ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟೋಕಿಯೋ ಒಲಿಂಪಿಕ್ಸ್ ಗೆ ತೆರಳಲಿರುವ ಭಾರತೀಯ ಅಥ್ಲೀಟ್ ಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಜುಲೈ 13ರಂದು ಸಂಜೆ 5 ಗಂಟೆಗೆ ಸಂವಾದ ನಡೆಸಲಿದ್ದಾರೆ.
ಕ್ರೀಡಾಕೂಟಕ್ಕೂ ಮುನ್ನ ಅದರಲ್ಲಿ ಪಾಲ್ಗೊಳ್ಳುತ್ತಿರುವ ಅಥ್ಲೀಟ್ ಗಳಿಗೆ ಉತ್ತೇಜನ ನೀಡುವುದು ಪ್ರಧಾನಮಂತ್ರಿಯವರ ಸಂವಾದದ ಉದ್ದೇಶವಾಗಿದೆ. ಟೋಕಿಯೊ - 2020ರಲ್ಲಿ ಭಾರತದ ತಂಡದ ಅನುಕೂಲ ಕುರಿತ ಸಿದ್ಧತೆಗಳನ್ನು ಅವರು ಇತ್ತೀಚೆಗೆ ಪರಿಶೀಲಿಸಿದ್ದರು. ಮನ್ ಕಿ ಬಾತ್ ನಲ್ಲಿ ಅವರು ಕೆಲವು ಕ್ರೀಡಾಪಟುಗಳ ಸ್ಫೂರ್ತಿದಾಯಕ ಪಯಣದ ಬಗ್ಗೆಯೂ ಚರ್ಚಿಸಿದ್ದರು, ಜೊತೆಗೆ ರಾಷ್ಟ್ರದ ಜನರು ಮುಂದೆ ಬಂದು ಅವರನ್ನು ಹೃತ್ಪೂರ್ವಕವಾಗಿ ಬೆಂಬಲಿಸುವಂತೆ ಮನವಿ ಮಾಡಿದ್ದರು.
ನಾಳೆ ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವರು ಮತ್ತು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಪಾಲ್ಗೊಳ್ಳುವರು.
ಭಾರತದ ತಂಡದ ಬಗ್ಗೆ
ಭಾರತದಿಂದ 18 ಕ್ರೀಡಾ ವಿಭಾಗಗಳಲ್ಲಿ ಒಟ್ಟು 126 ಕ್ರೀಡಾಪಟುಗಳು ಟೋಕಿಯೊಗೆ ತೆರಳಲಿದ್ದಾರೆ. ಯಾವುದೇ ಒಲಿಂಪಿಕ್ಸ್ ಗೆ ಭಾರತ ಕಳುಹಿಸುತ್ತಿರುವ ಅತಿದೊಡ್ಡ ತಂಡ ಇದಾಗಿದೆ. ಭಾರತ 18 ಕ್ರೀಡಾ ವಿಭಾಗಗಳಲ್ಲಿ ಒಟ್ಟು 69 ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದು, ಇದು ಈವರೆಗಿನ ಅತಿ ಹೆಚ್ಚು ಸಂಖ್ಯೆಯಾಗಿದೆ.
ಪಾಲ್ಗೊಳ್ಳುವಿಕೆಯ ವಿಚಾರದಲ್ಲಿ ಹಲವಾರು ಗಮನಾರ್ಹ ಪ್ರಥಮಗಳಿವೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದಿಂದ ಫೆನ್ಸರ್ (ಭವಾನಿ ದೇವಿ) ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ. ನೇತ್ರಾ ಕುಮನನ್ ಅವರು ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ನಾವೆ ಸ್ಪರ್ಧಾಳುವಾಗಿದ್ದಾರೆ. ಸಾಜನ್ ಪ್ರಕಾಶ್ ಮತ್ತು ಶ್ರೀಹರಿ ನಟರಾಜ್ ಈಜುಸ್ಪರ್ಧೆಯಲ್ಲಿ ‘ಎ’ ಅರ್ಹತಾ ಮಾನದಂಡವನ್ನು ಸಾಧಿಸುವ ಮೂಲಕ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಈಜುಪಟುಗಳಾಗಿದ್ದಾರೆ