ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಮೇ 11ರಂದು ಬೆಳಗ್ಗೆ 10.30ಕ್ಕೆ ಪ್ರಗತಿ ಮೈದಾನದಲ್ಲಿ `ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ-2023’ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮವು ಮೇ 11 ರಿಂದ 14 ರವರೆಗೆ ನಡೆಯಲಿರುವ `ರಾಷ್ಟ್ರೀಯ ತಂತ್ರಜ್ಞಾನ ದಿನ’ದ 25ನೇ ವರ್ಷಾಚರಣೆಯ ಪ್ರಾರಂಭವನ್ನು ಸೂಚಿಸುತ್ತದೆ. \
ಪ್ರಮುಖ ವೈಜ್ಞಾನಿಕ ಯೋಜನೆಗಳು
ಈ ಮಹತ್ವದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದೇಶದಲ್ಲಿ 5800 ಕೋಟಿ ರೂ.ಗೂ ಅಧಿಕ ಮೌಲ್ಯದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ / ಲೋಕಾರ್ಪಣೆ ನೆರವೇರಿಸಲಿದ್ದಾರೆ. ಇದು ದೇಶದಲ್ಲಿ ವೈಜ್ಞಾನಿಕ ಸಂಸ್ಥೆಗಳನ್ನು ಬಲಪಡಿಸುವ ಮೂಲಕ ಪ್ರಧಾನಮಂತ್ರಿಯವರ ʻಆತ್ಮನಿರ್ಭರ ಭಾರತʼದ ಆಶಯಕ್ಕೆ ಅನುಗುಣವಾಗಿದೆ.
ಶಂಕು ಸ್ಥಾಪನೆ ನೆರವೇರಿಸಲಿರುವ ಯೋಜನೆಗಳಲ್ಲಿ ಹಿಂಗೋಲಿಯಲ್ಲಿ ʻಲೇಸರ್ ಇಂಟರ್ಫೆರೋಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್ವೇಟರಿ – ಇಂಡಿಯಾʼ (ಎಲ್ಐಜಿಒ-ಇಂಡಿಯಾ); ಒಡಿಶಾದ ಜಟ್ಟಿಯಲ್ಲಿ ʻಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರʼ; ಮತ್ತು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಪ್ಲಾಟಿನಂ ಜುಬಿಲಿ ಬ್ಲಾಕ್ ಸೇರಿವೆ.
ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಅಭಿವೃದ್ಧಿಪಡಿಸಲಾಗುವ ʻಎಲ್‌ಐಜಿಒ-ಇಂಡಿಯಾʼ ವಿಶ್ವದ ಬೆರಳೆಣಿಕೆಯಷ್ಟು ಲೇಸರ್ ಇಂಟರ್ಫೆರೋಮೀಟರ್ ಗುರುತ್ವಾಕರ್ಷಣ ತರಂಗ ವೀಕ್ಷಣಾಲಯಗಳಲ್ಲಿ ಒಂದಾಗಿದೆ. ಇದು ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳಂತಹ ಬೃಹತ್ ಖಗೋಳಭೌತಿಕ ವಸ್ತುಗಳ ವಿಲೀನದ ಸಮಯದಲ್ಲಿ ಉತ್ಪತ್ತಿಯಾಗುವ ಗುರುತ್ವಾಕರ್ಷಣೆಯ ಅಲೆಗಳನ್ನು ಗ್ರಹಿಸುವಂತಹ ಸಾಮರ್ಥ್ಯವುಳ್ಳ 4 ಕಿ.ಮೀ ಉದ್ದದ ಅತ್ಯಂತ ಸೂಕ್ಷ್ಮ ಇಂಟರ್ಫೆರೋಮೀಟರ್ ಆಗಿದೆ. ʻಎಲ್‌ಐಜಿಒ-ಇಂಡಿಯಾʼ, ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತಹ ಎರಡು ವೀಕ್ಷಣಾಲಯಗಳೊಂದಿಗೆ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ಅಮೆರಿಕದ ವಾಷಿಂಗ್ಟನ್‌ನ ʻಹ್ಯಾನ್ ಫೋರ್ಡ್ʼ ಮತ್ತು ಲೂಯಿಸಿಯಾನದ ʻಲಿವಿಂಗ್‌ಸ್ಟನ್ʼನಲ್ಲಿ ಇಂತಹ ವೀಕ್ಷಣಾಲಯಗಳಿವೆ.
ರಾಷ್ಟ್ರಕ್ಕೆ ಸಮರ್ಪಿಸಲಿರುವ ಯೋಜನೆಗಳಲ್ಲಿ ಮುಂಬೈನ ʻಫಿಶನ್ ಮಾಲಿಬ್ಡಿನಮ್ -99 ಉತ್ಪಾದನಾ ಘಟಕʼ; ವಿಶಾಖಪಟ್ಟಣಂನ ʻರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ ಪ್ಲಾಂಟ್; ನವೀ ಮುಂಬೈನಲ್ಲಿ ʻನ್ಯಾಷನಲ್ ಹ್ಯಾಡ್ರಾನ್ ಬೀಮ್ ಥೆರಪಿ ಘಟಕʼ; ನವೀ ಮುಂಬೈನ ʻರೇಡಿಯೋಲಾಜಿಕಲ್ ಸಂಶೋಧನಾ ಕೇಂದ್ರ; ವಿಶಾಖಪಟ್ಟಣಂನ ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ,; ಮತ್ತು ನವೀ ಮುಂಬೈನ ಮಹಿಳಾ ಮತ್ತು ಮಕ್ಕಳ ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ಸೇರಿವೆ.
ʻರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ಸ್ʼ(ಅಪರೂಪದ ಶಾಶ್ವತ ಭೂ ಕಾಂತಗಳು) ಅನ್ನು ಪ್ರಾಥಮಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಉತ್ಪಾದಿಸಲಾಗುತ್ತದೆ. ವಿಶಾಖಪಟ್ಟಣಂನ ಭಾಭಾ ಪರಮಾಣು ಸಂಶೋಧನಾ ಕೇಂದ್ರದ ಆವರಣದಲ್ಲಿ ʻಅಪರೂಪದ ಶಾಶ್ವತ ಭೂಮಿಯ ಕಾಂತಗಳ ಉತ್ಪಾದನೆ ಘಟಕʼವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಘಟಕವನ್ನು ಸ್ಥಳೀಯ ತಂತ್ರಜ್ಞಾನದ ಆಧಾರದ ಮೇಲೆ ಮತ್ತು ಸ್ಥಳೀಯ ಸಂಪನ್ಮೂಲಗಳಿಂದ ಹೊರತೆಗೆದ ಅಪರೂಪದ ಸ್ಥಳೀಯ ಭೂಮಿಯ ವಸ್ತುಗಳನ್ನು ಬಳಸಿಕೊಂಡು ಸ್ಥಾಪಿಸಲಾಗಿದೆ. ಇದರ ಸ್ಥಾಪನೆಯೊಂದಿಗೆ, ಅಪರೂಪದ ಭೂಮಿಯ ಶಾಶ್ವತ ಕಾಂತಗಳನ್ನು ಉತ್ಪಾದಿಸುವಂತಹ ಸಾಮರ್ಥ್ಯವುಳ್ಳ ಹೊಂದಿರುವ ಆಯ್ದ ರಾಷ್ಟ್ರಗಳ ಗುಂಪಿಗೆ ಭಾರತ ಸೇರಲಿದೆ.
ನವೀ ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್ನ ನ್ಯಾಷನಲ್ ಹ್ಯಾಡ್ರಾನ್ ಬೀಮ್ ಥೆರಪಿ ಘಟಕವು ಅತ್ಯಾಧುನಿಕ ಸೌಲಭ್ಯವಾಗಿದ್ದು, ಇದು ಕ್ಯಾನ್ಸರ್ ಇರುವ ಪ್ರದೇಶದಲ್ಲಿ, ಸುತ್ತಮುತ್ತಲಿನ ಸಾಮಾನ್ಯ ದೇಹ ರಚನೆಗಳಿಗೆ ಹೆಚ್ಚು ಹಾನಿಯಾಗದಂತೆ ಕ್ಯಾನ್ಸರ್ ಗೆಡ್ಡೆಗೆ ಹೆಚ್ಚು ನಿಖರವಾಗಿ ವಿಕಿರಣವನ್ನು ತಲುಪಿಸಲು ನೆರವಾಗುತ್ತದೆ. ಉದ್ದೇಶಿತ ಅಂಗಾಂಶಗಳಿಗೆ ನಿಖರವಾದ ಡೋಸ್‌ನ ವಿತರಣೆಯಿಂದ ವಿಕಿರಣ ಚಿಕಿತ್ಸೆಯ ಆರಂಭಿಕ ಮತ್ತು ವಿಳಂಬವಾದ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.
ʻಫಿಸಿಯನ್ ಮಾಲಿಬ್ಡಿನಮ್ -99ʼ ಉತ್ಪಾದನಾ ಘಟಕವು ಭಾಭಾ ಪರಮಾಣು ಸಂಶೋಧನಾ ಕೇಂದ್ರದ ಟ್ರಾಂಬೆ ಕ್ಯಾಂಪಸ್‌ನಲ್ಲಿದೆ. ʻಮೊಲಿಬ್ಡಿನಮ್ -99ʼ - ಇದು ʻಟೆಕ್ನೆಟಿಯಮ್ -99ಎಂʼನ ಪೋಷಕವಾಗಿದೆ. ಇದನ್ನು ಕ್ಯಾನ್ಸರ್, ಹೃದ್ರೋಗ ಇತ್ಯಾದಿಗಳನ್ನು ಮುಂಚಿತವಾಗಿ ಪತ್ತೆಹಚ್ಚಲು 85% ಕ್ಕೂ ಹೆಚ್ಚು ಇಮೇಜಿಂಗ್ ಕಾರ್ಯವಿಧಾನಗಳಲ್ಲಿ ಬಳಸಲಾಗುತ್ತದೆ. ಈ ಘಟಕವು ವರ್ಷಕ್ಕೆ ಸುಮಾರು 9ರಿಂದ 10 ಲಕ್ಷ ರೋಗಿಗಳ ಸ್ಕ್ಯಾನ್‌ಗಳನ್ನು ಸಕ್ರಿಯಗೊಳಿಸುವ ನಿರೀಕ್ಷೆಯಿದೆ.
ಹಲವಾರು ಕ್ಯಾನ್ಸರ್ ಆಸ್ಪತ್ರೆಗಳು ಮತ್ತು ಸೌಲಭ್ಯಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆಯು ದೇಶದ ವಿವಿಧ ಪ್ರದೇಶಗಳಲ್ಲಿ ವಿಶ್ವದರ್ಜೆಯ ಕ್ಯಾನ್ಸರ್ ಆರೈಕೆಯನ್ನು ಹೆಚ್ಚಿಸಲು ಮತ್ತು ವಿಕೇಂದ್ರೀಕರಣಗೊಳಿಸಲು ನೆರವಾಗಲಿದೆ.
ಅಟಲ್ ಇನ್ನೋವೇಶನ್ ಮಿಷನ್ ಮತ್ತು ಇತರ ಅಂಶಗಳು
2023ರ ʻರಾಷ್ಟ್ರೀಯ ತಂತ್ರಜ್ಞಾನ ದಿನʼವನ್ನು ಗುರುತಿಸುವ ಕಾರ್ಯಕ್ರಮ ಮತ್ತು ಆಚರಣೆಗಳು ʻಅಟಲ್ ಇನ್ನೋವೇಶನ್ ಮಿಷನ್ʼ(ಎಐಎಂ) ಮೇಲೆ ವಿಶೇಷ ಗಮನವನ್ನು ಕೇಂದ್ರೀಕರಿಸಿವೆ. ಈ ವರ್ಷದ ʻರಾಷ್ಟ್ರೀಯ ತಂತ್ರಜ್ಞಾನ ದಿನʼದ ಥೀಮ್ ಅನ್ನು ಎತ್ತಿ ತೋರಿಸುವ ʻಎಐಎಂ ಪೆವಿಲಿಯನ್ʼ, ಅನೇಕ ನವೀನ ಯೋಜನೆಗಳನ್ನು ಪ್ರದರ್ಶಿಸುತ್ತದೆ ಮತ್ತು ಸಂದರ್ಶಕರಿಗೆ ಲೈವ್ ಟಿಂಕರಿಂಗ್ ಸೆಷನ್‌ಗಳಿಗೆ ಸಾಕ್ಷಿಯಾಗಲು, ಟಿಂಕರಿಂಗ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು, ನವೋದ್ಯಮಗಳ ಅತ್ಯುತ್ತಮ ಆವಿಷ್ಕಾರಗಳು ಮತ್ತು ಉತ್ಪನ್ನಗಳಿಗೆ ಸಾಕ್ಷಿಯಾಗಲು ಅವಕಾಶವನ್ನು ಒದಗಿಸುತ್ತದೆ. ಎಆರ್ / ವಿಆರ್, ರಕ್ಷಣಾ ತಂತ್ರಜ್ಞಾನ, ʻಡಿಜಿ ಯಾತ್ರಾʼ, ಜವಳಿ ಮತ್ತು ಜೀವ ವಿಜ್ಞಾನ ಇತ್ಯಾದಿಗಳಂತಹ ವೈವಿಧ್ಯಮಯ ತೊಡಗಿಕೊಳ್ಳುವಿಕೆ ವಲಯಗಳು ಸೇರಿವೆ.
ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿಯವರು, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮಾಡಲಾದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಳನ್ನು ಪ್ರದರ್ಶಿಸುವ ಮೇಳವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಸಹ ಬಿಡುಗಡೆ ಮಾಡಲಿದ್ದಾರೆ.
ಭಾರತದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಾಗಿ ಕೆಲಸ ಮಾಡಿದ ಹಾಗೂ ಮೇ 1998 ರಲ್ಲಿ ಪೋಖ್ರಾನ್ ಪರೀಕ್ಷೆ ಯಶಸ್ವಿಯನ್ನು ಖಾತರಿಪಡಿಸಿದ ಭಾರತೀಯ ವಿಜ್ಞಾನಿಗಳು, ಎಂಜಿನಿಯರ್‌ಗಳು ಹಾಗೂ ತಂತ್ರಜ್ಞರನ್ನು ಗೌರವಿಸಲು ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು 1999ರಲ್ಲಿ ʻರಾಷ್ಟ್ರೀಯ ತಂತ್ರಜ್ಞಾನ ದಿನʼ ಆಚರಣೆ ಪ್ರಾರಂಭಿಸಿದರು. ಅಂದಿನಿಂದ, ಪ್ರತಿವರ್ಷ ಮೇ 11 ರಂದು ʻರಾಷ್ಟ್ರೀಯ ತಂತ್ರಜ್ಞಾನ ದಿನʼವನ್ನು ಆಚರಿಸಲಾಗುತ್ತದೆ. ಇದನ್ನು ಪ್ರತಿವರ್ಷ ಹೊಸ ಮತ್ತು ವಿಭಿನ್ನ ಥೀಮ್ ನೊಂದಿಗೆ ಆಚರಿಸಲಾಗುತ್ತದೆ. ಈ ವರ್ಷದ ಥೀಮ್: 'ಶಾಲೆಯಿಂದ ನವೋದ್ಯಮ- ಯುವ ಮನಸ್ಸುಗಳನ್ನು ಅನ್ವೇಷಣೆಗೆ ಪ್ರೇರೇಪಿಸುವುದುʼ