ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ಡಿಸೆಂಬರ್ 11ರಂದು ಬೆಳಗ್ಗೆ 10.30ಕ್ಕೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ‘ವಿಕಸಿತ್ ಭಾರತ @2047: ಯುವಜನತೆಯ ಧ್ವನಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ದೇಶಾದ್ಯಂತ ರಾಜಭವನಗಳಲ್ಲಿ ಆಯೋಜಿಸಲಾಗುವ ಈ ಕಾರ್ಯಾಗಾರಗಳಲ್ಲಿ ವಿಶ್ವವಿದ್ಯಾಲಯಗಳ ಕುಲಪತಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಅಧ್ಯಾಪಕ ವರ್ಗವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ ಮಾಡಲಿದ್ದಾರೆ, ಇದು ಈ ಉಪಕ್ರಮದ ಆರಂಭವನ್ನು ಸೂಚಿಸುತ್ತದೆ.
ರಾಷ್ಟ್ರೀಯ ಯೋಜನೆಗಳು, ಆದ್ಯತೆಗಳು ಮತ್ತು ದೇಶದ ಗುರಿಗಳನ್ನು ರೂಪಿಸುವಲ್ಲಿ ದೇಶದ ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಪ್ರಧಾನ ಮಂತ್ರಿ ಅವರ ದೂರ ದೃಷ್ಟಿಯಾಗಿದೆ. ಈ ದೃಷ್ಟಿಕೋನಕ್ಕೆ ಅನುಗುಣವಾಗಿ, ‘‘ವಿಕಸಿತ ಭಾರತ @2047: ಯುವಜನತೆಯ ಧ್ವನಿ’ ಉಪಕ್ರಮವು ದೇಶದ ಯುವಕರಿಗೆ ‘ವಿಕಸಿತ ಭಾರತ @2047 ರ ದೃಷ್ಟಿಕೋನಕ್ಕೆ ಆಲೋಚನೆ, ಸಲಹೆ ಸೂಚನೆಗಳನ್ನು ನೀಡಲು ವೇದಿಕೆ ಒದಗಿಸುತ್ತದೆ. ‘ವಿಕಸಿತ ಭಾರತ @2047ಗಾಗಿ ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಯುವಕರನ್ನು ತೊಡಗಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸುವ ನಿಟ್ಟಿನಲ್ಲಿ ಕಾರ್ಯಾಗಾರಗಳು ಪ್ರಮುಖ ಹೆಜ್ಜೆಯಾಗಿರುತ್ತವೆ.
'ವಿಕಸಿತ ಭಾರತ @ 2047 ಭಾರತವನ್ನು ಸ್ವಾತಂತ್ರ್ಯದ 100ನೇ ವರ್ಷವಾದ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ದೃಷ್ಟಿಕೋನವಾಗಿದೆ. ದೃಷ್ಟಿಕೋನವು ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ, ಪರಿಸರ ಸುಸ್ಥಿರತೆ ಮತ್ತು ಉತ್ತಮ ಆಡಳಿತ ಸೇರಿದಂತೆ ಅಭಿವೃದ್ಧಿಯ ವಿವಿಧ ಅಂಶಗಳನ್ನು ಒಳಗೊಂಡಿರುತ್ತದೆ.