ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 2021ರ ಫೆಬ್ರವರಿ 18ರಂದು ಮಧ್ಯಾಹ್ನ 12 ಗಂಟೆಗೆ ಅಸ್ಸಾಂನಲ್ಲಿ ಮಹಾಬಾಹು-ಬ್ರಹ್ಮಪುತ್ರಕ್ಕೆ ಚಾಲನೆ ನೀಡಿ, ಧುಬ್ರಿ ಫುಲ್ಬಾರಿ ಸೇತುವೆಗೆ ಶಂಕುಸ್ಥಾಪನೆ ಮತ್ತು ಮಜೂಲಿ ಸೇತುವೆಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು; ಬಂದರು, ಹಡಗು ಮತ್ತು ಜಲ ಸಾರಿಗೆ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು ಮತ್ತು ಅಸ್ಸಾಂ ಮುಖ್ಯಮಂತ್ರಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.
ಮಹಾಬಾಹು- ಬ್ರಹ್ಮಪುತ್ರ
ಮಹಾಬಾಹು-ಬ್ರಹ್ಮಪುತ್ರಗೆ ನೀಡಲಿರುವ ಚಾಲನೆ, ನೀಮತಿ-ಮಜುಲಿ ದ್ವೀಪಗಳು, ಉತ್ತರ ಗುವಾಹಟಿ-ದಕ್ಷಿಣ ಗುವಾಹಟಿ ಮತ್ತು ಧುಬ್ರಿ-ಹಟ್ಸಿಂಗಿಮರಿ ನಡುವಿನ ರೋ-ಪ್ಯಾಕ್ಸ್ ಹಡಗು ಕಾರ್ಯಾಚರಣೆಯ ಉದ್ಘಾಟನೆಯ ಅಂಗವಾಗಿದೆ; ಜೋಗಿಗೋಪಾದ ಒಳನಾಡು ಜಲ ಸಾರಿಗೆ (ಐಡಬ್ಲ್ಯೂಟಿ) ಟರ್ಮಿನಲ್ ಮತ್ತು ಬ್ರಹ್ಮಪುತ್ರ ನದಿಯ ಗುಂಟ ವಿವಿಧ ಪ್ರವಾಸಿ ಜಟ್ಟಿಗಳು ಮತ್ತು ಸುಗಮ ವಾಣಿಜ್ಯಕ್ಕೆ ಡಿಜಿಟಲ್ ಪರಿಹಾರಗಳನ್ನು ಪ್ರಾರಂಭಿಸುವುದಾಗಿದೆ. ಈ ಕಾರ್ಯಕ್ರಮವು ಭಾರತದ ಪೂರ್ವ ಭಾಗಗಳಿಗೆ ತಡೆರಹಿತ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ ಮತ್ತು ಬ್ರಹ್ಮಪುತ್ರ ನದಿ ಮತ್ತು ಬರಾಕ್ ನದಿಯ ಸುತ್ತ ವಾಸಿಸುವ ಜನರಿಗಾಗಿಗೆ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಒಳಗೊಂಡಿದೆ.
ರೋ-ಪ್ಯಾಕ್ಸ್ ಸೇವೆಗಳು ನದಿ ದಂಡೆಗಳ ನಡುವೆ ಸಂಪರ್ಕವನ್ನು ಒದಗಿಸುವ ಮೂಲಕ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ರಸ್ತೆಯ ಮೂಲಕ ಪ್ರಯಾಣಿಸಬೇಕಾದ ದೂರವನ್ನು ಕಡಿಮೆ ಮಾಡುತ್ತದೆ. ನೀಮತಿ ಮತ್ತು ಮಜುಲಿ ನಡುವಿನ ರೋ-ಪ್ಯಾಕ್ಸ್ ಕಾರ್ಯಾಚರಣೆಯು ಪ್ರಸ್ತುತ ವಾಹನಗಳಿಂದ ಪ್ರಯಾಣಿಸುತ್ತಿರುವ ಒಟ್ಟು 420 ಕಿ.ಮೀ ದೂರವನ್ನು ಕೇವಲ 12 ಕಿ.ಮೀ.ಗೆ ಇಳಿಸುತ್ತದೆ, ಇದರ ಪರಿಣಾಮವಾಗಿ ಈ ಪ್ರದೇಶದ ಸಣ್ಣ-ಪ್ರಮಾಣದ ಕೈಗಾರಿಕೆಗಳ ಸಾಗಣೆಯ ಮೇಲೆ ಗಣನೀಯ ಪರಿಣಾಮ ಬೀರುತ್ತದೆ. ಎರಡು ದೇಶೀಯವಾಗಿ ಖರೀದಿಸಲಾದ ರೋ-ಪಾಕ್ಸ್ ಹಡಗುಗಳು ಅಂದರೆ ಎಂ.ವಿ. ರಾಣಿ ಗಾಯ್ದಿನ್ಲು ಮತ್ತು ಎಂ.ವಿ. ಸಚಿನ್ ದೇವ್ ಬರ್ಮನ್ ಕಾರ್ಯಾಚರಣೆ ಮಾಡಲಿವೆ. ರೋ-ಪ್ಯಾಕ್ಸ್ ಹಡಗು ಎಂ.ವಿ. ಜೆ.ಎಫ್.ಆರ್. ಜಾಕೋಬ್ ಪರಿಚಯಿಸುವುದರೊಂದಿಗೆ ಉತ್ತರ ಮತ್ತು ದಕ್ಷಿಣ ಗುವಾಹಟಿಯ ನಡುವಿನ ಸುಮಾರು 40 ಕಿ.ಮೀ ಪ್ರಯಾಣದ ದೂರವನ್ನು ಕೇವಲ 3 ಕಿ.ಮೀ.ಗೆ ಇಳಿಸುತ್ತದೆ. ಎಂ.ವಿ. ಬಾಬ್ ಖಥಿಂಗ್ ಅನ್ನು ಧುಬ್ರಿ ಮತ್ತು ಹ್ಯಾಟ್ಸಿಂಗರಿ ನಡುವೆ ಪರಿಚಯಿಸುವುದರಿಂದ 220 ಕಿ.ಮೀ ಪ್ರಯಾಣದ ದೂರವನ್ನು 28 ಕಿ.ಮೀ.ಗೆ ಇಳಿಯುತ್ತದೆ, ಇದರಿಂದಾಗಿ ಪ್ರಯಾಣದ ದೂರ ಮತ್ತು ಸಮಯವನ್ನು ಅಪಾರವಾಗಿ ಉಳಿಸಬಹುದು.
ಈ ಕಾರ್ಯಕ್ರಮವು ನಾಲ್ಕು ಸ್ಥಳಗಳಲ್ಲಿ ಪ್ರವಾಸಿ ಜೆಟ್ಟಿಗಳ ನಿರ್ಮಾಣಕ್ಕಾಗಿ ಶಿಲಾನ್ಯಾಸವನ್ನೂ ಒಳಗೊಂಡಿದೆ. ಪ್ರವಾಸೋದ್ಯಮ ಸಚಿವಾಲಯದ 9.41 ಕೋಟಿ ರೂ. ವೆಚ್ಚದ ಈ ಜಟ್ಟಿಗಳೆಂದರೆ, ನೀಮಾತಿ, ವಿಶ್ವನಾಥ್ ಘಾಟ್, ಪಾಂಡು ಮತ್ತು ಜೋಗಿಗೋಪ ಆಗಿವೆ. ಈ ಜೆಟ್ಟಿಗಳು ರಿವರ್ ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ, ಸ್ಥಳೀಯ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಸ್ಥಳೀಯ ವ್ಯವಹಾರಕ್ಕೆ ವೃದ್ಧಿ ನೀಡುತ್ತವೆ.
ಈ ಕಾರ್ಯಕ್ರಮದಡಿ ಖಾಯಂ ಒಳನಾಡು ಜಲ ಸಾರಿಗೆ ಟರ್ಮಿನಲ್ ಅನ್ನು ಸಹ ಜೋಗಿಗೋಪಾದಲ್ಲಿ ನಿರ್ಮಿಸಲಾಗುತ್ತಿದ್ದು, ಇದು ಜೋಗಿಗೋಪಾದಲ್ಲಿ ತಲೆಎತ್ತಲಿರುವ ಬಹು ಮಾದರಿ ಸಾರಿಗೆ ಪಾರ್ಕ್ ಸಂಪರ್ಕಿಸುತ್ತದೆ. ಈ ಟರ್ಮಿನಲ್ ಕೋಲ್ಕತ್ತಾ ಮತ್ತು ಹಾಲ್ಡಿಯಾದತ್ತ ಸಾಗುವ ಸಿಲ್ಗುರಿ ಕಾರಿಡಾರ್ ನ ಸಂಚಾರದ ದಟ್ಟಣೆ ತಗ್ಗಿಸಲು ನೆರವಾಗುತ್ತದೆ. ಇದು ಪ್ರವಾಸದ ಋತುವಿನಲ್ಲೂ ವಿವಿಧ ಈಶಾನ್ಯ ರಾಜ್ಯಗಳಾದ ಮೇಘಾಲಯ ಮತ್ತು ತ್ರಿಪುರಾ ಹಾಗೂ ಭೂತಾನ್ ಬಾಂಗ್ಲಾದೇಶಕ್ಕೂ ತಡೆರಹಿತ ಸರಕು ಸಾಗಣಗೆ ಅವಕಾಶ ಕಲ್ಪಿಸುತ್ತದೆ
ಪ್ರಧಾನಮಂತ್ರಿಯವರು ಎರಡು ಇ-ಪೋರ್ಟಲ್ ಗಳಿಗೂ ಚಾಲನೆ ನೀಡಲಿದ್ದು, ಇದು ಸುಗಮ ವಾಣಿಜ್ಯವನ್ನು ಮತ್ತಷ್ಟು ಸುಲಭ ಮಾಡಲಿದೆ. ಕಾರ್-ಡಿ (ಕಾರ್ಗೋ ದತ್ತಾಂಶ) ಪೋರ್ಟಲ್ ಸರಕು ಮತ್ತು ಕ್ರೂಸ್ ದತ್ತಾಂಶವನ್ನು ಸಕಾಲದ ಆಧಾರದಲ್ಲಿ ಒಗ್ಗೂಡಿಸುತ್ತದೆ. ಪಾನಿ (ಪಥ ದರ್ಶಕ ಮಾಹಿತಿ ಮತ್ತು ನೆರವಿನ ಪೋರ್ಟಲ್) ನದಿ ಪಥದರ್ಶಕ ಮತ್ತು ಮೂಲಸೌಕರ್ಯ ಕುರಿತ ಮಾಹಿತಿ ಒದಗಿಸುವುದಕ್ಕೆ ಒಂದು ತಾಣದ ಪರಿಹಾರವಾಗಿದೆ.
ಧುಬ್ರಿ ಫುಲಬಾರಿ ಸೇತುವೆ
ಪ್ರಧಾನಮಂತ್ರಿಯವರು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಧುಬ್ರಿ (ಉತ್ತರ ದಂಡೆ) ಮತ್ತು ಫುಲ್ಬಾರಿ (ದಕ್ಷಿಣ ದಂಡೆ) ನಡುವೆ ನಾಲ್ಕು ಪಥದ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉದ್ದೇಶಿತ ಸೇತುವೆ ರಾ.ಹೆ. 127 ಬಿಯಲ್ಲಿ ಆರಂಭವಾಗಿ, (ಪೂರ್ವ-ಪಶ್ಚಿಮ ಕಾರಿಡಾರ್) ರಾ.ಹೆ. 106ರಲ್ಲಿ ಮೇಘಾಲಯದ ನೋಂಗ್ ಸ್ಟೋಯಿನ್ ನಲ್ಲಿ ಕೊನೆಗೊಳ್ಳುತ್ತದೆ. ಇದು ಅಸ್ಸಾಂನ ಧುಬ್ರಿಯನ್ನು ಪುಲ್ಬಾರಿ, ತುರಾ, ರೋಣ್ ಗ್ರಾಮ್ ಮತ್ತು ಮೇಘಾಲಯದ ರೋಂಗ್ ಜೆಂಗ್ ನಡುವೆ ಸಂಪರ್ಕಿಸುತ್ತದೆ.
ಈ ಸೇತುವೆಯನ್ನು ಅಂದಾಜು 4997 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಇದು ನದಿಯ ಎರಡೂ ದಂಡೆಯ ನಡುವೆ ಪ್ರಯಾಣಿಸಲು ಫೆರ್ರಿ ಸೇವೆಯನ್ನು ಅವಲಂಬಿಸಿರುವ ಅಸ್ಸಾಂ ಮತ್ತು ಮೇಘಾಲಯದ ಜನರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲಿದೆ. ಇದು ರಸ್ತೆಯ ಮೂಲಕ ಪ್ರಯಾಣಿಸುವ 205 ಕಿ.ಮೀ. ದೂರವನ್ನು 19 ಕಿ.ಮೀ. ಗೆ ತಗ್ಗಿಸಲಿದೆ, ಇದು ಸೇತುವೆಯ ಒಟ್ಟು ಉದ್ದವೂ ಆಗಿದೆ.
ಮಜೂಲಿ ಸೇತುವೆ
ಪ್ರಧಾನಮಂತ್ರಿಯವರು ಬ್ರಹ್ಮಪುತ್ರ ನದಿಯ ಮೇಲೆ ಮಜೂಲಿ (ಉತ್ತರ ದಂಡೆ) ಮತ್ತು ಜೋರ್ಹಟ್ (ದಕ್ಷಿಣ ದಂಡೆ) ನಡುವೆ ದ್ವಿಪಥದ ಸೇತುವೆಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಈ ಸೇತುವೆ ರಾ.ಹೆ. 715 ಕೆಯಲ್ಲಿದ್ದು, ನೀಮತಿಘಾಟ್ (ಜೋರ್ಹಟ್ ಕಡೆ) ಮತ್ತು ಕಮಲ್ಬರಿ (ಮಜೂಲಿ ಕಡೆ) ಸಂಪರ್ಕಿಸಲಿದೆ. ಸೇತುವೆಯ ನಿರ್ಮಾಣ, ದೀರ್ಘ ಕಾಲದಿಂದ ಅಸ್ಸಾಂನ ಭೂಭಾಗಕ್ಕೆ ಸಂಪರ್ಕ ಪಡೆಯಲು ಫೆರ್ರಿ ಸೇವೆ ಅವಲಂಬಿಸಿರುವ ಮಜೂಲಿಯ ಜನರ ದೀರ್ಘ ಕಾಲದ ಬೇಡಿಕೆಯಾಗಿದೆ.