ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಸೆಪ್ಟೆಂಬರ್ 23ರಂದು ಬೆಳಗ್ಗೆ 10.30ಕ್ಕೆ ಗುಜರಾತ್‌ನ ಏಕ್ತಾ ನಗರದಲ್ಲಿ ಪರಿಸರ ಸಚಿವರ ರಾಷ್ಟ್ರೀಯ ಸಮ್ಮೇಳನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸಹಕಾರಿ ಒಕ್ಕೂಟ ವ್ಯವಸ್ಥೆಯ ಆಶಯವನ್ನು ಮುಂದುವರಿಸುತ್ತಾ, ಬಹು ಆಯಾಮದ ವಿಧಾನದ ಮೂಲಕ ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆ, ಹವಾಮಾನ ಬದಲಾವಣೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಕ್ರಿಯಾ ಯೋಜನೆಗಳ ನವೀಕರಣ, ʻಪರಿಸರಕ್ಕಾಗಿ – ಜೀವನಶೈಲಿ(LiFE) ಕುರಿತು ಗಮನ ಕೇಂದ್ರೀಕರಿಸಿ, ಆ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಮತ್ತಷ್ಟು ಹೊಂದಾಣಿಕೆಯನ್ನು ಸೃಷ್ಟಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ. ಇದು ಕ್ಷೀಣಿಸಿದ ಹಸಿರು ಪ್ರದೇಶದ ಪುನಸ್ಥಾಪನೆ ಮತ್ತು ವನ್ಯಜೀವಿ ಸಂರಕ್ಷಣೆಗೆ ವಿಶೇಷ ಒತ್ತು ನೀಡುವ ಮೂಲಕ ಅರಣ್ಯ ಪ್ರದೇಶವನ್ನು ಹೆಚ್ಚಿಸುವತ್ತ ಗಮನ ಹರಿಸುತ್ತದೆ.
ಸೆಪ್ಟೆಂಬರ್ 23 ಮತ್ತು 24ರಂದು ಆಯೋಜಿಸಲಾಗುವ ಎರಡು ದಿನಗಳ ಸಮ್ಮೇಳನದಲ್ಲಿ ʻಲೈಫ್ʼ (LiFE), ಹವಾಮಾನ ಬದಲಾವಣೆ ವಿರುದ್ಧ ಹೋರಾಟ (ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸುವುದು ಮತ್ತು ಹವಾಮಾನ ಪರಿಣಾಮಗಳಿಗೆ ಹೊಂದಿಕೊಳ್ಳುವಿಕೆ ನಿಟ್ಟಿನಲ್ಲಿ ಹವಾಮಾನ ಬದಲಾವಣೆಯ ಬಗ್ಗೆ ರಾಜ್ಯ ಕ್ರಿಯಾ ಯೋಜನೆಗಳ ನವೀಕರಣ) ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿ ಆರು ವಿಷಯಾಧಾರಿತ ಅಧಿವೇಶನಗಳು ನಡೆಯಲಿವೆ. ಅವುಗಳೆಂದರೆ: ʻಪರಿವೇಶ್ʼ (ಸಮಗ್ರ ಹಸಿರು ಅನುಮೋದನೆಗಾಗಿ ಏಕಗವಾಕ್ಷಿ ವ್ಯವಸ್ಥೆ); ಅರಣ್ಯ ನಿರ್ವಹಣೆ; ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ; ವನ್ಯಜೀವಿ ನಿರ್ವಹಣೆ; ಪ್ಲಾಸ್ಟಿಕ್ ಮತ್ತು ತ್ಯಾಜ್ಯ ನಿರ್ವಹಣೆ.