ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 9ರಂದು ಬೆಳಿಗ್ಗೆ 10.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಾರಾಣಸಿಯಲ್ಲಿ ಹಲವು ಅಭಿವೃದ್ಧಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಮತ್ತು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಅಭಿವೃದ್ಧಿ ಯೋಜನೆಗಳ ಒಟ್ಟು ವೆಚ್ಚ ಸುಮಾರು 614 ಕೋಟಿ ರೂಪಾಯಿಗಳು. ಅಲ್ಲದೆ, ಪ್ರಧಾನಮಂತ್ರಿ ಅವರು ಕಾರ್ಯಕ್ರಮದ ವೇಳೆ ಈ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಪ್ರಧಾನಮಂತ್ರಿ ಅವರು ಉದ್ಘಾಟಿಸಲಿರುವ ಕಾರ್ಯಕ್ರಮಗಳಲ್ಲಿ ಸಾರನಾಥದಲ್ಲಿ ಬೆಳಕು ಮತ್ತು ಶಬ್ಧದ ಪ್ರದರ್ಶನ, ರಾಮ್ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆ ಉನ್ನತೀಕರಣ, ಒಳಚರಂಡಿ ಸಂಬಂಧಿ ಕಾಮಗಾರಿಗಳು, ಗೋವುಗಳ ರಕ್ಷಣೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದ ಮೂಲ ಸೌಕರ್ಯ ವೃದ್ಧಿ, ಬಹುಉದ್ದೇಶದ ಬೀಜ ದಾಸ್ತಾನು ಗೋದಾಮು, 100 ಎಂಟಿ ಸಾಮರ್ಥ್ಯದ ಕೃಷಿ ಉತ್ಪನ್ನ ಸಂಗ್ರಹ ಗೋದಾಮು, ಐಪಿಡಿಎಸ್ 2ನೇ ಹಂತ, ಸಂಪೂರ್ಣಾನಂದ ಕ್ರೀಡಾಂಗಣದಲ್ಲಿ ಆಟಗಾರರಿಗೆ ವಸತಿ ಸಂಕೀರ್ಣ, ವಾರಾಣಸಿ ನಗರ ಸ್ಮಾರ್ಟ್ ಬೆಳಕಿನ ಕಾಮಗಾರಿ, 105 ಅಂಗನವಾಡಿ ಕೇಂದ್ರಗಳು ಮತ್ತು 102 ಗೋ ಆಶ್ರಯ ಕೇಂದ್ರಗಳ ಉದ್ಘಾಟನೆ ಯೋಜನೆಗಳು ಸೇರಿವೆ.
ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿಗಳು ದಶಾಶ್ವಮೇಧ ಘಾಟ್ ಮತ್ತು ಖಿಡ್ ಕಿಯಾ ಘಾಟ್ ಮರು ಅಭಿವೃದ್ಧಿ, ಪಿಎಸಿ ಪೊಲೀಸ್ ಸಿಬ್ಬಂದಿಗೆ ಬ್ಯಾರಕ್ ನಿರ್ಮಾಣ, ಕಾಶಿಯ ಕೆಲವು ವಾರ್ಡ್ ಗಳ ಮರು ಅಭಿವೃದ್ಧಿ, ಬೆನಿಯಾ ಭಾಗ್ ನಲ್ಲಿ ಉದ್ಯಾನವನಗಳ ನವೀಕರಣದ ಜೊತೆ ವಾಹನ ನಿಲುಗಡೆ ಸಮುಚ್ಛಯ, ಗಿರಿಜಾದೇವಿ ಸಾಂಸ್ಕೃತಿಕ ಸಂಕುಲದ ಬಹು ಉದ್ದೇಶದ ಸಭಾಂಗಣ ಮೇಲ್ದರ್ಜೆಗೇರಿಸುವುದು, ನಗರಗಳಲ್ಲಿ ರಸ್ತೆ ದುರಸ್ತಿ ಕಾಮಗಾರಿ ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.