ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2020ರ ಫೆಬ್ರವರಿ 29ರಂದು ಚಿತ್ರಕೂಟ್ ನಲ್ಲಿ ಬುಂಡೇಲ್ ಖಂಡ್ ಎಕ್ಸ್ ಪ್ರೆಸ್ ವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ಎಕ್ಸ್ ಪ್ರೆಸ್ ವೇ, ಭಾರತ ಸರ್ಕಾರ 2018ರ ಫೆಬ್ರವರಿಯಲ್ಲಿ ಘೋಷಿಸಿರುವ ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ ಗೆ ಪೂರಕವಾಗಿ ನಿರ್ಮಾಣ ಮಾಡಲಾಗುತ್ತಿದೆ.
ಉತ್ತರ ಪ್ರದೇಶ ರಾಜ್ಯ ಸರ್ಕಾರ ಈ ಬುಂಡೇಲ್ ಖಂಡ್ ಎಕ್ಸ್ ಪ್ರೆಸ್ ವೇ ನಿರ್ಮಾಣ ಮಾಡುತ್ತಿದ್ದು, ಇದು ಚಿತ್ರಕೂಟ್, ಬಾಂಡ, ಹಮೀರ್ ಪುರ್ ಮತ್ತು ಜಲೌನ್ ಜಿಲ್ಲೆಗಳನ್ನು ಹಾದುಹೋಗಲಿದೆ. ಈ ಎಕ್ಸ್ ಪ್ರೆಸ್ ವೇ ಬುಂಡೇಲ್ ಖಂಡ್ ಪ್ರದೇಶವನ್ನು ರಾಜ್ಯದ ರಾಜಧಾನಿ ದೆಹಲಿಗೆ ಆಗ್ರಾ-ಲಖನೌ ಎಕ್ಸ್ ಪ್ರೆಸ್ ವೇ ಮತ್ತು ಯಮುನಾ ಎಕ್ಸ್ ಪ್ರೆಸ್ ವೇ ಮೂಲಕ ಸಂಪರ್ಕ ಕಲ್ಪಿಸಲಿದೆ. ಜೊತೆಗೆ ಬುಂಡೇಲ್ ಖಂಡ್ ಪ್ರಾಂತ್ಯದ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸಲಿದೆ.
296 ಕಿಲೋಮೀಟರ್ ಉದ್ದದ ಈ ಎಕ್ಸ್ ಪ್ರೆಸ್ ವೇ ಚಿತ್ರಕೂಟ್, ಬಾಂಡಾ, ಮಹೋಬಾ, ಹಮೀರ್ ಪುರ್, ಜಲೌನ್, ಒರಿಯಾ ಮತ್ತು ಇತವಾ ಜಿಲ್ಲೆಗಳಿಗೆ ಅನುಕೂಲವಾಗುವ ಸಾಧ್ಯತೆ ಇದೆ.
ಭಾರತಕ್ಕೆ ಭೂ ವ್ಯವಸ್ಥೆಗಳು, ಹಡಗುಗಳು ಮತ್ತು ಜಲಾಂತರ್ಗಾಮಿ ಕ್ಷಿಪಣಿಗಳು, ಯುದ್ಧ ವಿಮಾನ, ಹೆಲಿಕಾಪ್ಟರ್, ಶಸ್ತ್ರಾಸ್ತ್ರಗಳು ಮತ್ತು ಸೆನ್ಸಾರ್ ಸೇರಿದಂತೆ ಭಾರೀ ಪ್ರಮಾಣದ ರಕ್ಷಣಾ ಉತ್ಪನ್ನಗಳ ಅವಶ್ಯಕತೆ ಇದೆ. 2025ರ ವೇಳೆಗೆ ಅಂತಹ ರಕ್ಷಣಾ ಅಗತ್ಯತೆಗಳ ಮೌಲ್ಯ ಸುಮಾರು 250 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ.
ಈ ಅಗತ್ಯತೆಗಳನ್ನು ಈಡೇರಿಸಿಕೊಳ್ಳಲು ಸರ್ಕಾರ ಲಖನೌನಲ್ಲಿ 2018ರ ಫೆಬ್ರವರಿ 21ರಂದು ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಉತ್ತರ ಪ್ರದೇಶದಲ್ಲಿ ರಕ್ಷಣಾ ಕೈಗಾರಿಕಾ ಕಾರಿಡಾರ್ ಸ್ಥಾಪಿಸುವುದಾಗಿ ಸರ್ಕಾರ ಪ್ರಕಟಿಸಿತ್ತು.
ಕೇಂದ್ರ ಸರ್ಕಾರ, ಆರಂಭದಲ್ಲಿ ಆರು ಜಿಲ್ಲೆಗಳನ್ನು ಗುರುತಿಸಿ, ಕಾರಿಡಾರ್ ಸ್ಥಾಪನೆಗೆ ಮುಂದಾಗಿತ್ತು. ಅವುಗಳೆಂದರೆ ಲಖನೌ, ಝಾನ್ಸಿ, ಚಿತ್ರಕೂಟ್, ಆಲಿಗಢ, ಕಾನ್ಪುರ ಮತ್ತು ಆಗ್ರಾ. ಅವುಗಳಲ್ಲಿ ಎರಡನ್ನು ಬುಂಡೇಲ್ ಖಂಡ್ ಪ್ರಾಂತ್ಯದ ಝಾನ್ಸಿ ಮತ್ತು ಚಿತ್ರಕೂಟಗಳಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿತ್ತು. ಝಾನ್ಸಿಯಲ್ಲಿ ಅತಿದೊಡ್ಡ ಕ್ಲಸ್ಟರ್ ನಿರ್ಮಾಣ ಮಾಡಲಾಗುವುದು.
ಝಾನ್ಸಿ ಮತ್ತು ಚಿತ್ರಕೂಟ್ ಎರಡೂ ಕಡೆ ರೈತರು ಕೃಷಿ ಬೆಳೆ ಬೆಳೆಯದಂತಹ ಭೂಮಿಯನ್ನು ಖರೀದಿಸಲಾಗಿದೆ. ಇದರಿಂದಾಗಿ ಈ ಭಾಗದ ಬಡ ರೈತರಿಗೆ ಅನುಕೂಲವಾಗಿದೆ.
ರೈತರ ಉತ್ಪನ್ನ ಸಂಸ್ಥೆಗಳು(ಎಫ್ ಪಿ ಒ)ಗಳಿಗೆ ಚಾಲನೆ.
ಅದೇ ದಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಿತ್ರಕೂಟ್ ನಲ್ಲಿ ದೇಶಾದ್ಯಂತ ಸುಮಾರು 10,000 ಕೃಷಿ ಉತ್ಪನ್ನ ಸಂಸ್ಥೆಗಳು(ಎಫ್ ಪಿ ಒ) ಆರಂಭಕ್ಕೆ ಚಾಲನೆ ನೀಡುವರು.
ದೇಶದಲ್ಲಿ ಸುಮಾರು 86 ರಷ್ಟು ರೈತರು ಸಣ್ಣ ಮತ್ತು ಮಧ್ಯಮ ವರ್ಗದವರಾಗಿದ್ದು, ಅವರು ಕನಿಷ್ಠ 1.1 ಎಕರೆಗಿಂತ ಕಡಿಮೆ ಸರಾಸರಿಯ ಭೂಮಿಯನ್ನು ಹೊಂದಿದ್ದಾರೆ. ಈ ಸಣ್ಣ, ಮಧ್ಯಮ, ಹಾಗೂ ಭೂರಹಿತ ರೈತರು ಕೃಷಿ ಉತ್ಪಾದನೆ ಹಂತದಲ್ಲಿ ಹಲವು ಕಷ್ಟಕರ ಸವಾಲುಗಳನ್ನು ಎದುರಿಸಲಿದ್ದಾರೆ. ಅವುಗಳೆಂದರೆ ತಂತ್ರಜ್ಞಾನದ ಲಭ್ಯತೆ, ಗುಣಮಟ್ಟದ ಬೀಜ, ಗೊಬ್ಬರ ಮತ್ತು ರಾಸಾಯನಿಕ ಪೂರೈಕೆ ಮತ್ತು ಅಗತ್ಯ ಹಣಕಾಸು ಒದಗಿಸುವುದು ಅದರಲ್ಲಿ ಸೇರಿದೆ. ಕಡಿಮೆ ಆರ್ಥಿಕ ಸಾಮರ್ಥ್ಯ ಹಿನ್ನೆಲೆಯಲ್ಲಿ ಆ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಹಲವು ಗಂಭೀರ ಸವಾಲುಗಳನ್ನು ಎದುರಿಸುತ್ತಾರೆ.
ಎಫ್ ಪಿ ಒಗಳು ಸಣ್ಣ, ಮಧ್ಯಮ ಮತ್ತು ಭೂರಹಿತ ರೈತರಿಗೆ ಬೆಳೆ ಬೆಳೆಯಲು ಸಹಾಯ ಮಾಡುವುದಲ್ಲದೆ, ಅಂತಹ ವಿಷಯಗಳನ್ನು ಎದುರಿಸಲು ಸಾಮೂಹಿಕ ಬಲವರ್ಧನೆಗೆ ನೆರವಾಗಲಿದೆ. ಎಫ್ ಪಿ ಒ ಸದಸ್ಯರು, ಎಲ್ಲ ಒಗ್ಗೂಡಿ ತಮ್ಮ ಕೃಷಿ ಚಟುವಟಿಕೆಗಳನ್ನು ತಾವೇ ನಿರ್ವಹಿಸಿ ಕೊಳ್ಳುತ್ತಾರೆ ಮತ್ತು ಅವರೆಲ್ಲಾ ತಂತ್ರಜ್ಞಾನವನ್ನು ಲಭ್ಯ ಮಾಡಿಕೊಂಡು ತಾವೇ ಹಣಕಾಸು ಹೂಡಿಕೆ ಮಾಡಿ, ಕೃಷಿ ಉತ್ಪನ್ನಗಳನ್ನು ಬೆಳೆದು, ಅವುಗಳನ್ನು ಮಾರುಕಟ್ಟೆ ಮಾಡುವ ಮೂಲಕ ತಮ್ಮ ಆದಾಯವನ್ನು ತ್ವರಿತವಾಗಿ ವೃದ್ಧಿಸಿಕೊಳ್ಳಲಿದ್ದಾರೆ.
‘ರೈತರ ಆದಾಯ ದ್ವಿಗುಣಗೊಳಿಸುವುದು (ಡಿಎಫ್ ಐ)’ ಕುರಿತ ವರದಿಯಲ್ಲಿ 2022 ವೇಳೆಗೆ ಸುಮಾರು 7,000 ಎಫ್ ಪಿ ಒಗಳನ್ನು ಸ್ಥಾಪಿಸಬೇಕೆಂದು ಶಿಫಾರಸ್ಸು ಮಾಡಲಾಗಿತ್ತು. ಇದು ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪ್ರಯತ್ನವಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ರೈತರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು 10,000 ಹೊಸ ಎಫ್ ಪಿ ಒಗಳನ್ನು ಸ್ಥಾಪನೆ ಮಾಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.
2020-21ರ ಕೇಂದ್ರ ಬಜೆಟ್ ನಲ್ಲಿ ಸರ್ಕಾರ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಎಂಬ ಕಾರ್ಯತಂತ್ರದಡಿ ತೋಟಗಾರಿಕಾ ಉತ್ಪನ್ನಗಳನ್ನು ಬೆಳೆಯಲು ಕ್ಲಸ್ಟರ್ ಮಾದರಿಯನ್ನು ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಆ ಮೂಲಕ ಉತ್ಪನ್ನಗಳ ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ರಫ್ತು ಉತ್ತೇಜನ ನೀಡಲಾಗುವುದು.
ನರೇಂದ್ರ ಮೋದಿ ಸರ್ಕಾರ ಅದಕ್ಕಾಗಿ ಹೊಸ ನಿಗದಿತ ಕೇಂದ್ರ ವಲಯ ಯೋಜನೆ ‘ರೈತರ ಉತ್ಪನ್ನಗಳ ಸಂಸ್ಥೆ(ಎಫ್ ಪಿಒ)ಗಳನ್ನು’ ಸ್ಥಾಪಿಸುವುದಾಗಿ ಪ್ರಕಟಿಸಿದೆ. ಸ್ಪಷ್ಟ ಕಾರ್ಯತಂತ್ರ ಮತ್ತು ಬದ್ಧತೆ ಸಂಪನ್ಮೂಲಗಳೊಂದಿಗೆ ಹತ್ತು ಸಾವಿರ ಹೊಸ ಎಫ್ ಪಿ ಒಗಳನ್ನು ಸ್ಥಾಪಿಸಲಾಗುವುದು ಮತ್ತು ಉತ್ತೇಜಿಸಲಾಗುವುದು.