ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 17 ರಂದು ಬೆಳಿಗ್ಗೆ 11:30 ಗಂಟೆಗೆ ಹೊಸದಿಲ್ಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಎರಡು ದಿನಗಳ "ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ 2022" ಅನ್ನು ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮವು ದೇಶಾದ್ಯಂತದ 13,500 ಕ್ಕೂ ಹೆಚ್ಚು ರೈತರು ಮತ್ತು ಸುಮಾರು 1500 ಕೃಷಿ ನವೋದ್ಯಮಗಳನ್ನು ಒಗ್ಗೂಡಿಸುತ್ತದೆ. ವಿವಿಧ ಸಂಸ್ಥೆಗಳಿಂದ 1 ಕೋಟಿಗೂ ಹೆಚ್ಚು ರೈತರು ಈ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸುವ ನಿರೀಕ್ಷೆಯಿದೆ. ಈ ಸಮ್ಮೇಳನದಲ್ಲಿ ಸಂಶೋಧಕರು, ನೀತಿ ನಿರೂಪಕರು ಮತ್ತು ಇತರ ಭಾಗೀದಾರರು ಭಾಗವಹಿಸಲಿದ್ದಾರೆ.
ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಬರುವ 600 ಪ್ರದಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು (ಪಿ.ಎಂ.ಕೆ.ಎಸ್.ಕೆ.) ಪ್ರಧಾನ ಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ಈ ಯೋಜನೆಯಡಿ, ದೇಶದ ರಸಗೊಬ್ಬರ ಚಿಲ್ಲರೆ ಮಾರಾಟ ಅಂಗಡಿಗಳನ್ನು ಹಂತ ಹಂತವಾಗಿ ಪಿಎಂಕೆಎಸ್ ಕೆಯಾಗಿ ಪರಿವರ್ತಿಸಲಾಗುವುದು. ಪಿ.ಎಂ.ಕೆ.ಎಸ್.ಕೆ. ರೈತರ ವಿವಿಧ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಕೃಷಿ-ಒಳಹರಿವುಗಳನ್ನು (ರಸಗೊಬ್ಬರಗಳು, ಬೀಜಗಳು, ಸಲಕರಣೆಗಳು) ಒದಗಿಸುತ್ತದೆ; ಮಣ್ಣು ಪರೀಕ್ಷೆ ಸೌಲಭ್ಯ, ಬೀಜಗಳು, ರಸಗೊಬ್ಬರಗಳಿಗಾಗಿ ಸೌಲಭ್ಯಗಳು; ರೈತರಲ್ಲಿ ಜಾಗೃತಿ ಮೂಡಿಸುವುದು; ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸುವುದು ಮತ್ತು ಬ್ಲಾಕ್/ ಜಿಲ್ಲಾ ಮಟ್ಟದ ಔಟ್ ಲೆಟ್ ಗಳಲ್ಲಿ ಚಿಲ್ಲರೆ ವ್ಯಾಪಾರಿಗಳ ನಿಯಮಿತ ಸಾಮರ್ಥ್ಯ ವರ್ಧನೆಯನ್ನು ಖಚಿತಪಡಿಸಿಕೊಳ್ಳುವುದು ಇದರಲ್ಲಿ ಸೇರಿದೆ. 3.3 ಲಕ್ಷಕ್ಕೂ ಹೆಚ್ಚು ಚಿಲ್ಲರೆ ರಸಗೊಬ್ಬರ ಮಾರಾಟ ಅಂಗಡಿಗಳನ್ನು ಪಿಎಂಕೆಎಸ್ ಕೆ ಆಗಿ ಪರಿವರ್ತಿಸಲು ಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಭಾರತೀಯ ಜನ್ ಉರ್ವಾರಕ್ ಪರಿಯೋಜನ - ಒಂದು ರಾಷ್ಟ್ರ ಒಂದು ರಸಗೊಬ್ಬರ ಯೋಜನೆಯನ್ನು ಕಾರ್ಯಾರಂಭ ಮಾಡಲಿದ್ದಾರೆ. ಈ ಯೋಜನೆಯಡಿ, ಪ್ರಧಾನಮಂತ್ರಿಯವರು ಭಾರತ್ ಯೂರಿಯಾ ಬ್ಯಾಗ್ ಗಳಿಗೆ ಚಾಲನೆ ನೀಡಲಿದ್ದು, ಇದು "ಭಾರತ್" ಎಂಬ ಏಕ ಬ್ರಾಂಡ್ ಹೆಸರಿನಲ್ಲಿ ರಸಗೊಬ್ಬರಗಳನ್ನು ಮಾರಾಟ ಮಾಡಲು ಕಂಪನಿಗಳಿಗೆ ಸಹಾಯ ಮಾಡುತ್ತದೆ.
ರೈತರ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿಯವರ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ, ಈ ಕಾರ್ಯಕ್ರಮದಲ್ಲಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ 12 ನೇ ಕಂತಿನ ಮೊತ್ತವಾದ 16,000 ಕೋಟಿ ರೂ.ಗಳನ್ನು ನೇರ ನಗದು ವರ್ಗಾವಣೆಯ ಮೂಲಕ ಬಿಡುಗಡೆ ಮಾಡುವರು. ಈ ಯೋಜನೆಯಡಿ, ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ 6000 ರೂ.ಗಳ ಪ್ರಯೋಜನವನ್ನು ತಲಾ 2000 ರೂ.ಗಳ ಮೂರು ಸಮಾನ ಕಂತುಗಳಲ್ಲಿ ನೀಡಲಾಗುತ್ತದೆ. ಇಲ್ಲಿಯವರೆಗೆ, ಅರ್ಹ ರೈತ ಕುಟುಂಬಗಳು ಪಿಎಂ-ಕಿಸಾನ್ ಅಡಿಯಲ್ಲಿ 2 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಪ್ರಯೋಜನಗಳನ್ನು ಪಡೆದಿವೆ.
ಪ್ರಧಾನಮಂತ್ರಿಯವರು ಕೃಷಿ ನವೋದ್ಯಮ ಸಮಾವೇಶ ಮತ್ತು ವಸ್ತುಪ್ರದರ್ಶನವನ್ನೂ ಉದ್ಘಾಟಿಸಲಿದ್ದಾರೆ. ಸುಮಾರು 300 ನವೋದ್ಯಮಗಳು ನಿಖರ ಕೃಷಿ, ಕೊಯ್ಲೋತ್ತರ ಮತ್ತು ಮೌಲ್ಯವರ್ಧಿತ ಪರಿಹಾರಗಳು, ಪೂರಕ ಕೃಷಿ, ತ್ಯಾಜ್ಯದಿಂದ ಸಂಪತ್ತಿಗೆ, ಸಣ್ಣ ರೈತರಿಗೆ ಯಾಂತ್ರೀಕರಣ, ಪೂರೈಕೆ ಸರಪಳಿ ನಿರ್ವಹಣೆ, ಕೃಷಿ ಸಾಗಾಣಿಕೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸಲಿವೆ. ಈ ವೇದಿಕೆಯು ರೈತರು, ಎಫ್.ಪಿ.ಒ.ಗಳು, ಕೃಷಿ ತಜ್ಞರು, ಕಾರ್ಪೊರೇಟ್ ಗಳು ಮತ್ತಿತರರೊಂದಿಗೆ ಸಂವಹನ ನಡೆಸಲು ನವೋದ್ಯಮಗಳಿಗೆ ಅನುವು ಮಾಡಿಕೊಡುತ್ತದೆ. ನವೋದ್ಯಮಗಳು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತವೆ ಮತ್ತು ತಾಂತ್ರಿಕ ಅಧಿವೇಶನಗಳಲ್ಲಿ ಇತರ ಭಾಗೀದಾರರೊಂದಿಗೆ ಸಂವಹನ ನಡೆಸುತ್ತವೆ.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ರಸಗೊಬ್ಬರ ಕುರಿತ 'ಇಂಡಿಯನ್ ಎಡ್ಜ್' ಎಂಬ ಇ-ನಿಯತಕಾಲಿಕವನ್ನು ಬಿಡುಗಡೆ ಮಾಡಲಿದ್ದಾರೆ. ಇದು ಇತ್ತೀಚಿನ ಬೆಳವಣಿಗೆಗಳು, ಬೆಲೆ ಪ್ರವೃತ್ತಿಗಳ ವಿಶ್ಲೇಷಣೆ, ಲಭ್ಯತೆ ಮತ್ತು ಬಳಕೆ, ರೈತರ ಯಶೋಗಾಥೆಗಳು ಸೇರಿದಂತೆ ದೇಶೀಯ ಮತ್ತು ಅಂತರರಾಷ್ಟ್ರೀಯ ರಸಗೊಬ್ಬರ ಸನ್ನಿವೇಶಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.