ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಜೂನ್ 23 ರಂದು ಬೆಳಗ್ಗೆ 10:30 ಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಹೊಸ ಆವರಣವಾದ 'ವಾಣಿಜ್ಯ ಭವನ'ವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ಅವರು ಎನ್ಐಆರ್ ವೈಎಟಿ (ವ್ಯಾಪಾರದ ವಾರ್ಷಿಕ ವಿಶ್ಲೇಷಣೆಗಾಗಿ ರಾಷ್ಟ್ರೀಯ ಆಮದು-ರಫ್ತು ದಾಖಲೆ) ಎಂಬ ಹೊಸ ಪೋರ್ಟಲ್ ಅನ್ನು ಸಹ ಉದ್ಘಾಟಿಸಲಿದ್ದಾರೆ- ಇದು ಭಾರತದ ವಿದೇಶಿ ವ್ಯಾಪಾರಕ್ಕೆ ಸಂಬಂಧಿಸಿದ ಎಲ್ಲಾ ಅಗತ್ಯ ಮಾಹಿತಿಯನ್ನು ಪಡೆಯಲು ಮಧ್ಯಸ್ಥಗಾರರಿಗೆ ಹಲವು ಸೇವೆಗಳು ಒಂದೇ ಕಡೆ ಸಿಗುವಂತೆ ಅಭಿವೃದ್ಧಿಪಡಿಸಲಾಗಿದೆ. ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಇಂಡಿಯಾ ಗೇಟ್ ಬಳಿ ನಿರ್ಮಿಸಲಾದ ವಾಣಿಜ್ಯ ಭವನವನ್ನು ಒಂದು ಸ್ಮಾರ್ಟ್ ಕಟ್ಟಡವಾಗಿ ವಿನ್ಯಾಸಗೊಳಿಸಲಾಗಿದೆ, ಇದು ಇಂಧನ ಉಳಿತಾಯದ ಮೇಲೆ ವಿಶೇಷ ಗಮನ ಕೇಂದ್ರೀಕರಿಸಿ ಸುಸ್ಥಿರ ವಾಸ್ತುಶಿಲ್ಪದ ತತ್ವಗಳನ್ನು ಒಳಗೊಂಡಿದೆ. ಇದು ಸಮಗ್ರ ಮತ್ತು ಆಧುನಿಕ ಕಚೇರಿ ಸಂಕೀರ್ಣವಾಗಿ ಕಾರ್ಯನಿರ್ವಹಿಸುತ್ತದೆ, ಇದನ್ನು ಸಚಿವಾಲಯದ ಅಡಿಯಲ್ಲಿ ಬರುವ ಎರಡು ಇಲಾಖೆಗಳು ಅಂದರೆ ವಾಣಿಜ್ಯ ಇಲಾಖೆ ಹಾಗು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಬಳಸುತ್ತವೆ.