ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದೇ ನವೆಂಬರ್ 23ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಸದರಿಗಾಗಿ ನಿರ್ಮಿಸಿರುವ ಬಹು ಅಂತಸ್ತಿನ ವಸತಿ ಸಮುಚ್ಛಯವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಕೂಡ ಪಾಲ್ಗೊಳ್ಳಲಿದ್ದಾರೆ.
ಈ ವಸತಿ ಸಮುಚ್ಛಯಗಳು ನವದೆಹಲಿಯ ಡಾ. ಬಿ.ಡಿ. ಮಾರ್ಗ್ ನಲ್ಲಿವೆ. ಸುಮಾರು 80 ವರ್ಷಗಳಷ್ಟು ಹಳೆಯದಾದ ಎಂಟು ಬಂಗಲೆಗಳನ್ನು ಮರು ಅಭಿವೃದ್ಧಿಗೊಳಿಸಿ ಹೊಸದಾಗಿ 76 ಫ್ಲಾಟ್ ಗಳನ್ನು ನಿರ್ಮಿಸಲಾಗಿದೆ. ಈ ಫ್ಲಾಟ್ ಗಳ ನಿರ್ಮಾಣ ಕಾರ್ಯಕ್ಕೆ ಬಿಡುಗಡೆಯಾಗಿದ್ದ ಮೊತ್ತದಲ್ಲಿ ಶೇ.14ರಷ್ಟು ಉಳಿತಾಯ ಮಾಡಲಾಗಿದೆ. ಕೋವಿಡ್–19 ಪರಿಣಾಮದ ನಡುವೆಯೂ ಹೆಚ್ಚು ಸಮಯ ತೆಗೆದುಕೊಳ್ಳದೆ, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲಾಗಿದೆ.
ಈ ಕಟ್ಟಡದಲ್ಲಿ ಹಲವು ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ನಿರ್ಮಾಣ ಕಾರ್ಯಕ್ಕೆ ಬಳಸಿರುವ ಇಟ್ಟಿಗೆಗಳು ಹಾರುವ ಬೂದಿ ಹಾಗೂ ಕಟ್ಟಡ ನಿರ್ಮಾಣ ತ್ಯಾಜ್ಯದಿಂದ ಮಾಡಲ್ಪಟ್ಟಿವೆ, ಡಬಲ್ ಗೇಜ್ ಇರುವ ಕಿಟಕಿಗಳಿಗೆ ಥರ್ಮಲ್ ಇನ್ಸುಲೇಶನ್ ಅಳವಡಿಸಲಾಗಿದೆ ಮತ್ತು ಪರಿಣಾಮಕಾರಿ ಇಂಧನ ಕ್ರಮ ಕೈಗೊಂಡು ಇಂಧನ ಉಳಿತಾಯ ಮಾಡುವ ಎಲ್ ಇಡಿ ದೀಪದ ವ್ಯವಸ್ಥೆ, ದೀಪಗಳ ನಿಯಂತ್ರಣಕ್ಕಾಗಿ ವಾಸ್ತವ್ಯ ಆಧಾರಿತ ಸೆನ್ಸಾರ್ ಗಳು, ಕಡಿಮೆ ವಿದ್ಯುತ್ ಬಳಸುವ ವಿಆರ್ ವಿ ವ್ಯವಸ್ಥೆ ಹೊಂದಿರುವ ಹವಾನಿಯಂತ್ರಣ, ನೀರು ಉಳಿತಾಯ ಮಾಡುವ ಹಲವು ಕ್ರಮಗಳು, ಮಳೆ ನೀರು ಕೊಯ್ಲು ವ್ಯವಸ್ಥೆ ಮತ್ತು ಮೇಲ್ಛಾವಣಿ ಸೌರ ಘಟಕ ಮತ್ತಿತರ ಪರಿಸರಸ್ನೇಹಿ ಕ್ರಮಗಳು ಸೇರಿವೆ.