ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 27ರಂದು ಬೆಳಿಗ್ಗೆ 10.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉತ್ತರಪ್ರದೇಶದ ಪಿಎಂ-ಸ್ವನಿಧಿ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿಗಳೂ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ತುತ್ತಾಗಿರುವ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಚಟುವಟಿಕೆಗಳನ್ನು ಪುನಾರಂಭಿಸಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪ್ರಧಾನಮಂತ್ರಿಗಳ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ (ಪಿಎಂ ಸ್ವನಿಧಿ) ಯೋಜನೆಯನ್ನು 2020ರ ಜೂನ್ 1ರಂದು ಆರಂಭಿಸಲಾಯಿತು. ಈವರೆಗೆ ಯೋಜನೆಯಡಿ ಒಟ್ಟು 24 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಮತ್ತು 12 ಲಕ್ಷಕ್ಕೂ ಅಧಿಕ ಅರ್ಜಿಗಳ ಸಾಲವನ್ನು ಅನುಮೋದಿಸಲಾಗಿದೆ ಮತ್ತು 5.35 ಲಕ್ಷ ಸಾಲಗಳನ್ನು ಈಗಾಗಲೇ ವಿತರಿಸಲಾಗಿದೆ. ಉತ್ತರ ಪ್ರದೇಶ ರಾಜ್ಯವೊಂದರಲ್ಲೇ 6 ಲಕ್ಷಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳು ಅರ್ಜಿ ಸಲ್ಲಿಸಿದ್ದು, ಆ ಪೈಕಿ 3.27 ಲಕ್ಷ ಅರ್ಜಿಗಳಲ್ಲಿ ಸಾಲ ಅನುಮೋದಿಸಲಾಗಿದೆ ಮತ್ತು 1.87 ಲಕ್ಷ ಸಾಲಗಳನ್ನು ವಿತರಣೆ ಮಾಡಲಾಗಿದೆ.
ಉತ್ತರ ಪ್ರದೇಶ ರಾಜ್ಯಾದ್ಯಂತ ಎಲ್ಲ ಫಲಾನುಭವಿಗಳು ಸಂವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಆ ಸಂವಾದ ಕಾರ್ಯಕ್ರವವನ್ನು ಡಿಡಿ ನ್ಯೂಸ್ ನೇರ ಪ್ರಸಾರ ಮಾಡಲಿದೆ.