ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 25 ರಂದು ಬೆಳಗ್ಗೆ 11 ಗಂಟೆಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಡೆಹ್ರಾಡೂನ್ - ದೆಹಲಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಉದ್ಘಾಟನಾ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.
ಇದು ಉತ್ತರಾಖಂಡದಲ್ಲಿ ಪರಿಚಯಿಸಲಾಗುತ್ತಿರುವ ಮೊದಲ ವಂದೇ ಭಾರತ್ ರೈಲಾಗಿದೆ. ವಿಶ್ವ ದರ್ಜೆಯ ಸೌಕರ್ಯಗಳೊಂದಿಗೆ, ಇದು ಆರಾಮದಾಯಕ ಪ್ರಯಾಣದ ಅನುಭವದ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ, ವಿಶೇಷವಾಗಿ ರಾಜ್ಯಕ್ಕೆ ಪ್ರಯಾಣಿಸುವ ಪ್ರವಾಸಿಗರಿಗೆ ಪ್ರಯೋಜನವಾಗುತ್ತದೆ. ಈ ರೈಲನ್ನು ದೇಶೀಯವಾಗಿ ನಿರ್ಮಿಸಲಾಗಿದೆ ಮತ್ತು ಕವಚ್ ತಂತ್ರಜ್ಞಾನ ಸೇರಿದಂತೆ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಸಾರ್ವಜನಿಕ ಸಾರಿಗೆಯ ಸ್ವಚ್ಛ ವಿಧಾನಗಳನ್ನು ಒದಗಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿಯಿಂದ ಮಾರ್ಗದರ್ಶಿಸಲಾದ ಭಾರತೀಯ ರೈಲ್ವೇಯು ದೇಶದಲ್ಲಿ ರೈಲು ಮಾರ್ಗವನ್ನು ಸಂಪೂರ್ಣವಾಗಿ ವಿದ್ಯುದ್ದೀಕರಿಸುವ ಹಾದಿಯಲ್ಲಿದೆ. ಈ ದಿಕ್ಕಿನಲ್ಲಿ ಮುಂದುವರಿಯುತ್ತಾ, ಪ್ರಧಾನ ಮಂತ್ರಿಯವರು ಉತ್ತರಾಖಂಡದಲ್ಲಿ ಹೊಸದಾಗಿ ವಿದ್ಯುದ್ದೀಕರಿಸಿದ ರೈಲು ಮಾರ್ಗ ವಿಭಾಗಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಇದರೊಂದಿಗೆ ರಾಜ್ಯವು ತನ್ನ ಸಂಪೂರ್ಣ ರೈಲು ಮಾರ್ಗವನ್ನು ಶೇ.100 ರಷ್ಟು ವಿದ್ಯುದ್ದೀಕರಣಗೊಳಿಸಿದಂತಾಗುತ್ತದೆ. ವಿದ್ಯುದ್ದೀಕರಿಸಿದ ವಿಭಾಗಗಳಲ್ಲಿ ವಿದ್ಯುತ್ ನಿಂದ ಚಲಿಸುವ ರೈಲುಗಳು ತಮ್ಮ ವೇಗವನ್ನು ಹೆಚ್ಚಿಸುತ್ತವೆ ಮತ್ತು ಎಳೆತದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತವೆ.