ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವ ಜಲ ದಿನವಾದ 2021ರ ಮಾರ್ಚ್ 22ರಂದು ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ “ಜಲ ಶಕ್ತಿ ಅಭಿಯಾನ: ಮಳೆಯನ್ನು ಹಿಡಿಯಿರಿ’’ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಪ್ರಧಾನಮಂತ್ರಿಗಳ ಸಮಕ್ಷಮದಲ್ಲಿ, ಅಂತರ ನಡಿ ಜೋಡಣೆಯ ರಾಷ್ಟ್ರೀಯ ಸಂಭಾವ್ಯ ಮಹಾಯೋಜನೆಯ ಮೊದಲ ಯೋಜನೆಯಾದ ಕೆನ್ ಬೆಟ್ವಾ ನದಿ ಜೋಡಣಾ ಯೋಜನೆಯ ಅನುಷ್ಠಾನದ ಐತಿಹಾಸಿಕ ಒಪ್ಪಂದಕ್ಕೆ ಕೇಂದ್ರ ಜಲಶಕ್ತಿ ಸಚಿವರು ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಸಹಿ ಹಾಕಲಿದ್ದಾರೆ.
“ಜಲ ಶಕ್ತಿ ಅಭಿಯಾನ: ಮಳೆಯುನ್ನು ಹಿಡಿಯಿರಿ” ಕುರಿತು
“ಮಳೆಯನ್ನು ಹಿಡಿಯಿರಿ, ಅದು ಯಾವಾಗ ಎಲ್ಲಿ ಬೀಳುತ್ತದೋ, ಅಲ್ಲೇ ಹಿಡಿಯಿರಿ’’ ಎಂಬ ಘೋಷ ವಾಕ್ಯದೊಂದಿಗೆ ದೇಶಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಈ ಅಭಿಯಾನವನ್ನು ನಡೆಸಲಾಗುವುದು. ದೇಶದ ಮುಂಗಾರು ಪೂರ್ವ ಅವಧಿ ಮತ್ತು ಮುಂಗಾರು ಮಳೆಯ ಅವಧಿ ಸೇರಿ 2021ರ ಮಾರ್ಚ್ 22ರಿಂದ 2021ರ ನವೆಂಬರ್ 30ರವರೆಗೆ ಈ ಅಭಿಯಾನ ಅನುಷ್ಠಾನಗೊಳ್ಳಲಿದೆ. ಜನರ ಭಾಗಿದಾರಿಕೆ ಮೂಲಕ ಜಲಸಂರಕ್ಷಣೆಯನ್ನು ತಳಮಟ್ಟದವರೆಗೆ ಕೊಂಡೊಯ್ಯಲು ಅಭಿಯಾನಕ್ಕೆ ಜನಾಂದೋಲನದ ರೂಪದಲ್ಲಿ ಚಾಲನೆ ನೀಡಲಾಗುವುದು. ಸೂಕ್ತ ರೀತಿಯಲ್ಲಿ ಮಳೆ ನೀರು ಸಂಗ್ರಹ ಮಾಡುವುದನ್ನು ಖಾತ್ರಿಪಡಿಸಿಕೊಳ್ಳಲು, ಹವಾಮಾನ ಮತ್ತು ಮಣ್ಣಿನ ಸ್ಥಿತಿಗತಿ ಆಧರಿಸಿ ಅದಕ್ಕೆ ಅನುಗುಣವಾಗಿ ಮಳೆ ನೀರು ಕೊಯ್ಲು ವ್ಯವಸ್ಥೆಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಎಲ್ಲ ಭಾಗಿದಾರರನ್ನು ಒಗ್ಗೂಡಿಸಲಾಗುವುದು.
ಕಾರ್ಯಕ್ರಮದ ನಂತರ ಪ್ರತಿಯೊಂದು ಜಿಲ್ಲೆಯಲ್ಲೂ(ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜ್ಯಗಳನ್ನು ಹೊರತುಪಡಿಸಿ) ಗ್ರಾಮ ಸಭೆಗಳು ನಡೆಯಲಿದ್ದು, ಅಲ್ಲಿ ನೀರು ಮತ್ತು ಜಲಸಂರಕ್ಷಣೆ ಕುರಿತಂತೆ ಚರ್ಚೆ ನಡೆಸಲಾಗುವುದು. ಗ್ರಾಮ ಸಭೆಗಳು, ನೀರಿನ ಸಂರಕ್ಷಣೆಗೆ ‘ಜಲ ಶಪಥ’ವನ್ನು ಕೈಗೊಳ್ಳಲಿವೆ.
ಕೆನ್ ಬೆಟ್ವಾ ಜೋಡಣಾ ಯೋಜನೆ ಒಪ್ಪಂದದ ಕುರಿತು
ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು, ಅಂತರ ನದಿ ಜೋಡಣೆಗಳ ಮೂಲಕ ಹೆಚ್ಚಿನ ನೀರಿರುವ ಪ್ರದೇಶಗಳಿಂದ ಬರಪೀಡಿತ ಮತ್ತು ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶಗಳಿಗೆ ನೀರು ಒದಗಿಸುವ ಮಹತ್ವಾಕಾಂಕ್ಷೆಯ ಕನಸು ಕಂಡಿದ್ದರು. ಅದರ ಅನುಷ್ಠಾನದ ನಿಟ್ಟಿನಲ್ಲಿ ಈ ಒಪ್ಪಂದ ಅಂತರರಾಜ್ಯ ಸಹಕಾರ ಆರಂಭಕ್ಕೆ ನಾಂದಿ ಹಾಡಲಿದೆ. ಈ ಯೋಜನೆಯಲ್ಲಿ ದೌದಾನ್ ಅಣೆಕಟ್ಟೆ ನಿರ್ಮಾಣದ ಮೂಲಕ ಕೆನ್ ನಿಂದ ಬೆಟ್ವಾ ನದಿಗೆ ನೀರು ಹರಿಸುವುದು ಮತ್ತು ಎರಡೂ ನದಿಗಳ ಕಾಲುವೆಗಳ ಜೋಡಣೆ, ಕೆಳ ಭಾಗದ ಒಆರ್ ಆರ್ ಯೋಜನೆ, ಕೊಥಾ ಬ್ಯಾರೇಜ್ ಮತ್ತು ಬಿನಾ ಕಾಂಪ್ಲೆಕ್ಸ್ ಬಹು ಉದ್ದೇಶದ ಯೋಜನೆ ಒಳಗೊಂಡಿವೆ. ಇದರಿಂದ ವಾರ್ಷಿಕ 10.62 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಕರ್ಯ ಲಭ್ಯವಾಗಲಿದೆ, 62 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ ಮತ್ತು 103 ಮೆಗಾವ್ಯಾಟ್ ಜಲ ವಿದ್ಯುತ್ ಉತ್ಪಾದನೆಯಾಗಲಿದೆ.
ಬುಂಡೇಲ್ ಖಂಡದ ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಮಧ್ಯಪ್ರದೇಶದ ಪನ್ನಾ, ಟಿಕಮ್ ಗರ್, ಛಾತ್ರಾಪುರ್, ಸಾಗರ್, ದಮೋಹ್, ದತಿಯಾ ವಿದಿಶಾ, ಶಿವಪುರಿ ಮತ್ತು ಉತ್ತರ ಪ್ರದೇಶದ ಬಂಡ, ಮಹೋಬಾ, ಝಾನ್ಸಿ ಮತ್ತು ಲಲಿತ್ ಪುರ್ ಗೆ ನೀರು ಒದಗಿಸಲಿದೆ. ದೇಶದ ಅಭಿವೃದ್ಧಿಗೆ ನೀರಿನ ಕೊರತೆ ಅಡ್ಡಿಯಾಗಬಾರದು ಎಂಬುದನ್ನು ಖಾತ್ರಿಪಡಿಸಲು ಇನ್ನೂ ಹೆಚ್ಚಿನ ಅಂತಾರಾಜ್ಯ ನದಿ ಜೋಡಣಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಇದರಿಂದ ಹಾದಿ ಸುಗಮವಾಗಲಿದೆ.