ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜೂನ್ 6ರಂದು ಬೆಳಿಗ್ಗೆ 10:30ಕ್ಕೆ ನವದೆಹಲಿಯ ವಿಜ್ಞಾನ ಭವನದಲ್ಲಿ ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ `ಐಕಾನಿಕ್ ಸಪ್ತಾಹ’ ಆಚರಣೆಗೆ ಚಾಲನೆ ನೀಡಲಿದ್ದಾರೆ. 2022ರ ಜೂನ್ 6ರಿಂದ 11ರವರೆಗೆ 'ಆಜಾದಿ ಕಾ ಅಮೃತ ಮಹೋತ್ಸವ'ದ (ಎ.ಕೆ.ಎ.ಎಂ) ಭಾಗವಾಗಿ ಈ ಸಪ್ತಾಹವನ್ನು ಆಚರಿಸಲಾಗುತ್ತಿದೆ.
ಪ್ರಧಾನಮಂತ್ರಿಯವರು ಸಾಲ ಆಧರಿತ ಸರಕಾರಿ ಯೋಜನೆಗಳ ರಾಷ್ಟ್ರೀಯ ಪೋರ್ಟಲ್ - ʻಜನ ಸಮರ್ಥ್ ಪೋರ್ಟಲ್ʼಗೂ ಚಾಲನೆ ನೀಡಲಿದ್ದಾರೆ. ಇದು ಸರಕಾರಿ ಸಾಲ ಯೋಜನೆಗಳನ್ನು ಸಂಪರ್ಕಿಸುವ ಸಮಗ್ರ ಡಿಜಿಟಲ್ ಪೋರ್ಟಲ್ ಆಗಿದೆ. ಇದು ಇಂತಹ ಮೊದಲ ರೀತಿಯ ವೇದಿಕೆಯಾಗಿದ್ದು, ಫಲಾನುಭವಿಗಳನ್ನು ನೇರವಾಗಿ ಸಾಲದಾತರೊಂದಿಗೆ ಸಂಪರ್ಕಿಸುತ್ತದೆ. ಸರಳ ಮತ್ತು ಸುಲಭ ಡಿಜಿಟಲ್ ಪ್ರಕ್ರಿಯೆಗಳ ಮೂಲಕ ಮಾರ್ಗದರ್ಶನ ನೀಡುವುದು ಹಾಗೂ ಸರಿಯಾದ ರೀತಿಯ ಸರಕಾರಿ ಪ್ರಯೋಜನಗಳನ್ನು ಒದಗಿಸುವ ಮೂಲಕ ವಿವಿಧ ಕ್ಷೇತ್ರಗಳ ಸಮಗ್ರ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು ʻಜನ ಸಮರ್ಥ್ ಪೋರ್ಟಲ್ʼನ ಮುಖ್ಯ ಉದ್ದೇಶವಾಗಿದೆ. ಪೋರ್ಟಲ್ ಎಲ್ಲಾ ಸಾಲ ಆಧರಿತ ಯೋಜನೆಗಳ ಸಮಗ್ರ ವ್ಯಾಪ್ತಿಯನ್ನು ಒಳಗೊಂಡಿದೆ.
ಪ್ರಧಾನಮಂತ್ರಿ ಅವರು ಡಿಜಿಟಲ್ ವಸ್ತುಪ್ರದರ್ಶನವನ್ನು ಸಹ ಉದ್ಘಾಟಿಸಲಿದ್ದು, ಇದು ಕಳೆದ ಎಂಟು ವರ್ಷಗಳಲ್ಲಿ ಎರಡೂ ಸಚಿವಾಲಯಗಳ ಪ್ರಯಾಣದ ಹಿನ್ನೋಟವನ್ನು ಒದಗಿಸಲಿದೆ. ಪ್ರಧಾನಮಂತ್ರಿಯವರು ₹ 1, ₹ 2, ₹ 5, ₹ 10 ಮತ್ತು ₹ 20 ನಾಣ್ಯಗಳ ವಿಶೇಷ ಸರಣಿಯನ್ನೂ ಬಿಡುಗಡೆ ಮಾಡಲಿದ್ದಾರೆ. ಈ ವಿಶೇಷ ಸರಣಿಯ ನಾಣ್ಯಗಳು ʻಆಜಾದಿ ಕಾ ಅಮೃತ ಮಹೋತ್ಸವʼದ ಲೋಗೋ ಮತ್ತು ಥೀಮ್ ಹೊಂದಿರಲಿದ್ದು, ದೃಷ್ಟಿಚೇತನ ವ್ಯಕ್ತಿಗಳಿಗೂ ಸುಲಭವಾಗಿ ಇವುಗಳನ್ನು ಗುರುತಿಸಲು ಸಾಧ್ಯವಾಗಲಿದೆ.
ಈ ಕಾರ್ಯಕ್ರಮವನ್ನು ದೇಶಾದ್ಯಂತ 75ಸ್ಥಳಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಗುವುದು ಮತ್ತು ಪ್ರತಿ ಸ್ಥಳವನ್ನು ಮುಖ್ಯ ಸ್ಥಳದೊಂದಿಗೆ ವರ್ಚುವಲ್ ಮೋಡ್ ಮೂಲಕ ಸಂಪರ್ಕಿಸಲಾಗುವುದು.