ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ಸೆಪ್ಟೆಂಬರ್ 8ರಂದು ಸಂಜೆ 7 ಗಂಟೆಗೆ 'ಕರ್ತವ್ಯ ಪಥ' ಉದ್ಘಾಟಿಸಲಿದ್ದಾರೆ. ಇದು ಹಿಂದಿನ ರಾಜಪಥವನ್ನು ಕರ್ತವ್ಯ ಮಾರ್ಗವಾಗಿ ಪರಿವರ್ತಿಸಲಿದ್ದು, ಆಡಳಿತ ಅಥವಾ ಅಧಿಕಾರದ ಚಿತ್ರಾತ್ಮಕ ಸಂಕೇತವಾಗಿ, ಸಾರ್ವಜನಿಕ ಮಾಲೀಕತ್ವ ಮತ್ತು ಸಬಲೀಕರಣದ ಉದಾಹರಣೆಯಾಗಿ ಹೊಸ ಬದಲಾವಣೆಯನ್ನು ಸಂಕೇತಿಸುತ್ತದೆ. ಇದೇ ಸಂದರ್ಭದಲ್ಲಿ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಪ್ರಧಾನಿ ಅವರು ಅನಾವರಣಗೊಳಿಸಲಿದ್ದಾರೆ. ಈ ಕ್ರಮಗಳು ಅಮೃತ ಕಾಲಘಟ್ಟದ ನವ ಭಾರತ ಕಟ್ಟುವ ಪ್ರಧಾನ ಮಂತ್ರಿ ಅವರ 2ನೇ 'ಪಂಚ ಪ್ರಾಣ' ಸೂತ್ರಕ್ಕೆ ಅನುಗುಣವಾಗಿವೆ: 'ವಸಾಹತುಶಾಹಿ ಮನಸ್ಥಿತಿಯ ಯಾವುದೇ ಕುರುಹುಗಳನ್ನು ಇಲ್ಲಿಂದ ತೆಗೆದುಹಾಕಲಾಗುತ್ತಿದೆ'.
ಹಲವಾರು ವರ್ಷಗಳಿಂದಲೂ ರಾಜ್‌ಪಥ್ ಮತ್ತು ಸೆಂಟ್ರಲ್ ವಿಸ್ಟಾ ಅವೆನ್ಯೂ ಅಕ್ಕಪಕ್ಕದ ಪ್ರದೇಶಗಳು ಪ್ರವಾಸಿಗರು ಮತ್ತು ಸಂದರ್ಶಕರ ದಟ್ಟಣೆಯ ಒತ್ತಡಕ್ಕೆ ಸಾಕ್ಷಿಯಾಗುತ್ತಿವೆ. ಇದರಿಂದ ಸ್ಥಳೀಯ ಮೂಲಸೌಕರ್ಯಗಳ ಮೇಲೆ ಒತ್ತಡ ಬೀರುತ್ತಿವೆ. ಸಾರ್ವಜನಿಕ ಶೌಚಾಲಯಗಳು, ಕುಡಿಯುವ ನೀರು, ಬೀದಿ ಪೀಠೋಪಕರಣಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳದಂತಹ ಮೂಲಸೌಕರ್ಯಗಳ ಕೊರತೆಯಿದೆ. ಇದಲ್ಲದೆ, ಅಸಮರ್ಪಕ ಫಲಕಗಳು, ನೀರಿನ ವೈಶಿಷ್ಟ್ಯಗಳ ಕಳಪೆ ನಿರ್ವಹಣೆ ಮತ್ತು ಅಡ್ಡಾದಿಡ್ಡಿ ಪಾರ್ಕಿಂಗ್ ಅವ್ಯವಸ್ಥೆ ಇಲ್ಲಿತ್ತು. ಅಲ್ಲದೆ, ಸಾರ್ವಜನಿಕ ಚಲನವಲನದ ಮೇಲೆ ಕನಿಷ್ಠ ನಿರ್ಬಂಧಗಳೊಂದಿಗೆ ಗಣರಾಜ್ಯೋತ್ಸವದ ಪರೇಡ್ ಮತ್ತು ಇತರ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಬಿಗಿಭದ್ರತೆ ಮತ್ತು ಸಾರ್ವಜನಿಕರು ಮತ್ತು ವಾಹನಗಳ ನಿಯಂತ್ರಣ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತಿತ್ತು. ಈ ಎಲ್ಲಾ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ರಾಜಪಥ ಪ್ರದೇಶವನ್ನು ಸಂಪೂರ್ಣ ಮರುಅಭಿವೃದ್ಧಿ ಪಡಿಸಲಾಗಿದೆ. ವಾಸ್ತುಶಿಲ್ಪ ಸ್ವರೂಪದ ಸಮಗ್ರತೆ ಮತ್ತು ನಿರಂತರತೆಯನ್ನು ಖಾತ್ರಿಪಡಿಸಲಾಗಿದೆ.
ಕರ್ತವ್ಯ ಪಥದ ಆಸುಪಾಸಿನಲ್ಲಿ ಸುಂದರವಾದ ಭೂಸದೃಶ್ಯಗಳು, ಕಾಲ್ನಡಿಗೆಗೆ ಹುಲ್ಲುಹಾಸುಗಳು, ಹೆಚ್ಚುವರಿ ಹಸಿರು ಸ್ಥಳಗಳು, ನವೀಕರಿಸಿದ ಕಾಲುವೆಗಳು, ಹೊಸ ಸೌಕರ್ಯದ ಬ್ಲಾಕ್ ಗಳು, ಸುಧಾರಿತ ಸಂಕೇತಗಳು ಮತ್ತು ಮಾರಾಟ ಕಿಯೋಸ್ಕ್ ಗಳನ್ನು ರೂಪಿಸಲಾಗಿದೆ. ಇದಲ್ಲದೆ, ಹೊಸ ಪಾದಚಾರಿ ಅಂಡರ್‌ಪಾಸ್‌ಗಳು, ಸುಧಾರಿತ ಪಾರ್ಕಿಂಗ್ ಸ್ಥಳಗಳು, ಹೊಸ ಪ್ರದರ್ಶನ ಫಲಕಗಳು ಮತ್ತು ನವೀಕೃತ ರಾತ್ರಿ ದೀಪಗಳು ಸಾರ್ವಜನಿಕ ಅನುಭವವನ್ನು ಶ್ರೀಮಂತಗೊಳಿಸುವ ಕೆಲವು ವೈಶಿಷ್ಟ್ಯಗಳಾಗಿವೆ. ಇಲ್ಲಿ ಘನತ್ಯಾಜ್ಯ ನಿರ್ವಹಣೆ, ಮಳೆನೀರು ನಿರ್ವಹಣೆ, ಬಳಸಿದ ನೀರಿನ ಮರುಬಳಕೆ, ಮಳೆನೀರು ಕೊಯ್ಲು, ನೀರಿನ ಸಂರಕ್ಷಣೆ ಮತ್ತು ಇಂಧನ ದಕ್ಷ ಬೆಳಕಿನ ವ್ಯವಸ್ಥೆಗಳಂತಹ ಹಲವಾರು ಸುಸ್ಥಿರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 23ರಂದು ಪರಾಕ್ರಮ್ ದಿವಸ ನೇತಾಜಿ ಅವರ ಹೊಲೊಗ್ರಾಮ್ ಪ್ರತಿಮೆ ಅನಾವರಣಗೊಳಿಸಿದ ಸ್ಥಳದಲ್ಲೇ ಸ್ಥಾಪಿಸಲಾಗಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಪ್ರಧಾನಿ ಅವರು ಅನಾವರಣಗೊಳಿಸಲಿದ್ದಾರೆ. ಗ್ರಾನೈಟ್‌ನಿಂದ ನಿರ್ಮಿಸಲಾದ ಈ ಪ್ರತಿಮೆಯು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಅವರು ನೀಡಿರುವ ಅಪಾರ ಕೊಡುಗೆಯನ್ನು ಸ್ಮರಿಸುವ, ಗೌರವಿಸುವ ಸಂಕೇತವಾಗಲಿದೆ. ಇದು ದೇಶವು ಅವರಿಗೆ ನೀಡುತ್ತಿರುವ ಚಿರಋಣಿಯ ಸಂಕೇತವಾಗಿದೆ. ಮುಖ್ಯ ವಾಸ್ತುಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರು ಈ ಪ್ರತಿಮೆ ನಿರ್ಮಿಸಿದ್ದು, 28 ಅಡಿ ಎತ್ತರದ ಪುತ್ಥಳಿಯನ್ನು ಏಕಶಿಲೆಯ ಗ್ರಾನೈಟ್ ಕಲ್ಲಿನಿಂದ ಕೆತ್ತಲಾಗಿದೆ. ಇದು 65 ಮೆಟ್ರಿಕ್ ಟನ್ ತೂಕವಿದೆ.