ಪ್ರಧಾನ ಮಂತ್ರಿ ಶೀ ನರೇಂದ್ರ ಮೋದಿ ಅವರು ಆಗಸ್ಟ್ 20 ರಂದು 11 ಗಂಟೆಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಸೋಮನಾಥದಲ್ಲಿ ಬಹು ಯೋಜನೆಗಳನ್ನು ಕಾರ್ಯಾರಂಭಗೊಳಿಸಲಿದ್ದಾರೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸೋಮನಾಥ ವಾಯುವಿಹಾರ, ಸೋಮನಾಥ ವಸ್ತು ಪ್ರದರ್ಶನ ಕೇಂದ್ರ ಮತ್ತು ದೇವಾಲಯದ ಹಳೆಯ ಮರುನಿರ್ಮಾಣ ಮಾಡಲಾದ ಸುತ್ತು ಪೌಳಿಯನ್ನು ಪ್ರಧಾನ ಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ಪ್ರಧಾನ ಮಂತ್ರಿ ಅವರು ಶ್ರೀ ಪಾರ್ವತಿ ದೇವಾಲಯಕ್ಕೆ ಈ ಸಂದರ್ಭದಲ್ಲಿ ಶಿಲಾನ್ಯಾಸ ನೆರವೇರಿಸುವರು.
ಸೋಮನಾಥ ವಾಯು ವಿಹಾರವನ್ನು ಪ್ರಸಾದ (ಯಾತ್ರಾ ಪುನಶ್ಚೇತನ ಮತ್ತು ಆಧ್ಯಾತ್ಮಿಕ, ಪರಂಪರೆ ವರ್ಧನೆ ಕಾರ್ಯಕ್ರಮ) ಯೋಜನೆ ಅಡಿಯಲ್ಲಿ ಒಟ್ಟು 47 ಕೋ.ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸೋಮನಾಥ ವಸ್ತುಪ್ರದರ್ಶನ ಕೇಂದ್ರವನ್ನು ಪ್ರವಾಸೀ ಸೌಲಭ್ಯ ಕೇಂದ್ರದ ಆವರಣದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಇದರಲ್ಲಿ ಹಳೆಯ ಸೋಮನಾಥ ದೇವಾಲಯದ ಕಳಚಿದ ಭಾಗಗಳನ್ನು ಮತ್ತು ನಾಗರ ಶೈಲಿಯ ದೇವಾಲಯದ ವಾಸ್ತುಶಿಲ್ಪವನ್ನು, ವಿಗ್ರಹಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಪುನರ್ನಿರ್ಮಿಸಲಾದ ಹಳೆಯ ಸೋಮನಾಥ ದೇವಾಲಯದ ಸುತ್ತುಪೌಳಿಯನ್ನು ಶ್ರೀ ಸೋಮನಾಥ ಟ್ರಸ್ಟ್ ಒಟ್ಟು 3.5 ಕೋ.ರೂ.ಗಳ ವೆಚ್ಚದಲ್ಲಿ ಪೂರ್ಣಗೊಳಿಸಿದೆ. ಈ ದೇವಾಲಯವನ್ನು ಅಹಿಲ್ಯಾಬಾಯಿ ದೇವಾಲಯ ಎಂದೂ ಕರೆಯಲಾಗುತ್ತದೆ. ಇದನ್ನು ಇಂದೋರಿನ ರಾಣಿ ಅಹಿಲ್ಯಾಬಾಯಿ ಅವರು ನಿರ್ಮಾಣ ಮಾಡಿದ ಕಾರಣಕ್ಕೆ ಈ ಹೆಸರು. ಹಳೆಯ ದೇವಾಲಯ ಹಾಳಾಗತೊಡಗಿದ್ದನ್ನು ಕಂಡ ರಾಣಿ ಇದರ ಪುನರ್ನಿರ್ಮಾಣಕ್ಕೆ ಮುಂದಾಗಿದ್ದರು. ಇಡೀ ಹಳೆಯ ದೇವಾಲಯ ಸಂಕೀರ್ಣವನ್ನು ಯಾತ್ರಿಕರ ಸುರಕ್ಷೆಗಾಗಿ ಮತ್ತು ಹೆಚ್ಚಿನ ಸಾಮರ್ಥ್ಯಕ್ಕಾಗಿ ಸಮಗ್ರವಾಗಿ ಮರುಅಭಿವೃದ್ಧಿ ಮಾಡಲಾಗಿದೆ.
ಶ್ರೀ ಪಾರ್ವತಿ ದೇವಾಲಯವನ್ನು ಒಟ್ಟು 30 ಕೋ.ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದನ್ನು ಸೋಮಪುರ ವಿನ್ಯಾಸದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಗರ್ಭಗೃಹ ಮತ್ತು ನೃತ್ಯ ಮಂಟಪವನ್ನು ಒಳಗೊಂಡಿರುತ್ತದೆ.
ಕೇಂದ್ರ ಗೃಹ ಸಚಿವ, ಕೇಂದ್ರ ಪ್ರವಾಸೋದ್ಯಮ ಸಚಿವರು, ಗುಜರಾತಿನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಈ ಸಂದರ್ಭದಲ್ಲಿ ಹಾಜರಿರುವರು.