ನವದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ(ಎನ್ಎಎಸ್ಸಿ) ಸಂಕೀರ್ಣದಲ್ಲಿ 2024 ಆಗಸ್ಟ್ 3ರಂದು ಬೆಳಗ್ಗೆ 9.30ಕ್ಕೆ ಆಯೋಜಿತವಾಗಿರುವ 32ನೇ ಅಂತಾರಾಷ್ಟ್ರೀಯ ಕೃಷಿ ಅರ್ಥಶಾಸ್ತ್ರಜ್ಞರ ಸಮ್ಮೇಳನ(ಐಸಿಎಇ)ವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
ಅಂತಾರಾಷ್ಟ್ರೀಯ ಕೃಷಿ ಅರ್ಥಶಾಸ್ತ್ರಜ್ಞರ ಸಮ್ಮೇಳನ ಆಯೋಜಿಸಿರುವ ತ್ರೈವಾರ್ಷಿಕ ಸಮ್ಮೇಳನವು 2024 ಆಗಸ್ಟ್ 2ರಿಂದ 7ರ ತನಕ ನಡೆಯಲಿದೆ. ಈ ಸಮ್ಮೇಳನವನ್ನು 65 ವರ್ಷಗಳ ಸುದೀರ್ಘ ಕಾಲದ ನಂತರ ಭಾರತದಲ್ಲಿ ನಡೆಸಲಾಗುತ್ತಿದೆ.
"ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆಗಳ ಕಡೆಗೆ ಪರಿವರ್ತನೆ" ಎಂಬುದು ಈ ವರ್ಷದ ಸಮ್ಮೇಳನದ ನಿರೂಪಣಾ ವಿಷಯ(ಥೀಮ್)ವಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಅವನತಿ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಮತ್ತು ಸಂಘರ್ಷಗಳಂತಹ ಜಾಗತಿಕ ಸವಾಲುಗಳ ಮುಖಾಂತರ ಸುಸ್ಥಿರ ಕೃಷಿಯ ಅಗತ್ಯವನ್ನು ನಿಭಾಯಿಸುವ ಗುರಿಯನ್ನು ಈ ಸಮ್ಮೇಳನ ಹೊಂದಿದೆ. ಜಾಗತಿಕ ಕೃಷಿ ಸವಾಲುಗಳಿಗೆ ಭಾರತ ಹೊಂದಿರುವ ಪೂರ್ವಭಾವಿ ಕಾರ್ಯವಿಧಾನಗಳ ಬಗ್ಗೆ ಸಮ್ಮೇಳನವು ಬೆಳಕು ಚೆಲ್ಲಲಿದೆ. ಅಲ್ಲದೆ, ಕೃಷಿ ಸಂಶೋಧನೆ ಮತ್ತು ನೀತಿಯಲ್ಲಿ ಭಾರತದ ಪ್ರಗತಿಯನ್ನು ಪ್ರದರ್ಶಿಸಲಿದೆ.
ಕೃಷಿ ವಲಯದ ಯುವ ಸಂಶೋಧಕರು ಮತ್ತು ಪ್ರಮುಖ ವೃತ್ತಿಪರರು ತಮ್ಮ ಕೆಲಸ ಮತ್ತು ಸಂಪರ್ಕ ಜಾಲವನ್ನು ಜಾಗತಿಕ ಗೆಳೆಯರೊಂದಿಗೆ ಪ್ರಸ್ತುತಪಡಿಸಲು ಐಸಿಎಇ-2024 ಸ್ಪಷ್ಟ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ. ಇದು ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ನಡುವಿನ ಪಾಲುದಾರಿಕೆ ಬಲಪಡಿಸುವ ಗುರಿ ಹೊಂದಿದೆ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ನೀತಿ ರಚನೆಯ ಮೇಲೆ ಪ್ರಭಾವ ಬೀರಲಿದೆ. ಡಿಜಿಟಲ್ ಕೃಷಿ ಮತ್ತು ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆಗಳಲ್ಲಿನ ಪ್ರಗತಿ ಸೇರಿದಂತೆ ಭಾರತದ ಕೃಷಿ ಪ್ರಗತಿಯನ್ನು ಪ್ರದರ್ಶಿಸಲಿದೆ. ಸುಮಾರು 75 ದೇಶಗಳಿಂದ ಸುಮಾರು 1,000 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.