಯಾಹ್ನ ಸುಮಾರು 12.30 ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಒಡಿಶಾದಲ್ಲಿ ರೂ 8000 ಕೋಟಿಗೂ ಹೆಚ್ಚು ಮೌಲ್ಯದ ಹಲವಾರು ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿಲಿದ್ದಾರೆ ಮತ್ತು ಉದ್ಘಾಟನೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಪುರಿ ಮತ್ತು ಹೌರಾ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ. ಈ ರೈಲು ಒಡಿಶಾದ ಖೋರ್ಧಾ, ಕಟಕ್, ಜಾಜ್ಪುರ್, ಭದ್ರಕ್, ಬಾಲಸೋರ್ ಜಿಲ್ಲೆಗಳು ಮತ್ತು ಪಶ್ಚಿಮ ಬಂಗಾಳದ ಪಶ್ಚಿಮ್ ಮೆದಿನಿಪುರ್, ಪುರ್ಬಾ ಮೇದಿನಿಪುರ್ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ. ಈ ರೈಲು ಕಡಿಮೆ ಸಮಯದಲ್ಲಿ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣದ ಅನುಭವವನ್ನು ನೀಡುತ್ತದೆ. ಇದು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಸ್ಥಳೀಯ ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನು ಚುರುಕುಗೊಳಿಸುತ್ತದೆ.
ಪುರಿ ಮತ್ತು ಕಟಕ್ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪುನರಾಭಿವೃದ್ಧಿಗೊಂಡ ರೈಲ್ವೆ ನಿಲ್ದಾಣಗಳು ಪ್ರಯಾಣಿಕರಿಗೆ ವಿಶ್ವ ದರ್ಜೆಯ ಅನುಭವವನ್ನು ಒದಗಿಸಲು ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾದಲ್ಲಿ 100% ವಿದ್ಯುದ್ದೀಕೃತ ರೈಲ್ವೆ ಜಾಲವನ್ನು ಉದ್ಘಾಟಿಸಲಿದ್ದಾರೆ. ಇದು ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಸಂಬಲ್ಪುರ-ತಿತ್ಲಗಢ್ ರೈಲು ಮಾರ್ಗದ ಡಬ್ಲಿಂಗ್ ಅನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಅವರು ಅಂಗುಲ್-ಸುಕಿಂದಾ ನಡುವೆ ಹೊಸ ಬ್ರಾಡ್ ಗೇಜ್ ರೈಲು ಮಾರ್ಗವನ್ನು, ಮನೋಹರಪುರ-ರೂರ್ಕೆಲಾ-ಝಾರ್ಸುಗುಡ-ಜಮ್ಗಾವನ್ನು ಸಂಪರ್ಕಿಸುವ ಮೂರನೇ ಮಾರ್ಗ ಮತ್ತು ಬಿಚುಪಾಲಿ-ಜರ್ತರ್ಭ ನಡುವಿನ ಹೊಸ ಬ್ರಾಡ್ ಗೇಜ್ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದು ಒಡಿಶಾದಲ್ಲಿ ಉಕ್ಕು, ವಿದ್ಯುತ್ ಮತ್ತು ಗಣಿಗಾರಿಕೆ ವಲಯಗಳಲ್ಲಿ ತ್ವರಿತ ಕೈಗಾರಿಕಾ ಬೆಳವಣಿಗೆಯ ಪರಿಣಾಮವಾಗಿ ಹೆಚ್ಚುತ್ತಿರುವ ಸಂಚಾರಿ ಬೇಡಿಕೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಮತ್ತು ಈ ರೈಲು ವಿಭಾಗಗಳಲ್ಲಿ ಪ್ರಯಾಣಿಕರ ಸಂಖ್ಯೆಯ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.