ಶಹೀದ್ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದೇ ಮಾರ್ಚ್ 23 ರಂದು ಸಂಜೆ 6 ಗಂಟೆಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ನಲ್ಲಿ ಬಿಪ್ಲೋಬಿ ಭಾರತ್ ಗ್ಯಾಲರಿಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಕೊಡುಗೆ ಮತ್ತು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಗೆ ಅವರ ಸಶಸ್ತ್ರ ಪ್ರತಿರೋಧವನ್ನು ದಾಖಲಿಸುವ ಪ್ರದರ್ಶನವನ್ನು ಗ್ಯಾಲರಿಯು ಒಳಗೊಂಡಿದೆ. ಸ್ವಾತಂತ್ರ್ಯ ಚಳವಳಿಯ ಮುಖ್ಯವಾಹಿನಿಯ ನಿರೂಪಣೆಯಲ್ಲಿ ಈ ಅಂಶಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿರಲಿಲ್ಲ. ಈ ಹೊಸ ಗ್ಯಾಲರಿಯ ಉದ್ದೇಶವು 1947 ರವರೆಗಿನ ಘಟನೆಗಳ ಸಮಗ್ರ ನೋಟವನ್ನು ಒದಗಿಸುವುದು ಮತ್ತು ಕ್ರಾಂತಿಕಾರಿಗಳು ನಿರ್ವಹಿಸಿದ ಪ್ರಮುಖ ಪಾತ್ರವನ್ನು ಬಿಂಬಿಸುವುದಾಗಿದೆ.
ಬಿಪ್ಲೋಬಿ ಭಾರತ್ ಗ್ಯಾಲರಿಯು ಕ್ರಾಂತಿಕಾರಿ ಚಳುವಳಿಯನ್ನು ಪ್ರಚೋದಿಸಿದ ರಾಜಕೀಯ ಮತ್ತು ಬೌದ್ಧಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತದೆ. ಇದು ಕ್ರಾಂತಿಕಾರಿ ಚಳವಳಿಯ ಹುಟ್ಟು, ಕ್ರಾಂತಿಕಾರಿ ನಾಯಕರಿಂದ ಮಹತ್ವದ ಸಂಘಟನೆಗಳ ರಚನೆ, ಚಳವಳಿಯ ಹರಡುವಿಕೆ, ಭಾರತೀಯ ರಾಷ್ಟ್ರೀಯ ಸೇನೆಯ ರಚನೆ, ನೌಕಾ ದಂಗೆಯ ಕೊಡುಗೆ ಮತ್ತಿತರವುಗಳನ್ನು ಪ್ರದರ್ಶಿಸುತ್ತದೆ.