ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಉತ್ತರ ಪ್ರದೇಶದ ಮಹೋಬಾದಲ್ಲಿ 2021ರ ಆಗಸ್ಟ್ 10ರಂದು ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉಜ್ವಲಾ 2.0 (ಪ್ರಧಾನಮಂತ್ರಿ ಉಜ್ವಲ ಯೋಜನೆ – ಪಿ.ಎಂ.ಯು.ವೈ) ಗೆ ಚಾಲನೆ ನೀಡಲಿದ್ದಾರೆ. ಈ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಉಜ್ವಲಾ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದು, ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಉಜ್ವಲಾ 1.0ರಿಂದ ಉಜ್ವಲಾ 2.0ರವರೆಗಿನ ಪಯಣ
ಉಜ್ವಲಾ 1.0ನ್ನು 2016ರಲ್ಲಿ ಆರಂಭಿಸಿದಾಗ, 5 ಕೋಟಿ ಬಿಪಿಎಲ್ ಕುಟುಂಬಗಳಿಗೆ ಎಲ್.ಪಿ.ಜಿ. ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಲಾಗಿತ್ತು. ತದನಂತರ ಯೋಜನೆಯನ್ನು 2018ರಲ್ಲಿ ವಿಸ್ತರಣೆ ಮಾಡಿ, ಮತ್ತೆ ಏಳು ಪ್ರವರ್ಗದ ಮಹಿಳೆಯರನ್ನು (ಎಸ್.ಸಿ/ಎಸ್.ಟಿ. ಪಿಎಂಎವೈ, ಎ.ಎ.ವೈ, ಅತ್ಯಂತ ಹಿಂದುಳಿದ ವರ್ಗಗಳು, ಚಹಾ ತೋಟದಲ್ಲಿ ಕೆಲಸ ಮಾಡುವವರು, ಅರಣ್ಯ ವಾಸಿಗಳು ಮತ್ತು ದ್ವೀಪವಾಸಿಗಳು) ಸೇರಿಸಲಾಯಿತು. ಜೊತೆಗೆ ಪರಿಷ್ಕೃತ ಗುರಿಯನ್ನು 8 ಕೋಟಿ ಎಲ್.ಪಿ.ಜಿ. ಸಂಪರ್ಕಕ್ಕೆ ಹೆಚ್ಚಿಸಲಾಯಿತು. ಈ ಗುರಿಯನ್ನು ಗುರಿಯ ಗಡುವಿನ 7 ತಿಂಗಳ ಮೊದಲೇ ಅಂದರೆ 2019ರ ಆಗಸ್ಟ್ ನಲ್ಲಿ ಸಾಧಿಸಲಾಯಿತು.
ಹಣಕಾಸು ವರ್ಷ 21-22ರ ಸಾಲಿನ ಕೇಂದ್ರ ಆಯವ್ಯಯದಲ್ಲಿ ಹೆಚ್ಚುವರಿಯಾಗಿ 1 ಕೋಟಿ ಎಲ್.ಪಿ.ಜಿ. ಸಂಪರ್ಕವನ್ನು ಪಿ.ಎಂ.ಯುವೈ ಯೋಜನೆ ಅಡಿಯಲ್ಲಿ ಪ್ರಕಟಿಸಲಾಯಿತು. ಈ ಹಿಂದಿನ ಪಿಎಂಯುವೈ ಹಂತಗಳಲ್ಲಿ ಸೇರದವರಿಗೆ ಈ ಒಂದು ಕೋಟಿ ಹೆಚ್ಚುವರಿ ಪಿಎಂಯುವೈ (ಉಜ್ವಲ 2.0) ಅಡಿ ಠೇವಣಿ ರಹಿತ ಎಲ್.ಪಿ.ಜಿ. ಸಂಪರ್ಕಗಳನ್ನು ಒದಗಿಸಲು ಉದ್ದೇಶಿಸಲಾಗಿದೆ.
ಠೇವಣಿ ರಹಿತ ಎಲ್.ಪಿ.ಜಿ. ಸಂಪರ್ಕದ ಜೊತೆಗೆ ಉಜ್ವಲ 2.0 ಪ್ರಥಮ ಮರುಪೂರಣ ಸಿಲಿಂಡರ್ ಮತ್ತು ಅಡುಗೆ ಒಲೆಯನ್ನು ಉಚಿತವಾಗಿ ನೀಡಲಾಗುತ್ತದೆ. ಜೊತೆಗೆ ನೋಂದಣಿ ಪ್ರಕ್ರಿಯೆಗೆ ಕನಿಷ್ಠ ಕಾಗದ ಪತ್ರವಿರುತ್ತದೆ. ಉಜ್ವಲ 2.0ರಲ್ಲಿ, ವಲಸಿಗರು ಪಡಿತರ ಚೀಟಿ ಅಥವಾ ವಿಳಾಸದ ಆಧಾರವನ್ನು ಒದಗಿಸುವ ಅಗತ್ಯವಿರುವುದಿಲ್ಲ. ‘ಕುಟುಂಬದ ಘೋಷಣೆ’ ಮತ್ತು ‘ವಿಳಾಸದ ಪುರಾವೆ’ಗೆ ‘ಸ್ವಯಂ ಘೋಷಣೆ’ಯಷ್ಟೇ ಸಾಕಾಗುತ್ತದೆ. ಉಜ್ವಲ 2.0 ಸಾರ್ವತ್ರಿಕ ಎಲ್.ಪಿ.ಜಿ. ಲಭ್ಯತೆಯ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಸಾಧಿಸಲು ನೆರವಾಗುತ್ತದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.