ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಮಾರ್ಚ್ 10ರಂದು ಸಂಜೆ 4.30ಕ್ಕೆ ನವದೆಹಲಿಯ ವಿಜ್ಞಾನ ಭವನದಲ್ಲಿ `ವಿಪತ್ತು ಅಪಾಯ ತಗ್ಗಿಸುವ ರಾಷ್ಟ್ರೀಯ ವೇದಿಕೆ’ಯ(ಎನ್‌ಪಿಡಿಆರ್‌ಆರ್) 3ನೇ ಅಧಿವೇಶನವನ್ನು ಉದ್ಘಾಟಿಸಲಿದ್ದಾರೆ. ಈ ವೇದಿಕೆಯ 3ನೇ ಅಧಿವೇಶನದ ಮುಖ್ಯ ವಿಷಯವೆಂದರೆ "ಬದಲಾಗುತ್ತಿರುವ ಹವಾಮಾನದಲ್ಲಿ ಸ್ಥಳೀಯ ಸದೃಢತೆಯ ನಿರ್ಮಾಣ".
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ʻಸುಭಾಷ್ ಚಂದ್ರ ಬೋಸ್ ಆಪ್ಡಾ ಪ್ರಬಂಧನ್ ಪುರಸ್ಕಾರ ಪ್ರಶಸ್ತಿʼ ಪುರಸ್ಕೃತರನ್ನು ಸತ್ಕರಿಸಲಿದ್ದಾರೆ. ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಒಎಸ್‌ಡಿಎಂಎ) ಮತ್ತು ಮಿಜೋರಾಂನ ʻಲುಂಗ್ಲೀ ಅಗ್ನಿಶಾಮಕ ಕೇಂದ್ರʼವು 2023ನೇ ಸಾಲಿನ ಈ ಪ್ರಶಸ್ತಿಯ ವಿಜೇತರು. ವಿಪತ್ತು ಅಪಾಯ ತಗ್ಗಿಸುವ ಕ್ಷೇತ್ರದಲ್ಲಿನ ನವೀನ ವಿಚಾರಗಳು ಮತ್ತು ಉಪಕ್ರಮಗಳು, ಸಾಧನಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸುವ ವಸ್ತುಪ್ರದರ್ಶನವನ್ನೂ ಪ್ರಧಾನಿ ಉದ್ಘಾಟಿಸಲಿದ್ದಾರೆ.
ʻಎನ್‌ಪಿಡಿಆರ್‌ಆರ್ʼ ಎಂಬುದು ಸಂವಾದ, ಅನುಭವಗಳು, ದೃಷ್ಟಿಕೋನಗಳು, ಆಲೋಚನೆಗಳು, ಕ್ರಿಯಾ-ಆಧಾರಿತ ಸಂಶೋಧನೆ ಮತ್ತು ವಿಪತ್ತು ಅಪಾಯ ತಗ್ಗಿಸುವ ಕ್ಷೇತ್ರದಲ್ಲಿನ ಅವಕಾಶಗಳನ್ನು ಅನ್ವೇಷಿಸಲು ಅನುಕೂಲವಾಗುವಂತೆ ಭಾರತ ಸರಕಾರವು ರಚಿಸಿದ ಬಹು-ಮಧ್ಯಸ್ಥಗಾರರ ವೇದಿಕೆಯಾಗಿದೆ.