ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಜನವರಿ 12 ರಂದು ಪುದುಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ 25ನೇ ರಾಷ್ಟ್ರೀಯ ಯುವ ಮಹೋತ್ಸವವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮದಿನವಾದ ಈ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.
ಭಾರತದ ಯುವ ಮನಸ್ಸುಗಳಿಗೆ ಮಾರ್ಗದರ್ಶನ ನೀಡುವುದು ಮತ್ತು ರಾಷ್ಟ್ರ ನಿರ್ಮಾಣದ ಶಕ್ತಿಯಾಗಿ ಅವರನ್ನು ಒಗ್ಗೂಡಿಸುವುದು ಉತ್ಸವದ ಉದ್ದೇಶವಾಗಿದೆ. ಇದು ಸಾಮಾಜಿಕ ಒಗ್ಗಟ್ಟು ಮತ್ತು ಬೌದ್ಧಿಕ ಹಾಗು ಸಾಂಸ್ಕೃತಿಕ ಏಕೀಕರಣದ ದೊಡ್ಡ ಪ್ರಯತ್ನದ ಭಾಗವಾಗಿದೆ. ಭಾರತದ ವೈವಿಧ್ಯಮಯ ಸಂಸ್ಕೃತಿಗಳನ್ನು ಒಟ್ಟುಗೂಡಿಸುವುದು ಮತ್ತು 'ಏಕ್ ಭಾರತ್, ಶ್ರೇಷ್ಠ ಭಾರತ್' ಎಂಬ ಏಕತೆಯಲ್ಲಿ ಅವುಗಳನ್ನು ಒಂದುಗೂಡಿಸುವುದು ಇದರ ಗುರಿಯಾಗಿದೆ.
ಈ ವರ್ಷದ ಕೋವಿಡ್‌ನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜನವರಿ 12-13, 2022 ರಂದು ವರ್ಚುವಲ್ ಮಾಧ್ಯಮದ ಮೂಲಕ ಉತ್ಸವವನ್ನು ಉದ್ಘಾಟಿಸಲಾಗುತ್ತದೆ. ಉದ್ಘಾಟನೆಯ ನಂತರ ರಾಷ್ಟ್ರೀಯ ಯುವ ಶೃಂಗಸಭೆಯು ನಾಲ್ಕು ನಿರ್ದಿಷ್ಟ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಯುವ ಜನರ ಅಭಿವೃದ್ಧಿಗೆ ಅನುಗುಣವಾಗಿ ಮತ್ತು ಭವಿಷ್ಯದ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು ಯುವಕರನ್ನು ಪ್ರೇರೇಪಿಸುವ ವಿಷಯಗಳು ಪರಿಸರ, ಹವಾಮಾನ ಮತ್ತು ಎಸ್‌ಡಿಜಿ ನೇತೃತ್ವದ ಬೆಳವಣಿಗೆಯನ್ನು ಒಳಗೊಂಡಿರುತ್ತದೆ; ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಾವೀನ್ಯತೆ; ಸ್ಥಳೀಯ ಮತ್ತು ಪ್ರಾಚೀನ ಜ್ಞಾನ; ಮತ್ತು ರಾಷ್ಟ್ರೀಯ ಗುಣ, ರಾಷ್ಟ್ರ ನಿರ್ಮಾಣ ಹಾಗು ಸ್ಥಳೀಯ ಉದ್ಯಮಗಳ ಉತ್ತೇಜನ ಒಳಗೊಂಡಿದೆ. ಪುದುಚೇರಿ, ಆರೊವಿಲ್ಲೆ ಹಾಗು ನಗರಗಳ ದೈನಂದಿನ ಜೀವನ, ಸ್ಥಳೀಯ ಕ್ರೀಡೆಗಳು ಮತ್ತು ಜಾನಪದ ನೃತ್ಯಗಳು ಇತ್ಯಾದಿಗಳ ಕುರಿತು ರೆಕಾರ್ಡ್ ಮಾಡಿದ ವೀಡಿಯೊ ಕ್ಯಾಪ್ಸುಲ್‌ಗಳನ್ನು ಉತ್ಸವದ ಸಮಯದಲ್ಲಿ ಭಾಗವಹಿಸುವವರಿಗೆ ತೋರಿಸಲಾಗುತ್ತದೆ. ಸಂಜೆ ನೇರ ಪ್ರದರ್ಶನಗಳ ನಂತರ ಒಲಿಂಪಿಯನ್ ಮತ್ತು ಪ್ಯಾರಾಲಿಂಪಿಯನ್‌ಗಳೊಂದಿಗೆ ಮುಕ್ತ ಚರ್ಚೆಗಳು ಸಹ ನಡೆಯಲಿವೆ. ಬೆಳಗ್ಗೆ ವರ್ಚುವಲ್ ಯೋಗ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ, ಪ್ರಧಾನ ಮಂತ್ರಿಯವರು “ಮೇರೆ ಸಪ್ನೋ ಕಾ ಭಾರತ್” ಮತ್ತು “ಅನ್ಸಂಗ್ ಹೀರೋಸ್ ಆಫ್ ಇಂಡಿಯನ್ ಫ್ರೀಡಂ ಮೂವ್ ಮೆಂಟ್ ಕುರಿತ ಆಯ್ದ ಪ್ರಬಂಧಗಳನ್ನು ಬಿಡುಗಡೆ ಮಾಡಲಿದ್ದಾರೆ . ಈ ಪ್ರಬಂಧಗಳನ್ನು ಎರಡು ವಿಷಯಗಳ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ಸಲ್ಲಿಸಿದ ಲೇಖನಗಳಿಂದ ಆಯ್ಕೆ ಮಾಡಲಾಗಿದೆ.
ಸುಮಾರು 122 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಪುದುಚೇರಿಯಲ್ಲಿ ಸ್ಥಾಪಿಸಲಾದ ಎಂಎಸ್‌ಎಂಇ ಸಚಿವಾಲಯದ ತಂತ್ರಜ್ಞಾನ ಕೇಂದ್ರವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಇಎಸ್‌ಡಿಎಮ್) ವಲಯವನ್ನು ಗಮನದಲ್ಲಿರಿಸಿ, ಈ ತಂತ್ರಜ್ಞಾನ ಕೇಂದ್ರವು ಇತ್ತೀಚಿನ ತಂತ್ರಜ್ಞಾನದೊಂದಿಗೆ ಸುಸಜ್ಜಿತವಾಗಿದೆ. ಇದು ಯುವಕರಿಗೆ ಕೌಶಲ್ಯ ಶಿಕ್ಷಣವನ್ನು ನೀಡುತ್ತದೆ ಮತ್ತು ವರ್ಷಕ್ಕೆ ಸುಮಾರು 6400 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲು ಸಾಧ್ಯವಾಗುತ್ತದೆ.
ಪುದುಚೇರಿ ಸರ್ಕಾರವು ಸುಮಾರು 23 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಪೆರುಂತಲೈವರ್ ಕಾಮರಾಜರ್ ಮಣಿಮಂಡಪಮ್ - ಬಯಲು ರಂಗಮಂದಿರವನ್ನು ಹೊಂದಿರುವ ಸಭಾಂಗಣವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಇದನ್ನು ಮುಖ್ಯವಾಗಿ ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಮತ್ತು ಇದು 1000 ಕ್ಕೂ ಹೆಚ್ಚು ವ್ಯಕ್ತಿಗಳು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.