ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ನವೆಂಬರ್ 2ರಂದು ಸಂಜೆ 4.30ಕ್ಕೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 'ಮೂಲಸ್ಥಳದಲ್ಲಿಯೇ ಕೊಳೆಗೇರಿ ಪುನರ್ವಸತಿ' ಯೋಜನೆಯಡಿ ಕಲ್ಕಾಜಿಯಲ್ಲಿ ಕೊಳೆಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ನಿರ್ಮಿಸಲಾದ 3024 ಇಡಬ್ಲ್ಯೂಎಸ್ ಫ್ಲ್ಯಾಟ್ ಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಭೂಮಿಹೀನ್ ಶಿಬಿರದ ಅರ್ಹ ಫಲಾನುಭವಿಗಳಿಗೆ ಕೀಲಿಕೈಗಳನ್ನು ಹಸ್ತಾಂತರಿಸಲಿದ್ದಾರೆ.
ಎಲ್ಲರಿಗೂ ಸೂರು ಒದಗಿಸುವ ಪ್ರಧಾನ ಮಂತ್ರಿಯವರ ಚಿಂತನೆಗೆ ಅನುಗುಣವಾಗಿ, 376 ಜುಗ್ಗಿ ಜೋಪ್ರಿ ಗುಚ್ಛಗಳಲ್ಲಿ ಮೂಲಸ್ಥಳದಲ್ಲಿಯೇ ಕೊಳೆಗೇರಿ ಪುನರ್ವಸತಿಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಕೈಗೆತ್ತಿಕೊಂಡಿದೆ. ಜುಗ್ಗಿ ಜೋಪ್ರಿ ಕ್ಲಸ್ಟರ್ ಗಳ ನಿವಾಸಿಗಳಿಗೆ ಸೂಕ್ತ ಸೌಲಭ್ಯಗಳು ಮತ್ತು ಅನುಕೂಲತೆಗಳೊಂದಿಗೆ ಉತ್ತಮ ಮತ್ತು ಆರೋಗ್ಯಕರ ಜೀವನ ಪರಿಸರವನ್ನು ಒದಗಿಸುವುದು ಪುನರ್ವಸತಿ ಯೋಜನೆಯ ಉದ್ದೇಶವಾಗಿದೆ.
ಕಲ್ಕಾಜಿ ಎಕ್ಸ್ ಟೆನ್ಷನ್, ಜೈಲರ್ ವಾಲಾಬಾಗ್ ಮತ್ತು ಕಥ್ಪುಟ್ಲಿ ಕಾಲೋನಿಯಲ್ಲಿ ಇಂತಹ ಮೂರು ಯೋಜನೆಗಳನ್ನು ಡಿಡಿಎ ಕೈಗೆತ್ತಿಕೊಂಡಿತ್ತು. ಕಲ್ಕಾಜಿ ವಿಸ್ತರಣಾ ಯೋಜನೆಯಡಿ, ಭೂಮಿಹೀನ್ ಕ್ಯಾಂಪ್, ನವಜೀವನ್ ಕ್ಯಾಂಪ್ ಮತ್ತು ಕಲ್ಕಾಜಿಯಲ್ಲಿರುವ ಜವಾಹರ್ ಕ್ಯಾಂಪ್ ಎಂಬ ಮೂರು ಕೊಳೆಗೇರಿ ಗುಚ್ಛಗಳ ಮೂಲಸ್ಥಳದಲ್ಲಿಯೇ ಕೊಳೆಗೇರಿ ಪುನರ್ವಸತಿಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ, ಹತ್ತಿರದ ಖಾಲಿ ವಾಣಿಜ್ಯ ಕೇಂದ್ರದ ನಿವೇಶನದಲ್ಲಿ 3024 ಇಡಬ್ಲ್ಯೂಎಸ್ ಫ್ಲ್ಯಾಟ್ ಗಳನ್ನು ನಿರ್ಮಿಸಲಾಗಿದೆ. ಭೂಮಿಹೀನ್ ಶಿಬಿರದಲ್ಲಿರುವ ಜುಗ್ಗಿ ಜೋಪ್ರಿ ನಿವೇಶನವನ್ನು ಹೊಸದಾಗಿ ನಿರ್ಮಿಸಲಾದ ಇಡಬ್ಲ್ಯೂಎಸ್ ಫ್ಲ್ಯಾಟ್ ಗಳಿಗೆ ಭೂಮಿಹೀನ್ ಶಿಬಿರದ ಅರ್ಹ ಕುಟುಂಬಗಳನ್ನು ಪುನರ್ವಸತಿಗೊಳಿಸುವ ಮೂಲಕ ತೆರವುಗೊಳಿಸಲಾಗುವುದು. ಭೂಮಿಹೀನ್ ಶಿಬಿರವನ್ನು ಸ್ಥಳಾಂತರಿಸಿದ ಬಳಿಕ, ಹಂತ 2 ರಲ್ಲಿ, ಈ ಖಾಲಿ ಜಾಗವನ್ನು ನವಜೀವನ ಶಿಬಿರ ಮತ್ತು ಜವಾಹರ್ ಶಿಬಿರದ ಪುನರ್ವಸತಿಗಾಗಿ ಬಳಸಲಾಗುವುದು.
ಯೋಜನೆಯ ಮೊದಲ ಹಂತ ಪೂರ್ಣಗೊಂಡಿದ್ದು, 3024 ಫ್ಲ್ಯಾಟ್ ಗಳು ಸ್ಥಳಾಂತರಿತರನ್ನು ಸ್ವಾಗತಿಸಲು ಸಿದ್ಧವಾಗಿವೆ. ಈ ಫ್ಲ್ಯಾಟ್ ಗಳನ್ನು ಸುಮಾರು 345 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಿಟ್ರಿಫೈಡ್ ಫ್ಲೋರ್ ಟೈಲ್ಸ್, ಸೆರಾಮಿಕ್ಸ್ ಟೈಲ್ಸ್, ಅಡುಗೆಮನೆಯಲ್ಲಿ ಉದಯಪುರ ಹಸಿರು ಅಮೃತಶಿಲೆಯ ಕೌಂಟರ್ ಇತ್ಯಾದಿಗಳೊಂದಿಗೆ ಫಿನಿಶಿಂಗ್ ಸಹಿತ ಎಲ್ಲ ನಾಗರಿಕ ಸೌಲಭ್ಯಗಳನ್ನು ಈ ಫ್ಲ್ಯಾಟ್ ಗಳು ಹೊಂದಿವೆ. ಸಮುದಾಯ ಉದ್ಯಾನವನಗಳು, ವಿದ್ಯುತ್ ಉಪ ಕೇಂದ್ರಗಳು, ಒಳಚರಂಡಿ ಸಂಸ್ಕರಣಾ ಘಟಕ, ಅವಳಿ ನೀರಿನ ಪೈಪ್ ಲೈನ್ ಗಳು, ಲಿಫ್ಟ್ ಗಳು, ಶುದ್ಧ ನೀರು ಸರಬರಾಜಿಗಾಗಿ ಭೂಗತ ಜಲಾಶಯ ಮುಂತಾದ ಸಾರ್ವಜನಿಕ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. ಫ್ಲ್ಯಾಟ್ ಗಳ ಹಂಚಿಕೆಯು ಜನರಿಗೆ ಮಾಲೀಕತ್ವದ ದಾಖಲೆ ಮತ್ತು ಭದ್ರತೆಯ ಭಾವನೆಯನ್ನು ಒದಗಿಸುತ್ತದೆ.