ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 15 ರಂದು ಬೆಳಿಗ್ಗೆ 10 ಗಂಟೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ಅಂತರರಾಷ್ಟ್ರೀಯ ದೂರಸಂಪರ್ಕ ಮಹಾಸಂಘ - ವಿಶ್ವ ದೂರಸಂಪರ್ಕ ಪ್ರಮಾಣೀಕರಣ ಸಮ್ಮೇಳನ 2024 (ಡಬ್ಲ್ಯುಟಿಎಸ್ಎ) ಅನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಇಂಡಿಯಾ ಮೊಬೈಲ್ ಕಾಂಗ್ರೆಸ್ 2024 ರ 8ನೇ ಆವೃತ್ತಿಯನ್ನು ಕೂಡ ಉದ್ಘಾಟಿಸಲಿದ್ದಾರೆ.
ಡಬ್ಲ್ಯುಟಿಎಸ್ಎ ಎನ್ನುವುದು ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್ (ಐಟಿಯು), ಡಿಜಿಟಲ್ ತಂತ್ರಜ್ಞಾನಕ್ಕಾಗಿ ವಿಶ್ವಸಂಸ್ಥೆಯ ಏಜೆನ್ಸಿಯ ಆಡಳಿತ ಮಂಡಳಿಯಾಗಿದ್ದು ಪ್ರಮಾಣೀಕರಣ ಕಾರ್ಯಕ್ಕಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಸಮ್ಮೇಳನವಾಗಿದೆ. ಇದು ಮೊದಲ ಬಾರಿಗೆ ಐಟಿಯು- ಡಬ್ಲ್ಯುಟಿಎಸ್ಎ ಅನ್ನು ಭಾರತ ಮತ್ತು ಏಷ್ಯಾ-ಪೆಸಿಫಿಕ್ನಲ್ಲಿ ಆಯೋಜಿಸಲಾಗಿದೆ. ಇದು ದೂರಸಂಪರ್ಕ, ಡಿಜಿಟಲ್ ಮತ್ತು ಐಸಿಟಿ ವಲಯಗಳನ್ನು ಪ್ರತಿನಿಧಿಸುವ 190 ಕ್ಕೂ ಹೆಚ್ಚು ದೇಶಗಳ 3,000 ಕ್ಕೂ ಹೆಚ್ಚು ಉದ್ಯಮ ನಾಯಕರು, ನೀತಿ ನಿರೂಪಕರು ಮತ್ತು ತಂತ್ರಜ್ಞಾನ ನಿಪುಣರನ್ನು ಒಟ್ಟುಗೂಡಿಸುವ ಪ್ರಮುಖ ಜಾಗತಿಕ ಕಾರ್ಯಕ್ರಮವಾಗಿದೆ.
ಡಬ್ಲ್ಯುಟಿಎಸ್ 6ಜಿ, ಕೃತಕ ಬುದ್ಧಿಮತ್ತೆ (ಎಐ), ಐಒಟಿ, ಬಿಗ್ ಡೇಟಾ, ಸೈಬರ್ ಸೆಕ್ಯುರಿಟಿ ಮುಂತಾದ ಮುಂದಿನ ಪೀಳಿಗೆಯ ನಿರ್ಣಾಯಕ ತಂತ್ರಜ್ಞಾನಗಳ ಭವಿಷ್ಯವನ್ನು ಚರ್ಚಿಸಲು ಮತ್ತು ನಿರ್ಧರಿಸಲು ದೇಶಗಳಿಗೆ ವೇದಿಕೆಯನ್ನು ಒದಗಿಸುತ್ತದೆ. ಭಾರತದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುವುದರಿಂದ ಜಾಗತಿಕ ದೂರಸಂಪರ್ಕ ಕಾರ್ಯಸೂಚಿಯನ್ನು ರೂಪಿಸುವಲ್ಲಿ ಮತ್ತು ಭವಿಷ್ಯದ ತಂತ್ರಜ್ಞಾನಗಳಿಗೆ ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರವಹಿಸಲು ದೇಶಕ್ಕೆ ಒಂದು ಅವಕಾಶವನ್ನು ಒದಗಿಸುತ್ತದೆ.. ಭಾರತೀಯ ನವೋದ್ಯಮಗಳು ಮತ್ತು ಸಂಶೋಧನಾ ಸಂಸ್ಥೆಗಳು ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಸ್ಟ್ಯಾಂಡರ್ಡ್ ಎಸೆನ್ಷಿಯಲ್ ಪೇಟೆಂಟ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕ ಒಳನೋಟಗಳನ್ನು ಪಡೆಯಲು ಸಿದ್ಧವಾಗಿವೆ.
ಇಂಡಿಯಾ ಮೊಬೈಲ್ ಕಾಂಗ್ರೆಸ್ 2024 ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಪ್ರದರ್ಶಿಸುತ್ತದೆ, ಅಲ್ಲಿ ಪ್ರಮುಖ ದೂರಸಂಪರ್ಕ ಕಂಪನಿಗಳು ಮತ್ತು ನವೋದ್ಯಮಿಗಳು ಕ್ವಾಂಟಮ್ ತಂತ್ರಜ್ಞಾನ ಮತ್ತು ವೃತ್ತಾಕಾರದ ಆರ್ಥಿಕತೆಯ ಪ್ರಗತಿಯನ್ನು ಎತ್ತಿ ತೋರಿಸುವುದರ ಜೊತೆಗೆ 6ಜಿ, 5ಜಿ ಯೂಸ್-ಕೇಸ್ ಶೋಕೇಸ್, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಐಒಟಿ, ಸೆಮಿಕಂಡಕ್ಟರ್ಗಳು, ಸೈಬರ್ಟೆಕ್ ಭದ್ರತೆ, ಹಸಿರು ತಂತ್ರಜ್ಞಾನ , ಸ್ಯಾಟ್ಕಾಮ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕೆಯ ಬಗ್ಗೆ ಕೇಂದ್ರೀಕರಿಸುತ್ತದೆ.
ಏಷ್ಯಾದ ಅತಿದೊಡ್ಡ ಡಿಜಿಟಲ್ ತಂತ್ರಜ್ಞಾನ ವೇದಿಕೆಯಾದ ಇಂಡಿಯಾ ಮೊಬೈಲ್ ಕಾಂಗ್ರೆಸ್, ಉದ್ಯಮ, ಸರ್ಕಾರ, ಶಿಕ್ಷಣ ತಜ್ಞರು, ನವೋದ್ಯಮಗಳು ಮತ್ತು ತಂತ್ರಜ್ಞಾನ ಮತ್ತು ದೂರಸಂಪರ್ಕ ಕ್ಷೇತ್ರದ ಇತರ ಪ್ರಮುಖ ಪಾಲುದಾರರಿಗೆ ನವೀನ ಪರಿಹಾರಗಳು, ಸೇವೆಗಳು ಮತ್ತು ಅತ್ಯಾಧುನಿಕ ಬಳಕೆಯ ಯೋಜನೆಗಳನ್ನು ಪ್ರದರ್ಶಿಸಲು ಜಗತ್ತಿನಾದ್ಯಂತ ಪ್ರಸಿದ್ಧ ವೇದಿಕೆಯಾಗಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ 2024ರಲ್ಲಿ 400 ಕ್ಕೂ ಹೆಚ್ಚು ಪ್ರದರ್ಶಕರು, ಸುಮಾರು 900 ನವೋದ್ಯಮಗಳು ಮತ್ತು 120 ಕ್ಕೂ ಹೆಚ್ಚು ದೇಶಗಳಿಂದ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ಈ ಕಾರ್ಯಕ್ರಮವು 900 ಕ್ಕೂ ಹೆಚ್ಚು ತಂತ್ರಜ್ಞಾನ ಬಳಕೆಯ ಸನ್ನಿವೇಶಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ, 100 ಕ್ಕೂ ಹೆಚ್ಚು ಸೆಷನ್ಗಳನ್ನು ಮತ್ತು ವಿಶ್ವದ ಮತ್ತು ಭಾರತದ 600 ಕ್ಕೂ ಹೆಚ್ಚು ಸ್ಪೀಕರ್ ಗಳೊಂದಿಗೆ ಚರ್ಚೆಯನ್ನು ಆಯೋಜಿಸುತ್ತದೆ.