ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಅಕ್ಟೋಬರ್ 11ರಂದು ಬೆಳಗ್ಗೆ 11 ಗಂಟೆಗೆ ಭಾರತೀಯ ಬಾಹ್ಯಾಕಾಶ ಸಂಘಕ್ಕೆ (ಐಎಸ್ಪಿಎ) ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಈ ಹೆಗ್ಗುರುತಿನ ಸಂದರ್ಭದಲ್ಲಿ ಅವರು ಬಾಹ್ಯಾಕಾಶ ಉದ್ಯಮದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಘದ (ಐಎಸ್ಪಿಎ) ಕುರಿತು
ʻಐಎಸ್ಪಿಎʼ - ಇದು ಬಾಹ್ಯಾಕಾಶ ಮತ್ತು ಉಪಗ್ರಹ ಕಂಪನಿಗಳ ಪ್ರಮುಖ ಉದ್ಯಮ ಸಂಘವಾಗಿದ್ದು, ಭಾರತೀಯ ಬಾಹ್ಯಾಕಾಶ ಉದ್ಯಮದ ಸಾಮೂಹಿಕ ಧ್ವನಿಯಾಗಲು ಬಯಸುತ್ತದೆ. ಇದು ಬಾಹ್ಯಾಕಾಶ ಕ್ಷೇತ್ರದ ನೀತಿಗಳಿಗೆ ಸಂಬಂಧಿಸಿದಂತೆ ಸರಕಾರಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತದೆ ಹಾಗೂ ಸರಕಾರ ಮತ್ತು ಅದರ ಅಧೀನ ಸಂಸ್ಥೆಗಳು (ಏಜೆನ್ಸಿಗಳು) ಸೇರಿದಂತೆ ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿನ ಎಲ್ಲಾ ಮಧ್ಯಸ್ಥಗಾರರೊಂದಿಗೆ ತೊಡಗಿಸಿಕೊಳ್ಳುತ್ತದೆ. ಪ್ರಧಾನಮಂತ್ರಿಯವರ ʻಆತ್ಮನಿರ್ಭರ್ ಭಾರತ್ʼ ದೃಷ್ಟಿಕೋನವನ್ನು ಪ್ರತಿಧ್ವನಿಸುವ ʻಐಎಸ್ಪಿಎʼ, ಭಾರತವನ್ನು ಸ್ವಾವಲಂಬಿ, ತಾಂತ್ರಿಕವಾಗಿ ಮುಂದುವರಿದ ಮತ್ತು ಬಾಹ್ಯಾಕಾಶ ರಂಗದಲ್ಲಿ ಪ್ರಮುಖ ದೇಶವನ್ನಾಗಿ ಮಾಡಲು ನೆರವು ನೀಡುತ್ತದೆ.
ಬಾಹ್ಯಾಕಾಶ ಮತ್ತು ಉಪಗ್ರಹ ತಂತ್ರಜ್ಞಾನಗಳಲ್ಲಿ ಸುಧಾರಿತ ಸಾಮರ್ಥ್ಯಗಳನ್ನು ಹೊಂದಿರುವ ಪ್ರಮುಖ ದೇಶೀಯ ಮತ್ತು ಜಾಗತಿಕ ಸಂಸ್ಥೆಗಳನ್ನು ʻಐಎಸ್ಪಿಎʼ ಪ್ರತಿನಿಧಿಸುತ್ತದೆ. ಇದರ ಸ್ಥಾಪಕ ಸದಸ್ಯರಲ್ಲಿ ʻಲಾರ್ಸನ್ & ಟಬ್ರೊ, ನೆಲ್ಕೊ (ಟಾಟಾ ಗ್ರೂಪ್), ಒನ್ವೆಬ್, ಭಾರ್ತಿ ಏರ್ಟೆಲ್, ಮಾಪ್ ಮೈ ಇಂಡಿಯಾ, ವಾಲ್‌ಚಂದ್ ನಗರ್ ಇಂಡಸ್ಟ್ರೀಸ್ ಮತ್ತು ಅನಂತ ಟೆಕ್ನಾಲಜಿ ಲಿಮಿಟೆಡ್ ಸೇರಿವೆ. ಗೋದ್ರೇಜ್, ಹ್ಯೂಸ್ ಇಂಡಿಯಾ, ಅಜಿಸ್ಟಾ-ಬಿಎಸ್ಟಿ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್, ಬಿಇಎಲ್, ಸೆಂಟಮ್ ಎಲೆಕ್ಟ್ರಾನಿಕ್ಸ್, ಮ್ಯಾಕ್ಸರ್ ಇಂಡಿಯಾ – ಇವು ಇತರ ಪ್ರಮುಖ ಸದಸ್ಯರಲ್ಲಿ ಸೇರಿವೆ.