

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಸೆಪ್ಟೆಂಬರ್ 17ರಂದು ಸಂಜೆ 5.30ಕ್ಕೆ ನವದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ (ಎನ್ಎಲ್ ಪಿ ) ಗೆ ಚಾಲನೆ ನೀಡಲಿದ್ದಾರೆ.
ಇತರ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚವು ಹೆಚ್ಚಾಗಿರುವುದರಿಂದ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ಅಗತ್ಯವನ್ನು ಅನುಭವಿಸಲಾಯಿತು. ದೇಶೀಯ ಮತ್ತು ರಫ್ತು ಮಾರುಕಟ್ಟೆಗಳೆರಡರಲ್ಲೂ ಭಾರತೀಯ ಸರಕುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವುದು ಅತ್ಯಗತ್ಯವಾಗಿದೆ. ಕಡಿಮೆಯಾದ ಲಾಜಿಸ್ಟಿಕ್ಸ್ ವೆಚ್ಚವು ಆರ್ಥಿಕತೆಯ ವಿವಿಧ ವಲಯಗಳಲ್ಲಿ ದಕ್ಷತೆಯನ್ನು ಸುಧಾರಿಸುತ್ತದೆ, ಮೌಲ್ಯವರ್ಧನೆ ಮತ್ತು ಉದ್ಯಮವನ್ನು ಉತ್ತೇಜಿಸುತ್ತದೆ.
2014 ರಿಂದ, ಸರ್ಕಾರವು ಸುಗಮ ವ್ಯವಹಾರ ಮತ್ತು ಸುಲಭ ಜೀವನ ಎರಡನ್ನೂ ಸುಧಾರಿಸಲು ಗಮನಾರ್ಹ ಒತ್ತು ನೀಡಿದೆ. ಇಡೀ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಯ ಅಭಿವೃದ್ಧಿಗಾಗಿ ಅಂತರ್ ಶಿಸ್ತೀಯ, ಅಡ್ಡ-ವಲಯ ಮತ್ತು ಬಹು-ನ್ಯಾಯವ್ಯಾಪ್ತಿಯ ಚೌಕಟ್ಟನ್ನು ರೂಪಿಸುವ ಮೂಲಕ ಹೆಚ್ಚಿನ ವೆಚ್ಚ ಮತ್ತು ಅದಕ್ಷತೆಯ ಸಮಸ್ಯೆಗಳನ್ನು ಪರಿಹರಿಸುವ ಸಮಗ್ರ ಪ್ರಯತ್ನವಾದ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಈ ನೀತಿಯು ಭಾರತೀಯ ಸರಕುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಪ್ರಯತ್ನವಾಗಿದೆ.
ಸಮಗ್ರ ಯೋಜನೆ ಮತ್ತು ಅನುಷ್ಠಾನದಲ್ಲಿ ಎಲ್ಲಾ ಮಧ್ಯಸ್ಥಗಾರರನ್ನು ಒಗ್ಗೂಡಿಸುವ ಮೂಲಕ ವಿಶ್ವದರ್ಜೆಯ ಆಧುನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಪ್ರಧಾನ ಮಂತ್ರಿ ಅವರು ದೃಷ್ಟಿಕೋನವಾಗಿದೆ, ಇದರಿಂದ ಯೋಜನೆಯ ಅನುಷ್ಠಾನದಲ್ಲಿ ದಕ್ಷತೆ ಮತ್ತು ಒಡಂಬಡಿಕೆಯನ್ನು ಸಾಧಿಸಲಾಗುತ್ತದೆ. ಪ್ರಧಾನಮಂತ್ರಿ ಅವರು ಕಳೆದ ವರ್ಷ ಪ್ರಾರಂಭಿಸಿದ ಮುಟಿ-ಮಾದರಿ ಸಂಪರ್ಕಕ್ಕಾಗಿ ರಾಷ್ಟ್ರೀಯ ಮಾಸ್ಟರ್ ಪ್ಲ್ಯಾನ್ ಪಿಎಂ ಗತಿಶಕ್ತಿ ಈ ದಿಕ್ಕಿನಲ್ಲಿ ಒಂದು ಪ್ರವರ್ತಕ ಹೆಜ್ಜೆಯಾಗಿದೆ. ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಪ್ರಾರಂಭಿಸುವುದರೊಂದಿಗೆ ಪಿಎಂ ಗತಿಶಕ್ತಿಗೆ ಮತ್ತಷ್ಟು ಉತ್ತೇಜನ ಮತ್ತು ಪೂರಕತೆ ಸಿಗಲಿದೆ.