ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿರುವ ಸಾಯಿ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ ಅನ್ನು ಜುಲೈ 4 ರಂದು ಬೆಳಗ್ಗೆ 10:30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಪ್ರಪಂಚದಾದ್ಯಂತದ ಪ್ರಮುಖ ಗಣ್ಯರು ಮತ್ತು ಭಕ್ತರು ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಶ್ರೀ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಪುಟ್ಟಪರ್ತಿಯ ಪ್ರಶಾಂತಿ ನಿಲಯದಲ್ಲಿ ಸಾಯಿ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ ನಿರ್ಮಿಸಿದೆ. ಪ್ರಶಾಂತಿ ನಿಲಯವು ಶ್ರೀ ಸತ್ಯಸಾಯಿ ಬಾಬಾರವರ ಮುಖ್ಯ ಆಶ್ರಮವಾಗಿದೆ.
ಸಮಾಜ ಸೇವಕರು, ದಾನಿಗಳು ಆಗಿರುವ ಶ್ರೀ ರೈಕೂ ಹಿರಾ ಅವರ ಕೊಡುಗೆ ಇದಾಗಿದೆ. ಈ ಕನ್ವೆನ್ಷನ್ ಸೆಂಟರ್, ಸಾಂಸ್ಕೃತಿಕ ವಿನಿಮಯ, ಆಧ್ಯಾತ್ಮಿಕತೆ ಮತ್ತು ಜಾಗತಿಕ ಸಾಮರಸ್ಯವನ್ನು ಉತ್ತೇಜಿಸಲಿದೆ. ಶ್ರೀ ಸತ್ಯಸಾಯಿ ಬಾಬಾರವರ ಬೋಧನೆಗಳನ್ನು ಸಮ್ಮಿಳಿತಗೊಳಿಸಲು, ಸಂವಹನಗೊಳಿಸಲು ಮತ್ತು ಅನ್ವೇಷಿಸಲು ವೈವಿಧ್ಯಮಯ ಹಿನ್ನೆಲೆಯ ಜನರಿಗೆ ಇದು ಸೂಕ್ತ ವಾತಾವರಣವನ್ನು ಕಲ್ಪಿಸುತ್ತದೆ. ಇದರ ವಿಶ್ವ ದರ್ಜೆಯ ಮಟ್ಟದ ಮೂಲಸೌಕರ್ಯ ಹೊಂದಿದೆ. ಸಮ್ಮೇಳನಗಳು, ಸೆಮಿನಾರ್ಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು, ಎಲ್ಲಾ ವರ್ಗಗಳ ವ್ಯಕ್ತಿಗಳ ನಡುವೆ ಸಂವಾದ ಮತ್ತು ತಿಳಿವಳಿಕೆ ಹೊಂದಲು ವ್ಯವಸ್ಥೆ ಹೊಂದಿದೆ. ವಿಸ್ತಾರವಾದ ಸಂಕೀರ್ಣವು ಧ್ಯಾನ ಮಂದಿರಗಳು, ಪ್ರಶಾಂತ ಉದ್ಯಾನವನಗಳು ಮತ್ತು ವಸತಿ ಸೌಕರ್ಯಗಳನ್ನು ಒಳಗೊಂಡಿದೆ.