





ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 29 ರಂದು ಮಧ್ಯಾಹ್ನ 12:30 ಕ್ಕೆ ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ)ಯಲ್ಲಿ ಸುಮಾರು 12,850 ಕೋಟಿ ರೂಪಾಯಿಗಳ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಚಾಲನೆಯನ್ನು ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.
ಪ್ರಮುಖ ಯೋಜನೆಯಾದ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ) ಗೆ ಪ್ರಮುಖ ಸೇರ್ಪಡೆಯಾಗಿ, ಪ್ರಧಾನಮಂತ್ರಿಯವರು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆಯ ವಿಸ್ತರಣೆಗೆ ಚಾಲನೆ ನೀಡುತ್ತಾರೆ. ಇದು ಎಲ್ಲಾ ಹಿರಿಯ ನಾಗರಿಕರಿಗೆ ಅವರ ಆದಾಯವನ್ನು ಪರಿಗಣಿಸದೆ ಆರೋಗ್ಯ ರಕ್ಷಣೆಯನ್ನು ಒದಗಿಸಲು ಸಹಾಯ ಮಾಡುತ್ತದೆ.
ದೇಶದಾದ್ಯಂತ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವುದು ಪ್ರಧಾನಮಂತ್ರಿಯವರ ನಿರಂತರ ಪ್ರಯತ್ನವಾಗಿದೆ. ಆರೋಗ್ಯ ಸೇವಾ ಮೂಲಸೌಕರ್ಯವನ್ನು ಹೆಚ್ಚು ಉತ್ತೇಜಿಸಲು ವಿವಿಧ ಆರೋಗ್ಯ ಸಂಸ್ಥೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ.
ಪ್ರಧಾನಮಂತ್ರಿಯವರು ಭಾರತದ ಮೊದಲ ಅಖಿಲ ಭಾರತ ಆಯುರ್ವೇದ ಸಂಸ್ಥೆಯ IIನೇ ಹಂತವನ್ನು ಉದ್ಘಾಟಿಸಲಿದ್ದಾರೆ. ಇದು ಪಂಚಕರ್ಮ ಆಸ್ಪತ್ರೆ, ಔಷಧ ತಯಾರಿಕೆಗೆ ಆಯುರ್ವೇದ ಔಷಧಾಲಯ, ಕ್ರೀಡಾ ಔಷಧ ಘಟಕ, ಕೇಂದ್ರ ಗ್ರಂಥಾಲಯ, ಮಾಹಿತಿ ತಂತ್ರಜ್ಞಾನ ಮತ್ತು ನವೋದ್ಯಮಗಳ ಇನ್ಕ್ಯುಬೇಶನ್ ಕೇಂದ್ರ ಮತ್ತು 500 ಆಸನಗಳ ಸಭಾಂಗಣವನ್ನು ಒಳಗೊಂಡಿದೆ. ಪ್ರಧಾನಮಂತ್ರಿಯವರು ಮಧ್ಯಪ್ರದೇಶದ ಮಂದಸೌರ್, ನೀಮುಚ್ ಮತ್ತು ಸಿಯೋನಿಯಲ್ಲಿ ಮೂರು ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಲಿದ್ದಾರೆ. ಇದಲ್ಲದೆ, ಅವರು ಹಿಮಾಚಲ ಪ್ರದೇಶದ ಬಿಲಾಸ್ ಪುರ, ಪಶ್ಚಿಮ ಬಂಗಾಳದ ಕಲ್ಯಾಣಿ, ಬಿಹಾರದ ಪಾಟ್ನಾ, ಉತ್ತರ ಪ್ರದೇಶದ ಗೋರಖ್ ಪುರ, ಮಧ್ಯಪ್ರದೇಶದ ಭೋಪಾಲ್, ಅಸ್ಸಾಂನ ಗುವಾಹಟಿ ಮತ್ತು ನವದೆಹಲಿಯ ವಿವಿಧ ಏಮ್ಸ್ ಗಳಲ್ಲಿ ಜನೌಷಧಿ ಕೇಂದ್ರವನ್ನೂ ಒಳಗೊಂಡ ಸೌಲಭ್ಯ ಮತ್ತು ಸೇವಾ ವಿಸ್ತರಣೆಗಳನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿಯವರು ಛತ್ತೀಸ್ಗಢದ ಬಿಲಾಸ್ಪುರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಮತ್ತು ಒಡಿಶಾದ ಬರ್ಗಢ್ ನಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ಅನ್ನು ಉದ್ಘಾಟಿಸಲಿದ್ದಾರೆ.
ಪ್ರಧಾನಮಂತ್ರಿಯವರು ಮಧ್ಯಪ್ರದೇಶದ ಶಿವಪುರಿ, ರತ್ಲಾಮ್, ಖಾಂಡ್ವಾ, ರಾಜ್ ಗಢ್ ಮತ್ತು ಮಂದಸೌರ್ನಲ್ಲಿ ಐದು ನರ್ಸಿಂಗ್ ಕಾಲೇಜುಗಳ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್ (ಪಿಎಂ-ಅಭಿಮ್) ಅಡಿಯಲ್ಲಿ ಹಿಮಾಚಲ ಪ್ರದೇಶ, ಕರ್ನಾಟಕ, ಮಣಿಪುರ, ತಮಿಳುನಾಡು ಮತ್ತು ರಾಜಸ್ಥಾನದಲ್ಲಿ 21 ಕ್ರಿಟಿಕಲ್ ಕೇರ್ ಬ್ಲಾಕ್ ಗಳು ಮತ್ತು ನವದೆಹಲಿಯ ಏಮ್ಸ್ ನಲ್ಲಿ ಮತ್ತು ಹಿಮಾಚಲ ಪ್ರದೇಶದ ಬಿಲಾಸ್ ಪುರದಲ್ಲಿ ಹಲವಾರು ಸೌಲಭ್ಯಗಳು ಮತ್ತು ಸೇವಾ ವಿಸ್ತರಣೆಗಳ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.
ಪ್ರಧಾನಮಂತ್ರಿಯವರು ಮಧ್ಯಪ್ರದೇಶದ ಇಂದೋರ್ ನಲ್ಲಿ ಇಎಸ್ಐಸಿ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ ಮತ್ತು ಹರಿಯಾಣದ ಫರಿದಾಬಾದ್, ಕರ್ನಾಟಕದ ಬೊಮ್ಮಸಂದ್ರ ಮತ್ತು ನರಸಾಪುರ, ಮಧ್ಯಪ್ರದೇಶದ ಇಂದೋರ್, ಉತ್ತರ ಪ್ರದೇಶದ ಮೀರತ್ ಮತ್ತು ಆಂಧ್ರ ಪ್ರದೇಶದ ಅಚ್ಚುತಪುರಂನಲ್ಲಿ ಇಎಸ್ಐಸಿ ಆಸ್ಪತ್ರೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಸುಮಾರು 55 ಲಕ್ಷ ಇಎಸ್ಐ ಫಲಾನುಭವಿಗಳಿಗೆ ಆರೋಗ್ಯ ಸಂಬಂಧಿತ ಪ್ರಯೋಜನಗಳನ್ನು ತರಲಿವೆ.
ಪ್ರಧಾನಮಂತ್ರಿಯವರು ಎಲ್ಲಾ ಕ್ಷೇತ್ರಗಳಲ್ಲಿ ಸೇವಾ ವಿತರಣೆಯನ್ನು ಹೆಚ್ಚಿಸಲು ತಂತ್ರಜ್ಞಾನದ ಬಳಕೆಯ ವಿಸ್ತರಣೆಯ ಪ್ರಬಲ ಪ್ರತಿಪಾದಕರಾಗಿದ್ದಾರೆ. ಆರೋಗ್ಯ ಸೇವೆಯನ್ನು ಹೆಚ್ಚು ತಲುಪುವಂತೆ, ಲಭ್ಯವಾಗುವಂತೆ ಮಾಡಲು ಸೇವಾ ವಿತರಣೆಯನ್ನು ಹೆಚ್ಚಿಸಲು ಡ್ರೋನ್ ತಂತ್ರಜ್ಞಾನದ ನವೀನ ಬಳಕೆಯಲ್ಲಿ, ಪ್ರಧಾನ ಮಂತ್ರಿಯವರು 11 ತೃತೀಯ ಆರೋಗ್ಯ ಸಂಸ್ಥೆಗಳಲ್ಲಿ ಡ್ರೋನ್ ಸೇವೆಗಳನ್ನು ಪ್ರಾರಂಭಿಸಲಿದ್ದಾರೆ. ಅವುಗಳೆಂದರೆ ಉತ್ತರಾಖಂಡದ ಏಮ್ಸ್ ಋಷಿಕೇಶ್, ತೆಲಂಗಾಣದ ಏಮ್ಸ್ ಬೀಬಿನಗರ, ಅಸ್ಸಾಂನ ಏಮ್ಸ್ ಗುವಾಹಟಿ, ಮಧ್ಯಪ್ರದೇಶದ ಏಮ್ಸ್ ಭೋಪಾಲ್, ರಾಜಸ್ಥಾನದ ಏಮ್ಸ್ ಜೋಧ್ಪುರ, ಬಿಹಾರದ ಏಮ್ಸ್ ಪಾಟ್ನಾ, ಹಿಮಾಚಲ ಪ್ರದೇಶದ ಏಮ್ಸ್ ಬಿಲಾಸ್ಪುರ್, ಏಮ್ಸ್ ರಾಯಬರೇಲಿ, ಆಂಧ್ರ ಪ್ರದೇಶದ ಏಮ್ಸ್ ಮಂಗಳಗಿರಿ ಮತ್ತು ಮಣಿಪುರದ ಏಮ್ಸ್ ಇಂಫಾಲ್. ಅವರು ಏಮ್ಸ್ ರಿಷಿಕೇಶದಿಂದ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆಗಳಿಗೆ ಚಾಲನೆ ನೀಡುತ್ತಾರೆ, ಇದು ತ್ವರಿತ ವೈದ್ಯಕೀಯ ಸೇವೆಯನ್ನು ತಲುಪಿಸಲು ಸಹಾಯ ಮಾಡುತ್ತದೆ.
ಯು-ವಿನ್ ಪೋರ್ಟಲ್ ಗೆ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ. ಇದು ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡುವ ಮೂಲಕ ಗರ್ಭಿಣಿಯರು ಮತ್ತು ಶಿಶುಗಳಿಗೆ ಪ್ರಯೋಜನವನ್ನು ನೀಡುತ್ತದೆ. 12 ಲಸಿಕೆ-ತಡೆಗಟ್ಟಬಹುದಾದ ರೋಗಗಳ ವಿರುದ್ಧ ಗರ್ಭಿಣಿಯರು ಮತ್ತು ಮಕ್ಕಳಿಗೆ (ಹುಟ್ಟಿನಿಂದ 16 ವರ್ಷಗಳವರೆಗೆ) ಜೀವ ಉಳಿಸುವ ಲಸಿಕೆಗಳ ಸಮಯೋಚಿತ ವಿತರಣೆಯನ್ನು ಇದು ಖಚಿತಪಡಿಸುತ್ತದೆ. ಇದಲ್ಲದೆ, ಪ್ರಧಾನಮಂತ್ರಿಯವರು ಆರೋಗ್ಯ ವೃತ್ತಿಪರರು ಮತ್ತು ಸಂಬಂಧಪಟ್ಟ ಸಂಸ್ಥೆಗಳಿಗಾಗಿರುವ ಪೋರ್ಟಲ್ ಗೆ ಚಾಲನೆ ನೀಡುತ್ತಾರೆ. ಇದು ಅಸ್ತಿತ್ವದಲ್ಲಿರುವ ಆರೋಗ್ಯ ವೃತ್ತಿಪರರು ಮತ್ತು ಸಂಸ್ಥೆಗಳ ಕೇಂದ್ರೀಕೃತ ದತ್ತಾಂಶವಾಗಿ ಕಾರ್ಯನಿರ್ವಹಿಸುತ್ತದೆ.
ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯವನ್ನು ಪರೀಕ್ಷಿಸಲು ಅನೇಕ ಉಪಕ್ರಮಗಳಿಗೆ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ.
ಅವರು ಸಂಶೋಧನೆ ಮತ್ತು ಅಭಿವೃದ್ಧಿ ಹಾಗು ದೇಶದಲ್ಲಿ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಸುಧಾರಿಸಲು ಮೂಲಸೌಕರ್ಯವನ್ನು ಪರೀಕ್ಷಿಸಲು ಒಡಿಶಾದ ಭುವನೇಶ್ವರದ ಗೋತಪಟ್ನಾದಲ್ಲಿ ಕೇಂದ್ರೀಯ ಔಷಧ ಪರೀಕ್ಷಾ ಪ್ರಯೋಗಾಲಯವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ.
ಛತ್ತೀಸ್ ಗಢದ ರಾಯ್ ಪುರದ ಒಡಿಶಾದ ಖೋರ್ಧಾದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಎರಡು ಕೇಂದ್ರೀಯ ಸಂಶೋಧನಾ ಸಂಸ್ಥೆಗಳ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ. ವೈದ್ಯಕೀಯ ಸಾಧನಗಳಿಗಾಗಿ ಗುಜರಾತ್ ನ ಎನ್ಐಪಿಇಆರ್ ಅಹಮದಾಬಾದ್ ನಲ್ಲಿ ನಾಲ್ಕು ಶ್ರೇಷ್ಠತಾ ಕೇಂದ್ರಗಳು, ಬೃಹತ್ ಔಷಧಿಗಳಿಗಾಗಿ ತೆಲಂಗಾಣದ ಎನ್ಐಪಿಇಆರ್ ಹೈದರಾಬಾದ್, ಫೈಟೊಫಾರ್ಮಾಸ್ಯುಟಿಕಲ್ಸ್ ಗಾಗಿ ಅಸ್ಸಾಂನ ಎನ್ಐಪಿಇಆರ್ ಗುವಾಹಟಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಆಂಟಿವೈರಲ್ ಔಷಧ ಆವಿಷ್ಕಾರ ಮತ್ತು ಅಭಿವೃದ್ಧಿಗಾಗಿ ಪಂಜಾಬ್ ನ ಎನ್ಐಪಿಇಆರ್ ಮೊಹಾಲಿಯಲ್ಲಿ ನಾಲ್ಕು ಶ್ರೇಷ್ಠತಾ ಕೇಂದ್ರಗಳ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.
ಪ್ರಧಾನಮಂತ್ರಿಯವರು ನಾಲ್ಕು ಆಯುಷ್ ಸೆಂಟರ್ ಆಫ್ ಎಕ್ಸಲೆನ್ಸ್ ಗೆ ಚಾಲನೆ ನೀಡಲಿದದ್ದಾರೆ, ಅವುಗಳೆಂದರೆ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಡಯಾಬಿಟಿಸ್ ಮತ್ತು ಮೆಟಬಾಲಿಕ್ ಡಿಸಾರ್ಡರ್ಸ್ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್; ಐಐಟಿ ದೆಹಲಿಯಲ್ಲಿ ರಸೌಷಧಿಗಳಿಗೆ ಸುಧಾರಿತ ತಾಂತ್ರಿಕ ಪರಿಹಾರಗಳು, ನವೋದ್ಯಮಗಳಿಗೆ ಬೆಂಬಲ ಮತ್ತು ನಿವ್ವಳ ಶೂನ್ಯ ಸಮರ್ಥನೀಯ ಪರಿಹಾರಗಳಿಗಾಗಿ ಸಮರ್ಥನೀಯ ಆಯುಷ್ ನಲ್ಲಿ ಶ್ರೇಷ್ಠತೆಯ ಕೇಂದ್ರ; ಸೆಂಟ್ರಲ್ ಡ್ರಗ್ ರಿಸರ್ಚ್ ಇನ್ಸ್ಟಿಟ್ಯೂಟ್, ಲಕ್ನೋದಲ್ಲಿ ಆಯುರ್ವೇದದಲ್ಲಿ ಮೂಲಭೂತ ಮತ್ತು ಭಾಷಾಂತರ ಸಂಶೋಧನೆಗಾಗಿ ಶ್ರೇಷ್ಠತೆಯ ಕೇಂದ್ರ; ಮತ್ತು ಜೆ ಎನ್ ಯು , ನವದೆಹಲಿಯಲ್ಲಿ ಆಯುರ್ವೇದ ಮತ್ತು ಸಿಸ್ಟಮ್ಸ್ ಮೆಡಿಸಿನ್ ನ ಶ್ರೇಷ್ಠತೆಯ ಕೇಂದ್ರ.
ಆರೋಗ್ಯ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಪ್ರಮುಖ ಉತ್ತೇಜಕವಾಗಿ, ಪ್ರಧಾನಮಂತ್ರಿಯವರು ವೈದ್ಯಕೀಯ ಸಾಧನಗಳು ಮತ್ತು ಬೃಹತ್ ಔಷಧಿಗಳ ಉತ್ಪಾದನಾ ಸಂಬಂಧಿ ಪ್ರೋತ್ಸಾಹ (ಪಿಎಲ್ಐ) ಯೋಜನೆಯಡಿ ಗುಜರಾತಿನ ವಾಪಿ, ತೆಲಂಗಾಣದ ಹೈದರಾಬಾದ್, ಕರ್ನಾಟಕದ ಬೆಂಗಳೂರು, ಆಂಧ್ರಪ್ರದೇಶದ ಕಾಕಿನಾಡದಲ್ಲಿ ಮತ್ತು ಹಿಮಾಚಲ ಪ್ರದೇಶದ ನಲಗಢದಲ್ಲಿ ಐದು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಘಟಕಗಳು ಪ್ರಮುಖ ಬೃಹತ್ ಔಷಧಗಳ ಜೊತೆಗೆ ದೇಹದ ಇಂಪ್ಲಾಂಟ್ ಗಳು ಮತ್ತು ಕ್ರಿಟಿಕಲ್ ಕೇರ್ ಉಪಕರಣಗಳಂತಹ ಉನ್ನತ ಮಟ್ಟದ ವೈದ್ಯಕೀಯ ಸಾಧನಗಳನ್ನು ತಯಾರಿಸುತ್ತವೆ.
ನಾಗರಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ “ದೇಶ್ ಕಾ ಪ್ರಕೃತಿ ಪರೀಕ್ಷಾ ಅಭಿಯಾನ” ಎಂಬ ರಾಷ್ಟ್ರವ್ಯಾಪಿ ಅಭಿಯಾನಕ್ಕೂ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ. ಅವರು ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹವಾಮಾನ ಬದಲಾವಣೆ ಮತ್ತು ಮಾನವರ ಆರೋಗ್ಯದ ಕುರಿತು ರಾಜ್ಯ ನಿರ್ದಿಷ್ಟ ಕ್ರಿಯಾ ಯೋಜನೆಗೆ ಚಾಲನೆ ನೀಡಲಿದ್ದಾರೆ, ಇದು ಹವಾಮಾನ ಚೇತರಿಕೆ ಆರೋಗ್ಯ ಸೇವೆಗಳನ್ನು ಅಭಿವೃದ್ಧಿಪಡಿಸಲು ಸಂಬಂಧಿಸಿದ ತಂತ್ರಗಳನ್ನು ರೂಪಿಸುತ್ತದೆ.