ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಮಿತ್ವ ಯೋಜನೆಯಡಿ ಇ-ಆಸ್ತಿ ಚೀಟಿಗಳ ವಿತರಣೆಗೆ 2021 ರ ಏಪ್ರಿಲ್ 24 ರಂದು [ರಾಷ್ಟ್ರೀಯ ಪಂಚಾಯತ್ ರಾಜ್ ದಿನ] ಮಧ್ಯಾಹ್ನ 12 ಗಂಟೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
ಈ ಸಂದರ್ಭದಲ್ಲಿ 4.09 ಲಕ್ಷ ಆಸ್ತಿ ಮಾಲೀಕರಿಗೆ ಇ-ಆಸ್ತಿ ಚೀಟಿಗಳನ್ನು ವಿತರಿಸಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ದೇಶಾದ್ಯಂತ ಸ್ವಾಮಿತ್ವ ಯೋಜನೆಯ ಅನುಷ್ಠಾನಕ್ಕೆ ಚಾಲನೆ ನೀಡಲಾಗುತ್ತಿದೆ. ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
2021 ರ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಅವರು, ರಾಷ್ಟ್ರೀಯ ಪಂಚಾಯತ್ ಪುರಸ್ಕಾರ ಪ್ರದಾನ ಮಾಡಲಿದ್ದಾರೆ. 2021 ರ ರಾಷ್ಟ್ರೀಯ ಪಂಚಾಯತ್ ರಾಜ್ ಪುರಸ್ಕಾರಗಳನ್ನು ಈ ಕೆಳಕಂಡ ವಲಯಗಳಲ್ಲಿ ನೀಡಲಾಗುತ್ತಿದೆ: ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ್ ಪುರಸ್ಕಾರ್ [224 ಪಂಚಾಯತ್ ಗಳಿಗೆ]. ನೇತಾಜಿ ದೇಶ್ ಮುಖ್ ರಾಷ್ಟ್ರೀಯ ಗೌರವ್ ಗ್ರಾಮ ಸಭಾ ಪುರಸ್ಕಾರ್ [30 ಗ್ರಾಮ ಪಂಚಾಯತ್ ಗಳಿಗೆ]. ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ ಪ್ರಶಸ್ತಿ [29ಗ್ರಾಮ ಪಂಚಾಯತ್ ಗಳಿಗೆ]. ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಪ್ರಶಸ್ತಿ [30 ಗ್ರಾಮ ಪಂಚಾಯತ್ ಗಳಿಗೆ] ಮತ್ತು ಇ-ಪಂಚಾಯತ್ ಪುರಸ್ಕಾರ್ [12 ರಾಜ್ಯಗಳಿಗೆ]
ಗೌರವಾನ್ವಿತ ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ [ಅನುದಾನ ಸಹಾಯವಾಗಿ] 5 ರಿಂದ 50 ಲಕ್ಷ ರೂಪಾಯಿವರೆಗಿನ ಪ್ರಶಸ್ತಿ ಮೊತ್ತವನ್ನು ಗುಂಡಿ ಒತ್ತುವ ಮೂಲಕ ವರ್ಗಾವಣೆ ಮಾಡಲಿದ್ದಾರೆ. ಸಂಬಂಧಪಟ್ಟ ಪಂಚಾಯತ್ ಗಳ ಬ್ಯಾಂಕ್ ಖಾತೆಗಳಿಗೆ ಏಕಕಾಲಕ್ಕೆ ಪ್ರಶಸ್ತಿ ಮೊತ್ತ ವರ್ಗಾವಣೆಯಾಗಲಿದೆ. ಇದೇ ಮೊದಲ ಬಾರಿಗೆ ಇಂತಹ ವಿನೂತನ ಕ್ರಮ ಅನುಸರಿಸಲಾಗುತ್ತಿದೆ.
ಸ್ವಾಮಿತ್ವ ಯೋಜನೆ ಕುರಿತು
ಸ್ವಾಮಿತ್ವ [ಹಳ್ಳಿಗಳ ಸಮೀಕ್ಷೆ ಮತ್ತು ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಮ್ಯಾಪಿಂಗ್ ಮಾಡುವ] ಯೋಜನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2020 ರ ಏಪ್ರಿಲ್ 24 ರಂದು ಉದ್ಘಾಟನೆ ಮಾಡಿದ್ದರು. ಗ್ರಾಮೀಣ ಭಾರತದಲ್ಲಿ ಸ್ವಾವಲಂಬನೆ ಮತ್ತು ಸಾಮಾಜಿಕ – ಆರ್ಥಿಕ ಸಬಲೀಕರಣ ಉದ್ದೇಶದಿಂದ ಈ ಕೇಂದ್ರೀಯ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಆಧುನಿಕ ತಂತ್ರಜ್ಞಾನದ ಸಾಧನಗಳನ್ನು ಬಳಸಿ ಮ್ಯಾಪಿಂಗ್ ಮಾಡಿ ಮತ್ತು ಸಮೀಕ್ಷೆ ಕೈಗೊಳ್ಳುವ ಮೂಲಕ ಗ್ರಾಮೀಣ ಭಾರತದಲ್ಲಿ ಪರಿವರ್ತನೆ ತರುವ ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ. ಗ್ರಾಮೀಣ ಜನತೆ ಸಾಲ ಮತ್ತು ಇತರೆ ಹಣಕಾಸಿನ ಸವಲತ್ತುಗಳನ್ನು ಪಡೆಯಲು ಗ್ರಾಮಸ್ಥರು ಆಸ್ತಿಯನ್ನು ಆರ್ಥಿಕ ಶಕ್ತಿಯಾಗಿ ಬಳಸಲು ಇದು ದಾರಿ ಮಾಡಿಕೊಡುತ್ತದೆ. 2021-2025 ರ ಅವಧಿಯಲ್ಲಿ ದೇಶದ ಸುಮಾರು 6.62 ಲಕ್ಷ ಹಳ್ಳಿಗಳಲ್ಲಿ ಈ ಯೋಜನೆ ಜಾರಿಯಾಗಲಿದೆ.
2020 – 2021 ರ ಸಾಲಿನಲ್ಲಿ ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ ರಾಜ್ಯಗಳಲ್ಲಿ ಮತ್ತು ಪಂಜಾಬ್ ಹಾಗೂ ರಾಜಸ್ಥಾನ ರಾಜ್ಯಗಳ ಕೆಲ ಆಯ್ದ ಹಳ್ಳಿಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು.